ಕಲಬುರಗಿ: “ಸಮ್ಮಿಶ್ರ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಮುಂದಾಗುವುದಿಲ್ಲ. ಆದರೆ ಸರ್ಕಾರದ ಕಾರ್ಯವೈಖರಿ ವಿರುದ್ಧ ಅಸಮಾಧಾನಗೊಂಡಿರುವ 20 ಶಾಸಕರು ಏನು ನಿಲುವು ತೆಗೆದುಕೊಳ್ಳುತ್ತಾರೆನ್ನುವುದರ ಮೇಲೆ ಸರ್ಕಾರದ ಭವಿಷ್ಯ ಅಡಗಿದೆ. ಅಲ್ಲದೇ ಕಚ್ಚಾಟದಿಂದ ಸರ್ಕಾರ ಬಿದ್ದರೆ ನಾವು ಸುಮ್ಮನೆ ಕೂರುವುದಿಲ್ಲ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, “ಕಾಂಗ್ರೆಸ್-ಜೆಡಿಎಸ್ ನಡುವೆ ಕಾದಾಟ ಶುರುವಾಗಿದೆ. ಇದರ ಪರಿಣಾಮ ಬೀರುವುದು ನಿಶ್ಚಿತ. ಲೋಕಸಭೆ ಚುನಾವಣೆಯಲ್ಲಿ ಯಾರು ಏನು ಮಾಡಿದ್ದಾರೆಂಬುದು ಗೊತ್ತು. ಅದಕ್ಕೆ ಮತದಾರರ ನೀಡಿರುವ ಉತ್ತರ ಮೇ 23ಕ್ಕೆ ಬಹಿರಂಗವಾಗಲಿದೆ. ನಂತರ ಯಾರು ಹೇಗೆ ನಡೆದುಕೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಸರ್ಕಾರ ಅಸ್ಥಿರಗೊಂಡರೆ ಸುಮ್ಮನೆ ಕೂಡುವುದಿಲ್ಲ. ಸುಮ್ಮನೇ ಕೂರಲು ನಾವು ಸನ್ಯಾಸಿಗಳಲ್ಲ’ ಎಂದರು.
ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ 22 ಸ್ಥಾನ ಗೆಲ್ಲುತ್ತೆ ಎಂದು ಮೊದಲಿನಿಂದಲೂ ಹೇಳುತ್ತಾ ಬರಲಾಗಿದೆ. ಆದರೆ ಚುನಾವಣೆ ನಂತರ ಜನಾಭಿಮತ ನೋಡಿದರೆ ಮತ್ತೂಂದು ಸ್ಥಾನ ಹೆಚ್ಚಳದೊಂದಿಗೆ 23 ಸ್ಥಾನ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ. ಪಕ್ಷ ನಡೆಸಿದ ಆಂತರಿಕ ಸಮೀಕ್ಷೆಯಲ್ಲಿ ಇದು ದೃಢಪಟ್ಟಿದೆ. ಕಲಬುರಗಿ, ಕೋಲಾರ, ತುಮಕೂರು ಸೇರಿ 23 ಸ್ಥಾನಗಳನ್ನು ಗೆಲ್ಲುತ್ತೇವೆ ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನದಲ್ಲಿ ನನ್ನನ್ನು ಮುಂದುವರಿಸುವ ಹಾಗೂ ಬದಲಾಯಿಸುವುದು ಪಕ್ಷದ ಕೇಂದ್ರದ ವರಿಷ್ಠರಿಗೆ ಬಿಟ್ಟಿದ್ದು. ಪಕ್ಷ ಏನೇ ನಿರ್ಧಾರ ಕೈಗೊಂಡರೂ ಬದ್ಧನಾಗಿದ್ದೇನೆ.
-ಬಿ.ಎಸ್. ಯಡಿಯೂರಪ್ಪ, ಮಾಜಿ ಸಿಎಂ