Advertisement

ಸುವರ್ಣ ಸೌಧದಲ್ಲಿ ಸರ್ಕಾರ: ಕುಮಾರಸ್ವಾಮಿ

12:36 PM Nov 15, 2017 | Team Udayavani |

ಧಾರವಾಡ/ಬೆಳಗಾವಿ: “ಜೆಡಿಎಸ್‌ ಅಧಿಕಾರಕ್ಕೆ ಬಂದರೆ ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ವಾರದಲ್ಲಿ ಎರಡು ದಿನ ಸರ್ಕಾರ ಕಾರ್ಯ ನಿರ್ವಹಿಸುವಂತೆ ಮಾಡಲಾಗುವುದು’ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಭರವಸೆ ನೀಡಿದರು.

Advertisement

ಬೆಳಗಾವಿಯಲ್ಲಿ ಮಂಗಳವಾರ ನಡೆದ ಕುಮಾರಪರ್ವ ರೈತರ ಬೃಹತ್‌ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು. ಉತ್ತರ ಕರ್ನಾಟಕದ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಸುವರ್ಣ ವಿಧಾನಸೌಧ ಕಟ್ಟಲಾಗಿದೆ. ಹೀಗಾಗಿ ಅಧಿಕಾರಕ್ಕೆ ಬಂದ ಬಳಿಕ ಸೌಧ ಕೇವಲ ಬೆಳಗಾವಿಗೆ ಸೀಮಿತವಾಗದಂತೆ ನೋಡಿಕೊಳ್ಳಲಾಗುವುದು ಎಂದರು. ಇದಕ್ಕೂ ಮೊದಲು ಧಾರವಾಡದಲ್ಲಿ ನಡೆದ “ವಿಕಾಸ ಯಾತ್ರೆ’ಯಲ್ಲಿ ಪಾಲ್ಗೊಂಡು ಮಾತನಾಡಿ, ಬೆಳಗಾವಿಯಲ್ಲಿ ಅಧಿವೇಶನ ಸೂಸೂತ್ರವಾಗಿ ನಡೆಯಲು ಎಲ್ಲ ಪಕ್ಷಗಳ ಶಾಸಕರು ಸಹಕಾರ ನೀಡಬೇಕು ಎಂದು ಮನವಿ ಮಾಡಿದರು. 

ಸಚಿವ ಜಾರ್ಜ್‌ ವಿಷಯದಲ್ಲಿ ಸದನ ಬಲಿಯಾಗದೇ ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಚರ್ಚೆಯಾಗಲಿ. ಅಧಿವೇಶನದ ಮೊದಲನೇ ದಿನವಾದ ಸೋಮವಾರ ಸರಿಯಾಗಿ ಚರ್ಚೆ ನಡೆದಿಲ್ಲ. ಜಾರ್ಜ್‌ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮುಖಂಡರು ಮಂಗಳವಾರವೂ ಪ್ರತಿಭಟನೆ ನಡೆಸಿದ ಕಾರಣ ಕಲಾಪಗಳು ಸರಿಯಾಗಿ ನಡೆಯಲಿಲ್ಲ. ಎಲ್ಲ ಪಕ್ಷಗಳ ನಾಯಕರು ಸದನ ಸುಸೂತ್ರವಾಗಿ ನಡೆಯಲು ಸಹಕರಿಸಬೇಕು. ವಿರೋಧ ಪಕ್ಷದ ಮುಖಂಡರು ಕಲಾಪಗಳಿಗೆ ಅಡ್ಡಿಪಡಿಸುವುದರಿಂದ ಉತ್ತರ ಕರ್ನಾಟಕದ ಸಮಸ್ಯೆಗಳ ನಿವಾರಣೆಗೆ ತೊಂದರೆಯಾಗಲಿದೆ ಎಂದು ವಿಷಾದಿಸಿದರು.

“ಅಡಿಗಲ್ಲು ಹಾಕಿದ ಕುಮಾರಣ್ಣನ ಹೆಸರೇ ಮಾಯ’
ಬೆಳಗಾವಿ: ಸುವರ್ಣ ವಿಧಾನಸೌಧ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ಎಚ್‌.ಡಿ. ಕುಮಾರಸ್ವಾಮಿಯವರ ಹೆಸರನ್ನು ಕಲ್ಲಿನಲ್ಲಿ ಕೆತ್ತಲಾಗಿತ್ತು. ಅದನ್ನು ತೆಗೆದು ಹಾಕಿ ತಮ್ಮ ಹೆಸರು ಬಳಸಿಕೊಂಡಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಟೀಕಿಸಿದರು. ನಗರದ ಸಿಪಿಎಡ್‌ ಮೈದಾನದಲ್ಲಿ ಮಂಗಳವಾರ ನಡೆದ ರೈತರ ಬೃಹತ್‌ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಬೆಳಗಾವಿಯಲ್ಲಿ ನಿರ್ಮಾಣವಾದ ಸುವರ್ಣಸೌಧದಲ್ಲಿ ಕಲ್ಲಿನಲ್ಲಿ ಹಾಕಿದ್ದ ಕುಮಾರಣ್ಣನ ಹೆಸರನ್ನು ತೆಗೆದು ಹಾಕಲಾಗಿದೆ. ಆದರೆ, ಜನರ ಹೃದಯದಿಂದ ಕುಮಾರಣ್ಣನನ್ನು ತೆಗೆದು ಹಾಕಲು ಸಾಧ್ಯವಿಲ್ಲ. ಸುವರ್ಣ ವಿಧಾನಸೌಧ ನಿರ್ಮಿಸಿದ ಶ್ರೇಯಸ್ಸು ಕುಮಾರಸ್ವಾಮಿಗೆ ಸಲ್ಲುತ್ತದೆ ಎಂದರು.

ಶಾಸಕ ನಡಹಳ್ಳಿ ಜೆಡಿಎಸ್‌ಗೆ ಸೇರ್ಪಡೆ
ಬೆಳಗಾವಿ: ಕಾಂಗ್ರೆಸ್‌ದಿಂದ ಉಚ್ಚಾಟನೆಗೊಂಡ ದೇವರ ಹಿಪ್ಪರಗಿ ಶಾಸಕ ಎ.ಎಸ್‌.ಪಾಟೀಲ ನಡಹಳ್ಳಿ ದಂಪತಿಗೆ ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಪಕ್ಷದ ಧ್ವಜ ನೀಡಿ ಬರಮಾಡಿಕೊಂಡರು. ನಂತರ ಕಾಂಗ್ರೆಸ್‌ ವಿರುದ್ಧ
ಹರಿಹಾಯ್ದ ನಡಹಳ್ಳಿ, 40 ವರ್ಷಗಳಿಂದ ಕಾಂಗ್ರೆಸ್‌ ಕರ್ನಾಟಕವನ್ನು ಹಾಳು ಮಾಡಿದೆ. ಮಾತು ಎತ್ತಿದರೆ ಜಾತಿ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್‌ನಿಂದ ಅಹಿಂದಕ್ಕೆ ಕೊಡುಗೆ ಶೂನ್ಯ ಎಂದು ದೂರಿದರು.

Advertisement

ಜೆಡಿಎಸ್‌ಗೆ ಹೊಸ ಮನ್ವಂತರ ಶುರು
ಬೆಳಗಾವಿ: ಉತ್ತರ ಕರ್ನಾಟಕದಲ್ಲಿ ಅಸ್ತಿತ್ವವೇ ಇಲ್ಲದ ಜೆಡಿಎಸ್‌, ಬೆಳಗಾವಿಯಲ್ಲಿ ಮಂಗಳವಾರ ನಡೆದ ಕುಮಾರಪರ್ವ ಸಮಾವೇಶ ಮೂಲಕ ಹೊಸ ಮನ್ವಂತರಕ್ಕೆ ನಾಂದಿ ಹಾಡಿದೆ. ರ್ಯಾಲಿ ಹಾಗೂ ಸಮಾವೇಶಕ್ಕೆ ಹೆಚ್ಚಿನ ಜನ ಸೇರಿದ್ದರಿಂದ ಎಚ್‌.ಡಿ. ದೇವೇಗೌಡ ಹಾಗೂ ಕುಮಾರಸ್ವಾಮಿ ಮುಖದಲ್ಲಿ ಸಂತಸ ಕಾಣುತ್ತಿತ್ತು. ಶಾಸಕ ನಡಹಳ್ಳಿ ಸೇರ್ಪಡೆಯಿಂದ ಈ ಭಾಗದಲ್ಲಿ ಜೆಡಿಎಸ್‌ಗೆ ಬಲ ಬಂದಂತಾಗಿದೆ. ಕುಮಾರಸ್ವಾಮಿ ಹೆಸರು ಹೇಳಿದಾಗಲೊಮ್ಮೆ ಜನ ಸಿಳ್ಳೆ, ಚಪ್ಪಾಳೆ ಮೂಲಕ ಘೋಷಣೆ ಕೂಗುತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next