Advertisement

ಅನುದಾನಿತ ಕನ್ನಡ ಶಾಲೆಗಳಿಗೆ ಸರ್ಕಾರಿ ಬೀಗ!:

07:34 AM Nov 04, 2017 | Team Udayavani |

ಬೆಂಗಳೂರು: ಒಂದೇ ಒಂದು ಮಗುವಿದ್ದರೂ ಸರ್ಕಾರಿ ಶಾಲೆಯನ್ನು ಮುಚ್ಚುವುದಿಲ್ಲ’ ಎಂದಿದ್ದ ರಾಜ್ಯ ಸರ್ಕಾರ, ಈಗ ಕಡಿಮೆ ಮಕ್ಕಳಿರುವ ಅನುದಾನಿತ ಕನ್ನಡ ಶಾಲೆಗಳಿಗೆ ಬೀಗ ಹಾಕುವ ಪ್ರಕ್ರಿಯೆ ಆರಂಭಿಸಿದೆ. ಈಗಾಗಲೇ ರಾಜ್ಯದಲ್ಲಿ 50ಕ್ಕೂ ಹೆಚ್ಚು ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳಿಗೆ ಬೀಗ ಜಡಿಯಲಾಗಿದೆ. ಮತ್ತಷ್ಟು ಶಾಲೆಗಳನ್ನು ಬಂದ್‌ ಮಾಡಲು ಮಾಹಿತಿ ಸಂಗ್ರಹಿಸುತ್ತಿದೆ.

Advertisement

ಬಡ ಮತ್ತು ಮಧ್ಯಮ ವರ್ಗದ ಮಕ್ಕಳು ಹೆಚ್ಚಾಗಿ ವ್ಯಾಸಂಗ ಮಾಡುವ ಅನುದಾನಿತ ಶಾಲೆಗಳಿಗೆ ರಾಜ್ಯ ಸರ್ಕಾರ ಬೀಗ ಹಾಕುತ್ತಿರುವುದು ಕನ್ನಡ ಪ್ರೇಮಿಗಳಲ್ಲಿ ನಿರಾಸೆ ಮೂಡಿಸಿದೆ. ಬೆಂಗಳೂರು ಮತ್ತು ಮೈಸೂರು ವಿಭಾಗದ 18 ಪ್ರೌಢಶಾಲೆ ಸೇರಿ ರಾಜ್ಯದ 50ಕ್ಕೂ ಅಧಿಕ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳನ್ನು ಈ ತನಕ ಮುಚ್ಚಲಾಗಿದೆ. ಕನ್ನಡ ರಾಜ್ಯೋತ್ಸವದ ಬೆನ್ನಲ್ಲೇ ಸರ್ಕಾರವು ಅನುದಾನಿತ ಶಾಲೆಗಳನ್ನು ಮುಚ್ಚುತ್ತಿರುವುದು ಹಲವು ರೀತಿಯ ಚರ್ಚೆಗೆ ಗ್ರಾಸವಾಗಿದೆ. ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುವುದಿಲ್ಲ. ಒಂದೇ ಮಗು ಇದ್ದರೂ ಅಂತಹ ಶಾಲೆ ನಡೆಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ತನ್ವೀರ್‌ಸೇಠ್ ನೀಡುತ್ತಿದ್ದ ಹೇಳಿಕೆಗಳು ಸುಳ್ಳಾಗುತ್ತಿವೆ. ಸರ್ಕಾರದ ಅನುಮತಿ ಮೇರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಕಡಿಮೆ ಮಕ್ಕಳಿರುವ, ನಿರ್ವಹಣೆ ಚೆನ್ನಾಗಿಲ್ಲದ ಅನುದಾನಿತ ಕನ್ನಡ ಮಾಧ್ಯಮ ಶಾಲೆಗಳನ್ನು ಮುಚ್ಚುತ್ತಿದ್ದಾರೆ.

ಸರ್ಕಾರದ ಅನುದಾನ ಇಲ್ಲದೇ ಅನುದಾನಿತ ಶಾಲೆಗಳನ್ನು ನಡೆಸಲು ಸಾಧ್ಯವಿಲ್ಲ. ಅನುದಾನಿತ ಶಾಲೆಗಳಲ್ಲಿ ಬಹುತೇಕ ಶಿಕ್ಷಕರು ಸರ್ಕಾರದಿಂದಲೇ ವೇತನ ಪಡೆಯುತ್ತಿದ್ದಾರೆ. ಕನ್ನಡ ಮಾಧ್ಯಮ ಶಾಲೆಯನ್ನು ಯಾವುದೇ ಕಾರಣಕ್ಕೂ ಮುಚ್ಚುವುದಿಲ್ಲ ಎಂದಿದ್ದ ಸರ್ಕಾರಕ್ಕೆ ತನ್ನದೇ ಅನುದಾನದಿಂದ ನಡೆಯುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಕನ್ನಡ ರಾಜ್ಯೋತ್ಸವ ಆಚರಿಸಿದ ಎರಡೇ ದಿನದಲ್ಲಿ ಬೆಂಗಳೂರು ದಕ್ಷಿಣ ಜಿಲ್ಲೆಯ 8 ಅನುದಾನಿತ ಪ್ರೌಢಶಾಲೆಗಳನ್ನು ಮುಚ್ಚಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನೋಟಿಸ್‌ ಜಾರಿ ಮಾಡಲಾಗಿದೆ. 

ಬೆಂಗಳೂರು ಉತ್ತರ, ರಾಮನಗರ, ಮೈಸೂರು, ಮಂಡ್ಯ, ತುಮಕೂರು, ಚಿತ್ರದುರ್ಗ ಸೇರಿ ಬೆಂಗಳೂರು ಮತ್ತು ಮೈಸೂರು ವಿಭಾಗದ 18 ಪ್ರೌಢಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದೆ. ಹಾಗೆಯೇ ಈ ಎರಡು ವಿಭಾಗದಲ್ಲಿ 25 ಶಾಲೆಗಳನ್ನು ಮುಚ್ಚಲು ನೋಟಿಸ್‌ ನೀಡಲಾಗಿದೆ. ಧಾರವಾಡ ಮತ್ತು ಕಲಬುರಗಿ ವಿಭಾಗದಲ್ಲೂ 20ಕ್ಕೂ ಅಧಿಕ ಅನುದಾನಿತ ಶಾಲೆಗಳನ್ನು ಮುಚ್ಚಲಾಗಿದ್ದು, 25ಕ್ಕೂ ಅಧಿಕ ಅನುದಾನಿತ ಶಾಲೆಗಳನ್ನು ಮುಚ್ಚಲು ನೋಟಿಸ್‌ ನೀಡಿದ್ದಾರೆ.

ಡಿಡಿಪಿಐಗಳಿಗೆ ನಿರ್ದೇಶನ: ಕಳೆದ ಮೂರು ವರ್ಷದಿಂದ 25ಕ್ಕಿಂತ ಕಡಿಮೆ ಮಕ್ಕಳು ದಾಖಲಾಗಿರುವ ಅನುದಾನಿತ ಶಾಲೆಗಳ ಪಟ್ಟಿ ನೀಡುವಂತೆ ರಾಜ್ಯದ ಎಲ್ಲಾ ಶೈಕ್ಷಣಿಕ ಜಿಲ್ಲೆಯ ಉಪ ನಿರ್ದೇಶಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ನಿರ್ದೇಶನ ರವಾನೆಯಾಗಿದೆ.

Advertisement

ವಿದ್ಯಾರ್ಥಿ, ಶಿಕ್ಷಕರಿಗೆ ಪರ್ಯಾಯ ವ್ಯವಸ್ಥೆ: ಮುಚ್ಚಿರುವ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಹಾಗೂ ಶಿಕ್ಷಕರಿಗೆ ಶಿಕ್ಷಣ ಇಲಾಖೆಯಿಂದಲೇ ಪರ್ಯಾಯ ವ್ಯವಸ್ಥೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳನ್ನು ಸಮೀಪದ ಸರ್ಕಾರಿ ಅಥವಾ ಅನುದಾನಿತ ಶಾಲೆಗೆ ಸ್ಥಳಾಂತರಿಸುವ ಕೆಲಸ ನಡೆಯುತ್ತಿದೆ. ಶಿಕ್ಷಕರನ್ನು ಆಯಾ ಜಿಲ್ಲಾ ವ್ಯಾಪ್ತಿಯ ಅನುದಾನಿತ ಶಾಲೆಗಳಲ್ಲಿ ಖಾಲಿ ಇರುವ ಹುದ್ದೆಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ. ಶಿಕ್ಷಕರನ್ನು ಸಮೀಪದ ಶಾಲೆಗೆ ಕಳುಹಿಸುತ್ತಿಲ್ಲ.

ಕಾಯ್ದೆಯಲ್ಲೇ ಇದೆ ಮುಚ್ಚಲು ಅವಕಾಶ
ಸತತ ಮೂರು ವರ್ಷಗಳಿಂದ 25ಕ್ಕಿಂತ ಕಡಿಮೆ ದಾಖಲಾತಿ ಹೊಂದಿರುವ ಅನುದಾನಿತ ಶಾಲೆಗಳಿಗೆ ನೋಟಿಸ್‌ ಜಾರಿ ಮಾಡಿ, ಸರ್ಕಾರದ ಆದೇಶದಂತೆ ಮುಚ್ಚಲು ಕರ್ನಾಟಕ ಶಿಕ್ಷಣ ಕಾಯ್ದೆ 1983ರಲ್ಲಿ ಅವಕಾಶ ಇದೆ. ಸರ್ಕಾರದ ಅನುದಾನ ಪಡೆದು, ಮಕ್ಕಳನ್ನು ಶಾಲೆಗೆ ಕರೆತರಲು ವಿಫ‌ಲವಾಗಿರುವ ಮತ್ತು ನಿರ್ವಹಣೆ ಚೆನ್ನಾಗಿ ಮಾಡದ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

50 ಈಗಾಗಲೇ ಬಂದ್‌ ಮಾಡಿದ ಅನುದಾನಿತ ಶಾಲೆಗಳು
18 ಈಗಾಗಲೇ ಮುಚ್ಚಲ್ಪಟ್ಟ ಅನುದಾನಿತ ಪ್ರೌಢಶಾಲೆಗಳು
150 ಅಧಿಕ ಶಾಲೆಗಳಿಗೆ ಮುಚ್ಚಲು ನೋಟಿಸ್‌

Advertisement

Udayavani is now on Telegram. Click here to join our channel and stay updated with the latest news.

Next