Advertisement

ಕಡಿಮೆ ಮಳೆಯಾದ ಕಡೆ ಆಗಸ್ಟ್‌ನಲ್ಲಿ ಮೋಡ ಬಿತ್ತಲು ಸರಕಾರ ಸಿದ್ಧತೆ

06:25 AM Jul 22, 2017 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೋಡ ಬಿತ್ತನೆಗೆ ಸರಕಾರ ಅಂತಿಮ ಸಿದ್ಧತೆ ನಡೆಸಿದ್ದು, ಆಗಸ್ಟ್‌ ಮೊದಲ ವಾರದಲ್ಲಿ ಮೋಡ ಬಿತ್ತನೆ ಮಾಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಎಚ್‌.ಕೆ. ಪಾಟೀಲ್‌ ಅವರು ಹೇಳಿದ್ದಾರೆ. ರಾಜ್ಯದಲ್ಲಿ ಈಗ ಉತ್ತಮ ಮಳೆಯಾಗುತ್ತಿದೆ ಯಾದರೂ ಅನೇಕ ಕಡೆಗಳಲ್ಲಿ ಮಳೆ ಪ್ರಮಾಣ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಮಳೆ ಕಡಿಮೆ ಇರುವ ಪ್ರದೇಶಗಳನ್ನು ಗುರುತಿಸಿ ಮೋಡ ಬಿತ್ತನೆ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದರು. ವಿಧಾನಸೌಧದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಮೋಡ ಬಿತ್ತನೆ ಕುರಿತ ಟೆಂಡರ್‌ ಪ್ರಕ್ರಿಯೆಯಲ್ಲಿ ಎರಡು ಕಂಪೆನಿಗಳು ಭಾಗವಹಿಸಿದ್ದವು. ಈ ಪೈಕಿ ಬೆಂಗಳೂರು ಮೂಲದ ಹೊಯ್ಸಳ ಕಂಪೆನಿ ಬಿಡ್‌ನ‌ಲ್ಲಿ ಯಶಸ್ವಿಯಾಗಿದ್ದು, 30 ಕೋಟಿ ರೂ. ವೆಚ್ಚದಲ್ಲಿ ಮೋಡ ಬಿತ್ತನೆ ಮಾಡಲಿದೆ ಎಂದರು.

Advertisement

ಮೋಡ ಬಿತ್ತನೆಗಾಗಿ ಮೂರು ರಡಾರ್‌ ಹಾಗೂ ಎರಡು ವಿಮಾನಗಳನ್ನು ಬಳಸಿ ಕೊಳ್ಳಲಾಗುತ್ತಿದೆ. ಬೆಂಗಳೂರು, ಸುರಪುರ ಮತ್ತು ಗದಗ್‌ನಲ್ಲಿ ತಲಾ ಒಂದು ರಡಾರ್‌ಗಳನ್ನು ಸ್ಥಾಪಿಸಲಾಗುತ್ತದೆ. ಎರಡು ವಿಮಾನಗಳ ಮೂಲಕ ಒಟ್ಟು 60 ದಿನಗಳ ಕಾಲ 300 ಗಂಟೆ ಅವಧಿಯಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಮೋಡ ಬಿತ್ತನೆಗೆ ಅಂತಾರಾಷ್ಟ್ರೀಯ ತಜ್ಞರು ಅಮೆರಿಕಾದಿಂದ ಆಗಮಿಸಬೇಕಾಗಿದ್ದು, ಇದಕ್ಕೆ ಕೇಂದ್ರ ಸರಕಾರದ ಅನುಮತಿ ಬೇಕಾಗುತ್ತದೆ. ಆದ್ದರಿಂದ ಈಗಾಗಲೇ ಕೇಂದ್ರ ಗೃಹ ಸಚಿವರಿಗೆ ಅನುಮತಿ ಕೋರಿ ಪತ್ರ ಬರೆಯಲಾಗಿದೆ ಎಂದು ಹೇಳಿದರು. ಮೋಡ ಬಿತ್ತನೆಗೆ ಸಂಬಂಧಿಸಿದಂತೆ ಡಾ| ಆರ್‌.ವಿ. ಶರ್ಮಾ ನೇತೃತ್ವದ ತಾಂತ್ರಿಕ ತಂಡ ಕಾರ್ಯ ನಿರ್ವಹಿಸಲಿದೆ. ಹುಬ್ಬಳ್ಳಿ ಹಾಗೂ ಬೆಂಗಳೂರು ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ನಡೆಯಲಿದ್ದು, ಅಗತ್ಯ ಬಿದ್ದರೆ ಬೀದರ್‌ ವಿಮಾನ ನಿಲ್ದಾಣದಿಂದಲೂ ಕಾರ್ಯಾಚರಣೆ ನಡೆಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಗ್ರಾಮೀಣ ರಸ್ತೆಗೆ ಅನುದಾನ: ಕೇಂದ್ರಕ್ಕೆ ಮನವಿ
ಬೆಂಗಳೂರು: ರಾಜ್ಯದ ಗ್ರಾಮೀಣ ರಸ್ತೆಗಳ ನವೀಕರಣ ಮತ್ತು ನಿರ್ವಹಣೆಗೆ ಸರಕಾರ ಹೊಸ ನೀತಿ ಜಾರಿಗೆ ತಂದಿದೆ ಎಂದು ಸಚಿವ ಎಚ್‌.ಕೆ. ಪಾಟೀಲ್‌ ಹೇಳಿದ್ದಾರೆ. ಹೊಸ ನೀತಿಯಡಿ ಗ್ರಾಮೀಣ ರಸ್ತೆಗಳ ನವೀಕರಣಕ್ಕೆ 11 ಸಾವಿರ ಕೋಟಿ ರೂ. ಹಾಗೂ ನಿರ್ವಹಣೆಗೆ 8,082 ಕೋಟಿ ರೂ. ಬೇಕಾಗುತ್ತದೆ. ಆದ್ದರಿಂದ ಕೇಂದ್ರ ಸರಕಾರ ಈ ಉದ್ದೇಶಕ್ಕಾಗಿ 10 ಸಾವಿರ ಕೋಟಿ ರೂ. ಅನುದಾನ ನೀಡಬೇಕು ಎಂದು ಒತ್ತಾಯಿಸಿದ ಅವರು, ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

ಪೌರಾಡಳಿತ ಸಚಿವ ಈಶ್ವರ್‌ ಖಂಡ್ರೆ ಅವರು ಮಧ್ಯಪ್ರದೇಶ, ಗುಜರಾತ್‌ ಮತ್ತು ತಮಿಳುನಾಡುಗಳಲ್ಲಿ ಅಧ್ಯಯನ ನಡೆಸಿ ಗ್ರಾಮೀಣ ರಸ್ತೆಗಳ ಸುಧಾರಣೆ ಹಾಗೂ ನಿರ್ವಹಣೆ ಕುರಿತು ವರದಿ ನೀಡಿದ್ದರು. ಆ ವರದಿ ಆಧರಿಸಿ ರಾಜ್ಯ ಸರಕಾರ ಉತ್ತಮ ನೀತಿ ರೂಪಿಸಿದೆ. ಇದರಿಂದ ಕನಿಷ್ಠ 10 ವರ್ಷಗಳ ಕಾಲ ಗ್ರಾಮೀಣ ರಸ್ತೆಗಳ ನಿರ್ವಹಣೆಗೆ ಅನುಕೂಲವಾಗಲಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next