ಬೆಂಗಳೂರು: ಡಿಸೆಂಬರ್‌ನಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ಕಂಪನ ಉಂಟಾಗಲಿದೆ ಎಂಬ ಕೇಂದ್ರ ಸಚಿವ ಪ್ರಕಾಶ್ ಜಾಬ್ಡೇಕರ್
ಹೇಳಿಕೆಗೆ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಹಿತ ಸಚಿವ ಸಂಪುಟ ಸದಸ್ಯರು ಲೇವಡಿ ಮಾಡಿದ್ದಾರೆ.
ರಾಜ್ಯ ಸರ್ಕಾರ ಬಂಡೆ ತರಹ ಭದ್ರವಾಗಿದೆ. ಯಾರು ಏನು ಸದ್ದು ಮಾಡಿದರೂ ಏನೂ ಆಗುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಪ್ರತಿಕ್ರಿಯಿಸಿದ ಅವರು, ಅದೆಲ್ಲಾ ಉತ್ತರ ಕೊಡೋ ವಿಷಯವೇ ಅಲ್ಲ. ಭೂಕಂಪ ಆರು ತಿಂಗಳಿನಿಂದ ಆಗುತ್ತಿದೆ. ಆದರೆ,ಬರೀ ಸದ್ದು ಮಾಡೋದಷ್ಟೇ ಆಗಿದೆ. ರಾಜ್ಯ ಸರ್ಕಾರ ಬಂಡೆ ತರಹ ಇದೆ. ಸರ್ಕಾರ ಈಗ ಬೀಳುತ್ತೆ, ನಾಳೆ ಬೀಳುತ್ತೆ ಎಂದು ಆರು ತಿಂಗಳಿನಿಂದ ಹೇಳಿ, ಹೇಳಿ ವಿಷಯವೇ ಸತ್ತು ಹೋಗಿದೆ ಎಂದು ಹೇಳಿದರು.
ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮಾತನಾಡಿ, ಬಿಜೆಪಿ ನಾಯಕರು ಹತಾಶೆಯಿಂದ ಮಾತನಾಡುತ್ತಿದ್ದಾರೆ. ಆ ಮೂಲಕ ಅವರೇ ಕುದುರೆ ವ್ಯಾಪಾರ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾರೆ.
ಏನೇ ಆಮಿಷ-ತಂತ್ರ ಹೂಡಿದರೂ ನಾವು ಮಣಿಯುವುದಿಲ್ಲ. ಬಿಜೆಪಿಯ ಕುದುರೆ ವ್ಯಾಪಾರ ರಾಜ್ಯ ನಾಯಕರಿಂದ ರಾಷ್ಟ್ರ ನಾಯಕರಿಗೆ ತಲುಪಿದೆ. ನಾವು ನಿಮ್ಮಷ್ಟು ಬುದ್ದಿವಂತರಲ್ಲದಿದ್ದರೂ ಅಜ್ಞಾನಿಗಳಲ್ಲ. ಶೇ.1 ರಷ್ಟಾದರೂ ಯೋಚನೆ ಮಾಡುವ ಶಕ್ತಿ ನಮಗೂ ಇದೆ. ಪ್ರಜಾಪ್ರಭುತ್ವದಲ್ಲಿ ನಂಬರ್‌ಗೆàಮ್‌ಗೆ ಮಹತ್ವ ನೀಡಬೇಕು ಎಂದರು.
ಸಾ.ರಾ.ಮಹೇಶ್ ಮಾತನಾಡಿ, ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ದಿನದಿಂದಲೂ ಬಿಜೆಪಿಯವರು ಸರ್ಕಾರ ಬೀಳಿಸುವ
ಪ್ರಯತ್ನ ಮಾಡುತ್ತಿದ್ದಾರೆ. ಆರು ತಿಂಗಳಿನಿಂದ ಹುಲಿ ಬಂತು ಹುಲಿ ಕಥೆ ಹೇಳುತ್ತಿದ್ದಾರೆ. ಏನು ಆಗುತ್ತೋ ನಾವು ನೋಡುತ್ತೇವೆ ಎಂದು ಹೇಳಿದರು.
ಬಂಡೆಪ್ಪ ಕಾಶೆಂಪೂರ್ ಪ್ರತಿಕ್ರಿಯಿಸಿ, ಯಾವ ಭೂಕಂಪನವೂ ಆಗಲ್ಲ. ಏನೂ ಆಗಲ್ಲ. ಆರು ತಿಂಗಳಿಂದ ನಾವು ನೋಡುತ್ತಿದ್ದೇವೆ ಎಂದರು.