ಗ್ವಾಲಿಯರ್: ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕಾಗಿ ಭಾರತ ಸರ್ಕಾರ ವಿಶೇಷ ಕಾರ್ಯತಂತ್ರ ರೂಪಿಸುತ್ತಿದೆ ಎಂಬ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಹೇಳಿಕೆಯನ್ನು ಕೇಂದ್ರ ಸಚಿವ ಮತ್ತು ನಿವೃತ್ತ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ಪುನರುಚ್ಚರಿಸದ್ದಾರೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ರಾಜ್ಯ ಸಚಿವ ವಿ.ಕೆ ಸಿಂಗ್ ಗ್ವಾಲಿಯರ್ ನಲ್ಲಿ ಮಾತನಾಡಿ, ಪಿಓಕೆಯಲ್ಲಿ ಸೇನೆ ಯಾವಾಗಲೂ ಸಿದ್ಧವಾಗಿದೆ. ಆದರೆ ಕೇಂದ್ರದ ಆದೇಶಕ್ಕಾಗಿ ಕಾಯುತ್ತಿದ್ದೇವೆ. ಸೇನೆಯ ತಂತ್ರಗಳನ್ನು ಸಾರ್ವಜನಿಕರೆದುರು ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದರು.
ಇದಕ್ಕೂ ಮೊದಲು ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಪಾಕಿಸ್ತಾನಕ್ಕೆ ಬಲವಾದ ಸಂದೇಶವನ್ನು ರವಾನಿಸಿದ್ದರು. ಪಿಓಕೆ ಕುರಿತು ಕೇಂದ್ರ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಅದರ ಆದೇಶದಂತೆ ದೇಶದ ಸಂಸ್ಥೆಗಳು ಕಾರ್ಯನಿರ್ವಹಿಸುತ್ತದೆ. ಆದರೆ ಯಾವುದೇ ಸನ್ನಿವೇಶಕ್ಕೂ ಸೈನ್ಯ ಸಿದ್ಧವಿದೆ ಎಂದು ಒತ್ತಿ ಹೇಳಿದ್ದರು.
ಕಾಶ್ಮೀರಿಗಳು ಹಲವು ವರ್ಷಗಳಿಂದ ಭಯೋತ್ಪಾದನೆಯ ಭೀತಿಯನ್ನು ಎದುರಿಸುತ್ತಿದ್ದಾರೆ. ಅದರೂ ಈ ಪ್ರದೇಶದ ಜನ ಶಾಂತಿ ಸುರಕ್ಷತೆಯನ್ನು ಕಾಪಾಡಿಕೊಳ್ಳಲ್ಲು ಸೈನ್ಯಕ್ಕೆ ಸಹಾಯ ಮಾಡಬೇಕು. ಅದರ ಜೊತೆಗೆ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ಸರ್ಕಾರಕ್ಕೆ ಸಹಾಯ ಮಾಡಬೇಕು ಎಂದು ತಿಳಿಸಿದ್ದರು.
ಈ ಹಿಂದೆ ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಮಾತನಾಡಿ, ಪಾಕ್ ಆಕ್ರಮಿತ ಕಾಶ್ಮೀರವನ್ನು ಹಿಂಪಡೆದು, ಅದನ್ನು ಭಾರತದ ಭಾಗವಾಗಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ವಿಶೇಷ ಕಾಳಜಿ ವಹಿಸುತ್ತಿದೆ. ಇದು ಪಕ್ಷದ ಬದ್ಧತೆ ಮಾತ್ರವಲ್ಲ, 1994 ರಲ್ಲಿ ಸಂಸತ್ ನಲ್ಲಿ ಸರ್ವಾನುಮತದಿಂದ ಆಂಗಿಕರಿಸಲ್ಪಟ್ಟ ನಿರ್ಣಯದ ಭಾಗವಾಗಿತ್ತು ಎಂದು ಹೇಳಿದ್ದರು.
ಹರಿಯಾಣದಲ್ಲಿ ನಡೆದ ರ್ಯಾಲಿಯನ್ನು ಉದ್ಧೇಶಿಸಿ ಈ ಹಿಂದೆ ಮಾತನಾಡಿದ್ದ ರಕ್ಷಣಾ ಸಚಿವ ರಾಜ್ ನಾಥ್ ಸಿಂಗ್, 370 ನೇ ವಿಧಿಯನ್ನು ಜಮ್ಮುಕಾಶ್ಮೀರದ ಅಭಿವೃದ್ಧಿಗಾಗಿ ರದ್ದು ಪಡಿಸಲಾಗಿದೆ. ಅದರೂ ಭಾರತ ತಪ್ಪು ಮಾಡಿದೆ ಎಂದು ಪಾಕ್ ಅಂತರಾಷ್ಟ್ರೀಯ ಮಟ್ಟದಲ್ಲಿ ವಾದಿಸುತ್ತಿದೆ. ಭಯೋತ್ಪಾದನೆಯನ್ನು ಬೆಂಬಲಿಸುವುದನ್ನು ನಿಲ್ಲಿಸಿದರೆ ಮಾತ್ರ ಪಾಕ್ ನೊಂದಿಗೆ ಮಾತುಕತೆ ನಡೆಸಲಾಗುವುದು ಎಂದು ತಿಳಿಸಿದ್ದರು.