Advertisement

ಸರ್ಕಾರದ ನಿರ್ಲಕ್ಷ್ಯ: ನೇಕಾರರ ಬದುಕು ಅತಂತ್ರ

09:45 PM Jun 11, 2019 | Team Udayavani |

ನೆಲಮಂಗಲ: ತಾಲೂಕಿನ ತ್ಯಾಮಗೊಂಡ್ಲು ಮತ್ತು ಕುದೂರು ಗ್ರಾಮಗಳಲ್ಲಿರುವ ಕೈಮಗ್ಗಗಳಿಗೆ ಕರ್ನಾಟಕ ಕೈಮಗ್ಗ ಅಭಿವೃದ್ಧಿ ನಿಗಮ(ಕೆಎಚ್‌ಡಿಸಿ), 2 ತಿಂಗಳಿಂದ ಸಮರ್ಪಕವಾಗಿ ನೂಲು ಪೂರೈಕೆ ಮಾಡುತ್ತಿಲ್ಲ. ಹೀಗಾಗಿ ಕೈಮಗ್ಗವನ್ನೇ ನೆಚ್ಚಿಕೊಂಡು ಬದುಕುತ್ತಿರುವ ನೇಕಾರರ ಬದುಕು ಮೂರಾಬಟ್ಟೆಯಾಗುವ ಹಂತಕ್ಕೆ ತಲುಪಿದೆ.

Advertisement

ಇದರಿಂದಾಗಿ ದುಡಿಯುವ ರಟ್ಟೆಗೆ ಕೆಲಸವಿಲ್ಲ, ಹೊಟ್ಟೆಗೆ ಹಿಟ್ಟಿಲ್ಲದಂತಾಗಿದೆ. ಕೆಲಸವಿಲ್ಲದೆ ಬದುಕು ಅತಂತ್ರವಾದರೆ, ಇತ್ತ ಉಪಕರಣಗಳು ದೂಳು ಹಿಡಿಯುತ್ತಿವೆ. ಇಲ್ಲಿನ ಬಹುತೇಕ ಕುಟುಂಬಗಳು ಒಬ್ಬರ ದುಡಿತವನ್ನೆ ನಚ್ಚಿಕೊಂಡಿದ್ದು, ತಿಂಗಳ ಅಂತ್ಯದಲ್ಲಿ ದೊರೆಯುತ್ತಿದ್ದ 2500ರಿಂದ 3000 ಆದಾಯಕ್ಕೂ ಈಗ ಕುತ್ತು ಬಂದಿದೆ.

ವೇತನ ಸ್ಥಗಿತ: ತ್ಯಾಮಗೊಂಡ್ಲು ಮತ್ತು ಕುದೂರು ಗ್ರಾಮಗಳಲ್ಲಿ ಕಳೆದ ವರ್ಷ 150ಕ್ಕೂ ಹೆಚ್ಚು ಕೈಮಗ್ಗದ ನೇಕಾರರು ಕೆಲಸ ಮಾಡುತ್ತಿದ್ದರು. ಅದರೆ ಕಳೆದ ಒಂದು ವರ್ಷದಿಂದ ಸರಿಯಾದ ಸಮಯಕ್ಕೆ ವೇತನ ಮತ್ತು ನೂಲು ಪೂರೈಕೆಯಾದ ಕಾರಣ 90ಕ್ಕೂ ಹೆಚ್ಚು ಜನ ನೇಕಾರಿಕೆಯನ್ನು ಬಿಟ್ಟು ಕೈಗಾರಿಕೆಗಳಲ್ಲಿ ಕೆಲಸ ಮಾಡುತ್ತ ಜೀವನ ನಡೆಸುತ್ತಿದ್ದಾರೆ. ಉಳಿದಿರುವ 45 ಜನ ನೇಕಾರರಿಗೆ ಸಮಯಕ್ಕೆ ಸರಿಯಾಗಿ ವೇತನ ಸಿಗುತ್ತಿಲ್ಲ. ಇದ್ದರಿಂದ ಅವರ ಬದುಕು ಅತಂತ್ರವಾಗಿದೆ.

ಸರ್ಕಾರವೇ ಕಣ್ಮುಚ್ಚಿ ಕುಳಿತಿದೆ: ಕಳೆದ ಒಂದು ವರ್ಷದಿಂದ ಕೈಮಗ್ಗ ನಿಗಮ ಮಂಡಳಿಗೆ ಮುಖ್ಯಸ್ಥರನ್ನು ನೇಮಕ ಮಾಡದೇ ಅಡಳಿತವನ್ನು ಮುಖ್ಯಮಂತ್ರಿಯವರೆ ನಡೆಸುತ್ತಿದ್ದರು. ಆದರೆ ಪ್ರಯೋಜನವಾಗಿಲ್ಲ. ಸಿಎಂ ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದ ದಿನದಿಂದಲೇ ನೇಕಾರರ ಬದುಕು ಬೀದಿಗೆ ಬಂದಿದೆ. ಸಮಯಕ್ಕೆ ಸರಿಯಾಗಿ ಕಚ್ಚಾ ಪದಾರ್ಥಗಳು ಪೂರೈಕೆಯಾಗುತ್ತಿಲ್ಲ. ಮಾಡಿದ ಕೆಲಸಕ್ಕೆ ಕೂಲಿಯನ್ನೂ ನೀಡುತ್ತಿಲ್ಲ.

ಈ ಸಂಬಂಧ ರಾಜ್ಯಮಟ್ಟದಲ್ಲಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ರೈತರು ಸಾಲದ ಹೊರೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವ ರೀತಿಯಲ್ಲಿಯೇ ನೇಕಾರರು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂಬಂಧ ಸರ್ಕಾರಕ್ಕೆ ಮಾಹಿತಿ ಇದ್ದರೂ ಕಣ್ಮುಚ್ಚಿ ಕುಳಿತಿದೆ ಎಂದು ನೇಕಾರರು ಅಕ್ರೋಶ ವ್ಯಕ್ತಪಡಿಸಿದರು.

Advertisement

ಮಕ್ಕಳ ವಿದ್ಯಾಭ್ಯಾಸಕ್ಕೆ ಕುತ್ತು: ಕೈಮಗ್ಗದ ಆದಾಯದಿಂದಲೇ ಜೀವನ ನಡೆಸುತ್ತಿರುವ ನೇಕಾರರ ಬದುಕು ಅಕ್ಷರ ಸಹ ಬೀದಿಗೆ ಬೀಳುವ ಹಂತದಲ್ಲಿದೆ. ಏಪ್ರಿಲ್‌ ಮತ್ತು ಜೂನ್‌ ತಿಂಗಳಲ್ಲಿ ಮಕ್ಕಳನ್ನು ಶಾಲೆಗೆ ದಾಖಲಿಸಬೇಕಾಗುತ್ತದೆ. ಅದರೆ ಈ ಬಾರಿ ಸಕಾಲಕ್ಕೆ ಕೆಲಸವೂ ಇಲ್ಲ, ಮಾಡಿದ ಕೆಲಸಕ್ಕೆ ಕೂಲಿಯೂ ಸಿಗದೇ ಜೀವನ ಸಾಗಿಸುವುದೇ ಕಷ್ಟವಾಗಿ ಇನ್ನೂ ಮಕ್ಕಳ ವಿದ್ಯಾಭ್ಯಾಸಕ್ಕು ಕುತ್ತು ಬಂದಿದೆ.

ಪ್ರೋತ್ಸಾಹ ಧನ ಸ್ಥಗಿತ: ಸಿದ್ದರಾಮಯ್ಯ ಮತ್ತು ಯಡಿಯೂರಪ್ಪನವರ ಸರ್ಕಾರದಲ್ಲಿ ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ನೀಡುತ್ತಿರುವ ಲೀಟರ್‌ಹಾಲಿಗೆ 5 ರೂ ಪ್ರೋತ್ಸಹ ಧನದಂತೆ ಕೈಮಗ್ಗದ ನೇಕಾರರಿಗೂ ಸೀರೆಗಳ ಮೌಲ್ಯದ ಆಧಾರದ ಮೇಲೆ 15 ರಿಂದ 30 % ಪ್ರೋತ್ಸಹ ಧನ ಸಿಗುತಿತ್ತು. ಅದರೆ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದ ಕ್ಷಣದಿಂದ ಪ್ರೋತ್ಸಹ ಧನವೂ ಸ್ಥಗಿತವಾಗಿದೆ ಎಂದು ನೇಕಾರರು ಬೇಸರ ವ್ಯಕ್ತಪಡಿಸಿದರು.

ನಮ್ಮ ಬದುಕು ಬೀದಿಗೆ ಬೀಳುವ ಆತಂಕದಲ್ಲಿದೆ. ಸಮಯಕ್ಕೆ ಸರಿಯಾಗಿ ಕೂಲಿ ಮತ್ತು ನೂಲು ಪೂರೈಕೆಯಾಗುತ್ತಿಲ್ಲ. ಈ ಸಂಬಂಧ ಹಲವು ಬಾರಿ ಪ್ರತಿಭಟನೆ ನಡೆಸಿದರೂ ಪ್ರಯೋಜನವಾಗಿಲ್ಲ. ಉತ್ಪಾದನಾ ವ್ಯವಸ್ಥಾಪಕ ಚಂದ್ರಶೇಖರ್‌, ನಮ್ಮ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಹಣ ಬಿಡುಗಡೆಗೊಳಿಸುವಲ್ಲಿ ವಿಳಂಬ ಮಾಡುತ್ತಿದ್ದು, ಅವರನ್ನು ವರ್ಗಾವಣೆಗೊಳಿಸಬೇಕು. ಅಲ್ಲದೆ ಸಮಸ್ಯೆಗಳಿಗೆ ಸ್ಪಂದಿಸಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಲಾಗುವುದು.
-ಹೊನ್ನರಾಜು, ಕುದೂರು ಕೈಮಗ್ಗ ನೇಕಾರ

Advertisement

Udayavani is now on Telegram. Click here to join our channel and stay updated with the latest news.

Next