ನಂಜನಗೂಡು: ತಾಲೂಕಿನ ಕಾಡಂಚಿನ ಈರೇಗೌಡನ ಹುಂಡಿಯ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕಡೆಗೂ ಕಾಯಕಲ್ಪ ಭಾಗ್ಯ ಲಭಿಸಿದೆ. ಆಸ್ಪತ್ರೆಯ ಹಾಸಿಗೆ ಮೇಲೆಯೇ ಮೇಲ್ಛಾವಣಿಯ ಸಿಮೆಂಟ್ ಉದುರುತ್ತಿತ್ತು. ಆಗಲೋ ಈಗಲೋ ಧರೆಗುರುಳುವ ಸ್ಥಿತಿಗೆ ತಲುಪಿರುವ ಸಜ್ಜಾಕ್ಕೆ ಕಂಬ ಕೊಟ್ಟು ನಿಲ್ಲಿಸಲಾಗಿತ್ತು.
ಆಸ್ಪತ್ರೆಗೆ ರೋಗಿಗಳು ಬರಲು ಭಯ ಪಡುತ್ತಿದ್ದರು. ಈ ಆಸ್ಪತ್ರೆ ಅವ್ಯವಸ್ಥೆ ಕುರಿತು ಉದಯವಾಣಿಯಲ್ಲಿ ಅ.5ರಂದು “ಆಸ್ಪತ್ರೆ ಹಾಸಿಗೆ ಮೇಲೆಯೇ ಬೀಳ್ತಿದೆ ತಾರಸಿ ಸಿಮೆಂಟ್’ ಶೀರ್ಷಿಕೆಯಡಿ ವರದಿ ಪ್ರಕಟಿಸಿ, ಬೆಳಕು ಚೆಲ್ಲಲಾ ಗಿತ್ತು. ಇದಕ್ಕೆ ಟಿವಿಎಸ್ ಕಂಪನಿಯ ಸೇವಾ ಟ್ರಸ್ಟ್ ಸ್ಪಂದಿಸಿದ್ದು, ಆಸ್ಪತ್ರೆ ದುರಸ್ತಿಗೆ ಮುಂದಾಗಿದೆ.
ಮೈಸೂರು ತಾಲೂಕಿನ ಸಿಂಧುವಳ್ಳಿ ಬಳಿ ಕಾರ್ಯನಿರ್ವಹಿಸುತ್ತಿರುವ ಟಿವಿಎಸ್ ಮೋಟಾರು ಕಂಪನಿಯ ಅಂಗಸಂಸ್ಥೆಯಾದ ಟಿ.ವಿ.ಶ್ರೀನಿವಾಸ್ ಸೇವಾಟ್ರಸ್ಟ್‌ನಿಂದ ತಾಲೂಕಿನ ಕಾಡಂಚಿನ ಗ್ರಾಮ ಈರೇಗೌಡನಹುಂಡಿಯ ಸರ್ಕಾರಿ ಹೆರಿಗೆ ಆಸ್ಪತ್ರೆಗೆ ಕಾಯಕಲ್ಪ ಮಾಡಲು ಸಿದ್ಧತೆ ನಡೆಸಲಾಗಿದೆ. ಸಂಸ್ಥೆಯ ನುರಿತ ಎಂಜಿನಿಯರ್‌ಗಳು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದುರಸ್ತಿ ಕಾರ್ಯಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸಿದ್ದಾರೆ.
ಶೀಘ್ರದಲ್ಲೇ ಹೆರಿಗೆ ಆಸ್ಪತ್ರೆಗೆ ಕಾಯಕಲ್ಪ ನೀಡಲಾಗುವುದು ಎಂದು ಸಂಸ್ಥೆಯ ಮುಖ್ಯಸ್ಥರು ಉದಯವಾಣಿಗೆ ತಿಳಿಸಿದ್ದಾರೆ. ಆಸ್ಪತ್ರೆ ಮೇಲ್ಛಾವಣಿ ಶಿಥಲಗೊಂಡಿದ್ದು, ತರಸಿಯ ಸಿಮೆಂಟ್, ಪ್ಲಾಸ್ಟರ್ ಬೆಡ್‌ಗಳ ಮೇಲೆಯೇ ಬೀಳುತ್ತಿದೆ. ಜೊತೆಗೆ ಸಜ್ಜಾ ಕೂಡ ನೆಲಕಚ್ಚುವಂತಿದೆ. ಈ ಆಸ್ಪತ್ರೆ ಕಟ್ಟಡ ದುರಸ್ತಿಗಾಗಿ ಪ್ರಾಥಮಿಕವಾಗಿ 1.70 ಲಕ್ಷ ರೂ. ಅಂದಾಜು ಪಟ್ಟಿ ಸಿದ್ಧಪಡಿಸಲಾಗಿದೆ. ಕಾಮಗಾರಿ ಪ್ರಾರಂಭವಾದ ನಂತರ ಅಂದಾಜು ಪಟ್ಟಿ ತುಸು ವ್ಯತ್ಯಾಯ ಆಗಬಹುದು. ಆದರೆ, ಎಷ್ಟೇ ವೆಚ್ಚವಾದರೂ ಅದನ್ನು ಮಾಡಿಯೇ ತೀರುತ್ತೇವೆ. ರೋಗಿಗಳು ಆಸ್ಪತ್ರೆಗೆ ಬರಲು ಪೂರಕ ವಾತಾವರಣ ಕಲ್ಪಿಸುತ್ತೇವೆ ಎಂದು ಟಿ.ವಿ.ಶ್ರೀನಿವಾಸ್ ಸೇವಾ ಟ್ರಸ್ಟ್ ಭರವಸೆ ನೀಡಿದೆ.
ಇದನ್ನೂ ಓದಿ:- ಸಿನಿ ರಸಿಕರ ಗಮನ ಸೆಳೆದ ‘ಗರುಡ ಗಮನ, ವೃಷಭ ವಾಹನ’ ಟ್ರೈಲರ್
ಹೆರಿಗೆ ಆಸ್ಪತ್ರೆಯಿಂದ 22 ಗ್ರಾಮಗಳಿಗೆ ಅನುಕೂಲ-
ತಾಲೂಕು ಕೇಂದ್ರದಿಂದ ಸುಮಾರು 35 ಕಿ.ಮೀ. ದೂರವಿರುವ ಈರೇಗೌಡನಹುಂಡಿಯಲ್ಲಿ ಈ ಭಾಗದ 22 ಗ್ರಾಮಗಳ ಜನರಿಗೆ ಅನುಕೂಲ ಆಗುವಂತೆ 1988ರಲ್ಲಿ ಸರ್ಕಾರಿ ಹೆರಿಗೆ ಆಸ್ಪತ್ರೆ ನಿರ್ಮಿಸಲಾಗಿತ್ತು. ಇದು ನೂರಾರು ವರ್ಷದ ಕಟ್ಟಡವಲ್ಲ.
ಹೆಚ್ಚೆಂದರೆ 30-33 ವರ್ಷ ಆಗಿರಬಹುದು. ಒಮ್ಮೆ ದುರಸ್ತಿ ಮಾಡಿಸಲಾಗಿದೆ ಎಂದು ದಾಖಲೆಯಲ್ಲಿ ನಮೂದಾಗಿ ದ್ದರೂ ಕಟ್ಟಡ ಮಾತ್ರ ಬೀಳುವ ಸ್ಥಿತಿಯಲ್ಲಿದೆ. ಮೂರು ವರ್ಷಗಳ ಹಿಂದೆ ಇದೇ ಆಸ್ಪತ್ರೆಯ ದುರಸ್ತಿಗಾಗಿ ಹಣ ಖರ್ಚು ಮಾಡಿದ್ದರ ಬಗ್ಗೆ ದಾಖಲೆ ಕೂಡ ಇದೆ. ಆದರೆ ದುರಸ್ತಿ ಮಾತ್ರ ಆದ ಹಾಗೆ ಕಾಣುತ್ತಿಲ್ಲ.