ಚಿತ್ರದುರ್ಗ: ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ಪಿಎಂಎಫ್‌ಡಿವೈ ಫಸಲ್ ಬಿಮಾ ಪಾಠಶಾಲಾ ರೈತ ಸಂವಾದ ಕಾರ್ಯಕ್ರಮದಲ್ಲಿ ಕೃಷಿ ಸಚಿವ ಬಿ.ಸಿ. ಪಾಟೀಲ್, ಹೊಸದುರ್ಗ ತಾಲೂಕಿನ ಹುಣವಿನಡು ಗ್ರಾಮದ ರೈತರಾದ ರಾಮಲಿಂಗಪ್ಪ ಹಾಗೂ ನಾಗರಾಜ್ ಅವರೊಂದಿಗೆ ವಿಡಿಯೋ ಸಂವಾದ ನಡೆಸಿದರು.
ಚಿಕ್ಕಮಗಳೂರಿನ ಎನ್‌ಐಸಿ ಸೆಂಟರ್ ನಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳ ರೈತರೊಂದಿಗೆ ಸಚಿವರು ವಿಡಿಯೋ ಸಂವಾದ ನಡೆಸಿದರು. ಸಂವಾದದಲ್ಲಿ ಮಾತನಾಡಿದ ಬಿ.ಸಿ. ಪಾಟೀಲ್, ಪ್ರಧಾನಿ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಬೆಳೆ ವಿಮೆ ಕಲ್ಪಿಸುವುದರೊಂದಿಗೆ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ನೀಡುತ್ತಿದ್ದಾರೆ ಎಂದರು.
ನನ್ನ ಬೆಳೆ ನನ್ನ ಹಕ್ಕು
ಯೋಜನೆಯಡಿ ರೈತರೇ ಸ್ವಯಂಬೆಳೆ ಸಮೀಕ್ಷೆ ಮಾಡಲು ಅವಕಾಶ ನೀಡಲಾಗಿದೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಕೇಂದ್ರದಿಂದ 6 ಸಾವಿರ, ರಾಜ್ಯ ಸರ್ಕಾರದಿಂದ 4 ಸಾವಿರ ರೂ.ಗಳನ್ನು ರೈತರ ಖಾತೆ ನೇರವಾಗಿ ವರ್ಗಾವಣೆ ಮಾಡಲಾಗುತ್ತಿದೆ. ರೈತ ಶಕ್ತಿ ಯೋಜನೆ ಅಡಿಯಲ್ಲಿ 1 ಲೀಟರ್ ಗೆ 25 ರೂಪಾಯಿಯಂತೆ 5 ಎಕರೆ ಉಳುಮೆ ಮಾಡುವವರಿಗೆ ಡೀಸೆಲ್ ಬಳಕೆ ಮೇಲೆ ಸಬ್ಸಿಡಿ ನೀಡಲಾಗುವುದು. ರೈತರ ಮಕ್ಕಳಿಗೆ ರೈತ ವಿದ್ಯಾಸಿರಿ ಯೋಜನೆಯನ್ನು ಜಾರಿಗೆ ತರಲಾಗಿದೆ. ರೈತರ ಮಕ್ಕಳಿಗೆ ಬಿಎಸ್‌ಸಿ ಅಗ್ರಿಕಲ್ಚರ್ ಪದವಿ ಪ್ರವೇಶಾತಿಯಲ್ಲಿ ಶೇ. 50ರಷ್ಟು ಸೀಟುಗಳನ್ನು ಮೀಸಲಿಡಲಾಗಿದೆ ಎಂದರು.
ಹುಣವಿನಡು ಗ್ರಾಮದ ರೈತ ರಾಮಲಿಂಗಪ್ಪ ಮಾತನಾಡಿ, ಸಿರಿಧಾನ್ಯಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಫಸಲ್ ಬಿಮಾ ವಿಮೆಯನ್ನು ಕಟ್ಟಿಸಿಕೊಳ್ಳಲು ಅವಕಾಶ ಕಲ್ಪಿಸಿಕೊಡಿ ಎಂದು ಕೃಷಿ ಸಚಿವರಲ್ಲಿ ಮನವಿ ಮಾಡಿದರು.
ಇದಕ್ಕೆ ಸ್ಪಂದಿಸಿದ ಸಚಿವರು, ಸಿರಿಧಾನ್ಯ ಬೆಳೆಗಳ ಉತ್ತೇಜನಕ್ಕೆ 11 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ. ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಫಸಲ್ ಬಿಮಾ ಯೋಜನೆಗೆ ವಿಮಾ ಕಂತು ಕಟ್ಟಿಸಿಕೊಳ್ಳಲು ಅವಕಾಶವಿದೆ ಎಂದರು. ರೈತ ನಾಗರಾಜ್ ಮಾತನಾಡಿ, ಬೆಳೆಗಳು ಹಾನಿಯಾದ ಸಂದರ್ಭದಲ್ಲಿ ಪರಿಹಾರ ಹಣ ಸಿಗುತ್ತಿದೆ. ಇದರಿಂದ ರೈತರು ಆರ್ಥಿಕವಾಗಿ ಸಬಲತೆ ಗಳಿಸಲು ಹಾಗೂ ಸ್ವಾವಲಂಬನೆ ಹೊಂದಲು ಸಹಕಾರಿಯಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.