ಮಹಾನಗರ: ಮಂಗಳೂರು- ಕಾರವಾರ ಕಡಲ ತೀರದ ಮೀನುಗಾರಿಕಾ ರಸ್ತೆಯನ್ನು ದ್ವಿಪಥ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸುವ ಯೋಜನೆ ಸರಕಾರದ ಮೌನದಿಂದಾಗಿ ಕಡತದಲ್ಲಿಯೇ ಬಾಕಿಯಾಗಿದೆ. ರಾಷ್ಟ್ರೀಯ ಭದ್ರತೆ, ಮೀನುಗಾರಿಕೆ ಹಾಗೂ ಪ್ರವಾಸೋದ್ಯಮದ ದೃಷ್ಟಿಯಲ್ಲಿ ಮಹತ್ವದ ಯೋಜನೆ. ಮೂರು ಜಿಲ್ಲೆಗಳನ್ನು ಸಂಧಿಸುವ ಈ ಯೋಜನೆಗೆ ಸರಕಾರ ಮನಸ್ಸು ಮಾಡಿಲ್ಲ.
ತಲಪಾಡಿ ಗಡಿಯಿಂದ ಉತ್ತರ ಕನ್ನಡ ಜಿಲ್ಲೆಯ ಮಾಜಾಳಿವರೆಗೆ ಸುಮಾರು 387 ಕಿ.ಮೀ. ಉದ್ದದ ಮೀನುಗಾರಿಕಾ ರಸ್ತೆಯನ್ನು 780 ಕೋ.ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆಯನ್ನಾಗಿ ಪರಿವರ್ತಿಸುವ ಸಾಧ್ಯತಾ ವರದಿಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರವು 2012ರಲ್ಲಿ ಸರಕಾರಕ್ಕೆ ಸಲ್ಲಿಸಿತ್ತು.
ಪ್ರಾಧಿಕಾರ ಆ ಬಳಿಕ ನೆನಪಿಸುವ ಕೆಲಸ ಮಾಡಿತ್ತಾದರೂ, ಬೆನ್ನು ಹಿಡಿಯುವ ಕೆಲಸ ನಡೆಸಲಿಲ್ಲ. ಹೀಗಾಗಿ 6 ವರ್ಷಗಳಿಂದ ಈ ಕಡತ ಬೆಂಗಳೂರಿನ ಆಡಳಿತ ಕಚೇರಿಯಲ್ಲಿಯೇ ಧೂಳು ಹಿಡಿದಿದೆ. ಮಂಗಳೂರು- ಉಡುಪಿ- ಕಾರವಾರ ಕಡಲ ಕಿನಾರೆಯ ಉದ್ದಕ್ಕೂ ಪ್ರಸ್ತುತ ಮೀನುಗಾರಿಕೆ ರಸ್ತೆ ಇದ್ದು ರಾಷ್ಟ್ರೀಯ ಹೆದ್ದಾರಿಗೆ ಸಮಾನಾಂತರವಾಗಿ ಹಾಗೂ ಕೆಲವು ಕಡೆ ಕೊಂಡಿ ರಸ್ತೆಯಾಗಿ ಕಾರ್ಯನಿರ್ವಹಿಸುತ್ತಿದೆ. ಆದರೆ ಇದು ಕಿರಿದಾಗಿದ್ದು, ಪ್ರತಿ ಮಳೆಗಾಲದಲ್ಲಿಯೂ ನೆರೆಹಾವಳಿಯಿಂದ ತೀವ್ರವಾಗಿ ಹದಗೆಡುವುದರಿಂದ ಅದನ್ನು ಉಪಯೋಗಿಸುತ್ತಿರುವ ಮೀನುಗಾರ ಕುಟುಂಬಗಳು, ಸ್ಥಳೀಯರು ಸಾಕಷ್ಟು ಸಂಕಟ ಅನುಭವಿಸಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಪ್ರಾಧಿಕಾರವು ಸಾಧ್ಯತಾ ವರದಿ ಸಿದ್ಧಪಡಿಸಿತ್ತು.
ದ.ಕ., ಉಡುಪಿಯ 259 ಕಿ.ಮೀ.
ದ. ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಒಟ್ಟು 259.96 ಕಿ.ಮೀ. ರಸ್ತೆಗೆ 610 ಕೋ. ರೂ. ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 127 ಕಿ.ಮೀ. ರಸ್ತೆಗೆ 170 ಕೋ.ರೂ. ವೆಚ್ಚವಾಗಲಿದೆ ಎಂದು ಪ್ರಾಧಿಕಾರವು ಅಂದು ಅಂದಾಜಿಸಿ ಪ್ರಸ್ತಾವನೆ ಸಿದ್ಧಪಡಿಸಿ ಸರಕಾರಕ್ಕೆ ಕಳುಹಿಸಿತ್ತು.
ವರದಿ ಸರಕಾರದ ಮಟ್ಟದಲ್ಲಿದೆ
ಕರಾವಳಿಯ ಕಡಲ ತೀರದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಿಸುವ ಕುರಿತ ಸಾಧ್ಯತಾ ವರದಿಯನ್ನು ಪ್ರಾಧಿಕಾರದ ವತಿಯಿಂದ ಕಳುಹಿಸಲಾಗಿದ್ದು, ಸರಕಾರದ ಪರಿಶೀಲನೆಯಲ್ಲಿದೆ.
– ಪ್ರದೀಪ್ ಡಿ’ಸೋಜಾ,
ಕಾರ್ಯದರ್ಶಿ, ಕರಾವಳಿ ಅಭಿವೃದ್ಧಿ
ಪ್ರಾಧಿಕಾರ
ದಿನೇಶ್ ಇರಾ