ನವದೆಹಲಿ: ಕೇಂದ್ರ ಸರ್ಕಾರದ ಮೂರು ಕೃಷಿ ನೀತಿಯನ್ನು ವಿರೋಧಿಸಿ ಕಳೆದ ಒಂದು ತಿಂಗಳಿನಿಂದಲೂ ದೆಹಲಿಯ ಗಡಿಭಾಗದಲ್ಲಿ ಪ್ರತಿಭಟನೆ ನಡೆಸುತ್ತಿದ್ದು, ಏತನ್ಮಧ್ಯೆ ಕೇಂದ್ರ ಸರ್ಕಾರ ಡಿಸೆಂಬರ್ 30ರಂದು ಮಧ್ಯಾಹ್ನ 2ಗಂಟೆಗೆ ಮತ್ತೊಂದು ಸುತ್ತಿನ ಮಾತುಕತೆಗೆ ಆಹ್ವಾನಿಸಿದೆ.
ನೂತನ ಕಾಯ್ದೆಯನ್ನು ರದ್ದುಗೊಳಿಸಬೇಕೆಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸುತ್ತಿದ್ದ ರೈತ ಮುಖಂಡರ ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್ ಸಮಸ್ಯೆಯನ್ನು ಪರಿಹರಿಸಲು ಸಮಿತಿಯನ್ನು ರಚಿಸುವಂತೆ ಆದೇಶ ನೀಡಿದ ಬಳಿಕ ಕೇಂದ್ರ ಸರ್ಕಾರ ರೈತ ಮುಖಂಡರ ಜತೆ ನಡೆಸಲಿರುವ ಆರನೇ ಸಭೆ ಇದಾಗಲಿದೆ ಎಂದು ವರದಿ ತಿಳಿಸಿದೆ.
ಈಗಾಗಲೇ ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ನಡೆದ ಐದು ಸುತ್ತಿನ ಮಾತುಕತೆ ವಿಫಲಗೊಂಡಿತ್ತು. ಅಲ್ಲದೇ ಕೃಷಿ ಕಾಯ್ದೆಯಲ್ಲಿನ ತಿದ್ದುಪಡಿಗೆ ಸಹಮತ ಸೂಚಿಸದ ರೈತರು, ಕಾಯ್ದೆ ರದ್ದುಪಡಿಸಲು ಪಟ್ಟು ಹಿಡಿದಿದ್ದರಿಂದ ಮಾತುಕತೆ ವಿಫಲವಾಗಿತ್ತು.
ಇದನ್ನೂ ಓದಿ:ಲಂಡನ್ ನಿಂದ ಮುಂಬೈಗೆ ಮರಳಿದ್ದ ಮತ್ತೆ ಮೂವರಿಗೆ ಕೋವಿಡ್ ಪಾಸಿಟಿವ್
ಕೇಂದ್ರ ಸಚಿವ ನರೇಂದ್ರ ಸಿಂಗ್ ತೋಮರ್, ಪಿಯೂಶ್ ಗೋಯಲ್ ಅವರು ರೈತರ ಜತೆ ಮಾತುಕತೆ ನಡೆಸಿದ್ದರು. ನಂತರ ಅಮಿತ್ ಶಾ ಅವರು ಕೂಡಾ ರೈತರ ಜತೆ ಚರ್ಚೆ ನಡೆಸಿದ್ದರು, ಆದರೆ ಯಾವುದೇ ತಿದ್ದುಪಡಿಗೆ ಒಪ್ಪದ ಹಿನ್ನೆಲೆಯಲ್ಲಿ ಮಾತುಕತೆ ವಿಫಲಗೊಂಡಿತ್ತು.
ಕೃಷಿ ಸಚಿವಾಲಯದ ಹಿರಿಯ ಅಧಿಕಾರಿಗಳು ಡಿಸೆಂಬರ್ 30ರಂದು ನಡೆಯಲಿರುವ ಮಾತುಕತೆ ಕುರಿತು ತಿಳಿಸಿದ್ದು, ಸಭೆಯಲ್ಲಿ ನೂತನ ಮೂರು ಕೃಷಿ ಕಾಯ್ದೆ ಬಗ್ಗೆ ಹಗೂ ಎಮ್ ಎಸ್ ಪಿ ವ್ಯವಸ್ಥೆ, ಸೆಂಟ್ರಲ್ ಎಲೆಕ್ಟ್ರಿಸಿಟಿ ಬಿಲ್ ಮತ್ತು ಮಾಲಿನ್ಯ ತಡೆ ಕುರಿತು ಚರ್ಚೆ ನಡೆಯಲಿದೆ ಎಂದು ತಿಳಿಸಿದ್ದಾರೆ.