ಬಳ್ಳಾರಿ: ನೇಕಾರರ ಸಮಾಜದ ಸಮಗ್ರ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ಈಗಾಗಲೇ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದು ಸಾರಿಗೆ, ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು.
ನಗರದ ಬಿಡಿಎಎ ಫುಟ್ಬಾಲ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಹಾನಗರ ಪಾಲಿಕೆ ಸಹಯೋಗದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದ್ಯ ವಚನಕಾರ ನೇಕಾರರ ಸಂತ ಶ್ರೀ ದೇವರ ದಾಸಿಮಯ್ಯ ಜಯಂತಿ ಕಾರ್ಯಕ್ರಮದಲ್ಲಿ ದಾಸಿಮಯ್ಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ನೇಕಾರರಿಗೆ ನೇಕಾರ ಸಮ್ಮಾನ್ ಯೋಜನೆ ಅಡಿ ನೀಡಲಾಗುತ್ತಿದ್ದ ವಾರ್ಷಿಕ 2 ಸಾವಿರ ಸಹಾಯಧನವನ್ನು 5 ಸಾವಿರಕ್ಕೆ ಹೆಚ್ಚಿಸಲಾಗಿದೆ. ರೇಷ್ಮೆ, ಹತ್ತಿ, ಉಣ್ಣೆ ಮತ್ತು ಇತರೆ ಕೈಮಗ್ಗ ನೇಕಾರರು ಸಹ ಈ ಯೋಜನೆಯ ಲಾಭ ಪಡೆಯಬೇಕು ಎಂದ ಸಚಿವ ರಾಮುಲು, ಮುಂದಿನ ದಿನಗಳಲ್ಲಿ ಇನ್ನಷ್ಟು ಯೋಜನೆಗಳನ್ನು ಜಾರಿಗೆ ತರುವುದರ ಮೂಲಕ ಶ್ರಮಿಸುವ ಕೈಗಳಿಗೆ ಶಕ್ತಿ ತುಂಬುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಭರವಸೆ ನೀಡಿದರು.
54,789 ನೇಕಾರರಿಗೆ 10.97 ಕೋಟಿ ರೂ. ಅನುದಾನ ನಿಗದಿಪಡಿಸಲಾಗಿದೆ. ರಾಜ್ಯ ಸಹಕಾರಿ ಹಾಗೂ ವಾಣಿಜ್ಯ ಬ್ಯಾಂಕ್‌ಗಳ ಮೂಲಕ ನೇಕಾರರು ಪಡೆಯುವ ಸಾಲದ ಮೇಲೆ ಶೇ.8ರಷ್ಟು ಬಡ್ಡಿ ಸಹಾಯಧನ ಸೌಲಭ್ಯ ಸರ್ಕಾರ ನೀಡಿದೆ. ನೇಕಾರರ ಮಕ್ಕಳ ಶಿಕ್ಷಣ ಉತ್ತೇಜಿಸಲು ವಿದ್ಯಾರ್ಥಿ ವೇತನ ಯೋಜನೆ ಜಾರಿಗೆ ತರಲಾಗಿದೆ ಎಂದು ಅವರು ವಿವರಿಸಿದರು.
ಶ್ರೀ ದೇವರ ದಾಸಿಮಯ್ಯ ಅವರು ಕೊಡುಗೆಯನ್ನು ಈ ಸಂದರ್ಭದಲ್ಲಿ ಸ್ಮರಿಸಿದ ಸಚಿವ ಶ್ರೀರಾಮುಲು ಅವರು ನೇಕಾರರ ಶ್ರಮ ದೊಡ್ಡದು, ರೈತ ಅನ್ನ ಕೊಟ್ಟರೆ ನೇಕಾರ ಮಾನ ಮುಚ್ಚುತ್ತಾನೆ ಎಂದು ಸ್ಮರಿಸಿದರು.
ಅಧ್ಯಕ್ಷತೆ ವಹಿಸಿದ್ದ ನಗರ ಶಾಸಕ ಜಿ. ಸೋಮಶೇಖರ ರೆಡ್ಡಿ ಮಾತನಾಡಿ, ನೇಕಾರ ಸಮುದಾಯದವರು ಸರ್ಕಾರದ ಎಲ್ಲ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದರು.
ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಸಿದ್ದಲಿಂಗಪ್ಪ ದೇವರ ದಾಸಿಮಯ್ಯರವರ ಕುರಿತು ವಿಶೇಷ ಉಪನ್ಯಾಸ ನೀಡಿದರು.
ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ಪಿ. ಪಾಲಣ್ಣ, ಮೇಯರ್ ಎಂ.ರಾಜೇಶ್ವರಿ, ಉಪಮೇಯರ್ ಮಾಲನ್ ಬಿ, ಜಿಪಂ ಸಿಇಒ ಲಿಂಗಮೂರ್ತಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸೈದುಲು ಅಡಾವತ್, ಅಪರ ಜಿಲ್ಲಾಧಿಕಾರಿ ಮಂಜುನಾಥ, ತಹಶೀಲ್ದಾರ್ ವಿಶ್ವನಾಥ ಸೇರಿದಂತೆ ನೇಕಾರ ಸಮುದಾಯದ ಮುಖಂಡರು, ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.