ಮೈಸೂರು: ಪಠ್ಯಕ್ರಮದಲ್ಲಿ ಭಗವದ್ಗೀತೆ ಸೇರಿಸುವ ವಿಚಾರದ ಯಾವ ಪ್ರಸ್ತಾಪವೂ ಸರಕಾರದ ಮುಂದೆ ಇಲ್ಲ. ಪ್ರಸ್ತಾಪವೇ ಇಲ್ಲವೆಂದ ಮೇಲೆ ಚರ್ಚೆ ಯಾಕೆ? ಈ ಬಗ್ಗೆ ಶಿಕ್ಷಣ ಸಚಿವರೇ ಸ್ಪಷ್ಟಪಡಿಸಿದ್ದಾರೆ. ಉಳಿದ ವಿಚಾರ ನನಗೆ ಗೊತ್ತಿಲ್ಲ ಎಂದು ಕಾನೂನು ಸಚಿವ ಜೆ ಸಿ ಮಾಧುಸ್ವಾಮಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದನವನ್ನು ಈ ವಾರ ಮೊಟಕುಗೊಳಿಸುವುದಿಲ್ಲ. ಮಾರ್ಚ್ 30 ರವರೆಗೆ ಅಧಿವೇಶನ ನಡೆಯುತ್ತದೆ. ಯಾವುದೇ ಕಾರಣಕ್ಕೂ ಸದನ ಮೊಟಕು ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
‘ಕಾಶ್ಮೀರ ಫೈಲ್ಸ್’ ಚಿತ್ರ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ನಾನು ಚಿತ್ರ ನೋಡಿದ್ದೇನೆ. ನೋಡುವುದು ನಮ್ಮ ಇಷ್ಟ, ನೋಡದೆ ಇರುವುದು ಕಾಂಗ್ರೆಸ್ ನ ಇಷ್ಟ. ಯಾರನ್ನು ಚಿತ್ರ ನೋಡಿ ಎಂದು ಬಲವಂತ ಮಾಡಲಾಗಲ್ಲ. ಇತಿಹಾಸದಲ್ಲಿ ಏನು ನಡೆದಿದೆ ಎಂಬುದನ್ನು ಜನರಿಗೆ ಹೇಳಬೇಕು. ಈ ಕೆಲಸವನ್ನು ಈ ಚಿತ್ರ ಮಾಡಿದೆ. ಅದರಲ್ಲಿ ತಪ್ಪೇನಿದೆ?.ಒಂದು ಸಮುದಾಯದ ವಿರುದ್ದದ ಸಿನಿಮಾ ಇದು ಎಂದು ಹೇಳುವುದರಲ್ಲಿ ಅರ್ಥವಿಲ್ಲ. ಹಾಗದರೆ ನಡೆದ ಘಟನಾವಳಿಗಳನ್ನು ಜನರಿಗೆ ತಿಳಿಸುವುದೆ ಬೇಡವೇ ಎಂದರು.
ಇದನ್ನೂ ಓದಿ:ಬೆದರಿಕೆ ಹಿನ್ನೆಲೆ: ಹಿಜಾಬ್ ತೀರ್ಪು ನೀಡಿದ ನ್ಯಾಯಾಧೀಶರಿಗೆ ‘ವೈ’ ವರ್ಗದ ಭದ್ರತೆ
ಮರು ಪರೀಕ್ಷೆಯಿಲ್ಲ: ಹಿಜಾಬ್ ಗೆ ಪಟ್ಟು ಹಿಡಿದು ಪರೀಕ್ಷೆಗೆ ಗೈರು ಹಾಜರಾದರೆ ಅವರಿಗೆ ಮರು ಪರೀಕ್ಷೆಯಿಲ್ಲ. ಈ ವಿಚಾರದಲ್ಲಿ ಸರಕಾರದ ನಿಲುವಿನಲ್ಲಿ ಯಾವುದೇ ಬದಲಾವಣೆಯಿಲ್ಲ. ಹೈಕೋರ್ಟ್ ಆದೇಶ ಚಾಚೂ ತಪ್ಪದೆ ಪಾಲಿಸುವುದು ಸರಕಾರದ ಕರ್ತವ್ಯ. ಈ ಕರ್ತವ್ಯದಲ್ಲಿ ವಿಫಲರಾಗಿ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳಲು ನಾವು ಸಿದ್ದರಿಲ್ಲ ಎಂದು ಸಚಿವ ಮಾಧುಸ್ವಾಮಿ ಹೇಳಿದರು.