Advertisement

ಅವಿಭಜಿತ ದ.ಕ.ದಲ್ಲಿ ಸರಕಾರಿ ಮನೆ ನಿರ್ಮಾಣ ಕಡಿಮೆ

11:36 PM Jul 29, 2023 | Team Udayavani |

ಉಡುಪಿ: ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಸ್ವಂತ ಮನೆ ಹೊಂದಿರದವರ ಬಳಿ ನಿವೇಶನವೂ ಇಲ್ಲದೆ ರಾಜ್ಯ ಸರಕಾರದ ವಿವಿಧ ವಸತಿ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಕಂದಾಯ ಇಲಾಖೆಯಿಂದ 94ಸಿಸಿ ಅಡಿಯಲ್ಲಿ ನಿವೇಶನ ಹಂಚಿಕೆ ಮಾಡಿದರೆ ಮನೆ ಮಂಜೂರು ಮಾಡಬಹುದಾಗಿದ್ದರೂ ನಿವೇಶನ ಹಂಚಿಕೆಗೆ ಸರಕಾರಿ ಜಮೀನಿನ ಕೊರತೆಯಿದೆ. ಹೀಗಾಗಿ ಸ್ವಂತ ಸೂರು ಹೊಂದುವ ಕರಾವಳಿಯ ವಸತಿ ರಹಿತರ ಕನಸು ನನಸಾಗುತ್ತಿಲ್ಲ.

Advertisement

ಇದಕ್ಕೆ ಕಾರಣವೂ ಇದೆ. ಕರಾವಳಿಯಲ್ಲಿ ಸರಕಾರಿ ಭೂಮಿ ಕಡಿಮೆಯಿದೆ. ಸರಕಾರಿ ಭೂಮಿಯಲ್ಲಿ ವಾಸ ಮಾಡಿಕೊಂಡಿರುವವರಿಗೆ ಮನೆ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ ಹಕ್ಕು ಪತ್ರ ವಿತರಣೆ ಮಾಡುತ್ತಿಲ್ಲ. ಗ್ರಾಮೀಣ ಹಾಗೂ ನಗರ ಪ್ರದೇಶಕ್ಕೆ ಅನ್ವಯವಾಗುವಂತೆ 94ಸಿ/94ಸಿಸಿ ಅರ್ಜಿ ಇತ್ಯರ್ಥ ವೇಗ ಪಡೆದರೆ ಇನ್ನಷ್ಟು ಕುಟುಂಬಗಳಿಗೆ ಮನೆಯೂ ಸಿಗಲಿದೆ. ಹಾಗೆಯೇ ಗ್ರಾಮೀಣ ಭಾಗದಲ್ಲಿ ಈ ಯೋಜನೆಯಡಿ ವಸತಿ ಸಮುತ್ಛಯಗಳನ್ನು ನಿರ್ಮಿಸಲು ಸರಕಾರ ಅನುಮತಿ ನೀಡುವ ಸಂಬಂಧ ಕಂದಾಯ/ ವಸತಿ ಯೋಜನೆ ನಿಯಮ ಸಡಿಲಿಕೆ ಮಾಡಿದಲ್ಲಿ ಅನೇಕ ಕುಟುಂಬಕ್ಕೆ ಸೂರು ದೊರೆಯಲಿದೆ.

ಬಸವ ವಸತಿ, ಡಾ| ಅಂಬೇಡ್ಕರ್‌ ವಸತಿ, ದೇವರಾಜ ಅರಸು ವಸತಿ, ವಾಜಪೇಯಿ ವಸತಿ ಹಾಗೂ ಪ್ರಧಾನ ಮಂತ್ರಿ ಆವಾಸ್‌ ಯೋಜನೆಗಳಡಿ ಮೂರು ವರ್ಷಗಳಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 4.42 ಲಕ್ಷ ಮನೆ ನಿರ್ಮಾಣವಾಗಿದ್ದರೂ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಗೆ ಸಿಕ್ಕಿದ್ದು 12 ಸಾವಿರ ಮನೆ ಮಾತ್ರ.

2020-21, 2021-22 ಹಾಗೂ 2022-23ನೇ ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ 1,702, ಬೆಂಗಳೂರು ಗ್ರಾಮಾಂತರದಲ್ಲಿ 5,098, ಉಡುಪಿ ಯಲ್ಲಿ 5,471 ಹಾಗೂ ದ.ಕ.ದಲ್ಲಿ 7,218 ಮನೆ ನಿರ್ಮಾಣ ಮಾಡಲಾಗಿದೆ.

ಆದರೆ ತುಮಕೂರಿನಲ್ಲಿ 25,803, ವಿಜಯಪುರದಲ್ಲಿ 28,353, ಮೈಸೂರಿನಲ್ಲಿ 22,504, ಕಲಬುರಗಿಯಲ್ಲಿ 23,587 ಮನೆಗಳು ನಿರ್ಮಾಣವಾಗಿದೆ.

Advertisement

ನಿವೇಶನ ಹಂಚಿಕೆಯೂ ಕಡಿಮೆ
ಮುಖ್ಯಮಂತ್ರಿಗಳ ಗ್ರಾಮೀಣ ಹಾಗೂ ನಗರ ನಿವೇಶನ ಯೋಜನೆಯಡಿಯಲ್ಲಿ ಮೂರು ವರ್ಷಗಳಲ್ಲಿ 26,382 ನಿವೇಶನ ಹಂಚಿಕೆ ಮಾಡಲಾಗಿದೆ. ಇದರಲ್ಲಿ ಚಿಕ್ಕಬಳ್ಳಾಪುರದಲ್ಲಿ 11 ಸಾವಿರ, ದಾವಣಗೆರೆಯಲ್ಲಿ 3 ಸಾವಿರ, ಗದಗದಲ್ಲಿ 2 ಸಾವಿರ ಹಾಗೂ ಧಾರವಾಡದಲ್ಲಿ 1,200 ನಿವೇಶ ಹಂಚಿಕೆ ಮಾಡಲಾಗಿದೆ. ದ.ಕ. ಜಿಲ್ಲೆಗೆ ಕೇವಲ 352 ಹಾಗೂ ಉಡುಪಿಗೆ 153 ನಿವೇಶನ ಹಂಚಿಕೆ ಮಾಡಲಾಗಿದೆ.

ಮತ್ಸ್ಯಾಶ್ರಯ ಯೋಜನೆ
ಮತ್ಸ್ಯಾಶ್ರಯ ಯೋಜನೆಯಡಿಯಲ್ಲಿ 2022-23ನೇ ಸಾಲಿನಲ್ಲಿ ಉಡುಪಿಗೆ 720 ಹಾಗೂ ದ.ಕ.ಕ್ಕೆ 450 ಮನೆ ಹಂಚಿಕೆಯಾಗಿತ್ತು. ಆದರೆ ವಿವಿಧ ತಾಂತ್ರಿಕ ಸಮಸ್ಯೆಯಿಂದ ಹಂಚಿಕೆಯಾಗಿರುವ ಮನೆಗಳಲ್ಲಿ ನಿರ್ಮಾಣವಾಗಿರುವುದು ಭಾರೀ ಕಡಿಮೆ. ಅದಕ್ಕಿಂತ ಹಿಂದಿನ ಮೂರು ವರ್ಷಗಳಲ್ಲಿ ಈ ಯೋಜನೆಯಡಿ ಮನೆ ಹಂಚಿಕೆಯಾಗಿಲ್ಲ.

ಬಸವ ವಸತಿ ಯೋಜನೆ, ಡಾ| ಅಂಬೇಡ್ಕರ್‌ ವಸತಿ ಯೋಜನೆಯಡಿ ಉಡುಪಿ ಜಿಲ್ಲೆಯಲ್ಲಿ ಮನೆಗಳ ಲಭ್ಯತೆಯಿದೆ. ಆದರೆ ಮನೆ ಇಲ್ಲದವರಲ್ಲಿ ಸ್ವಂತ ಜಮೀನು ಇಲ್ಲದೆ ಇರುವುದರಿಂದ ಅವರಿಗೆ ಮನೆ ಹಂಚಿಕೆ ಮಾಡಲು ಬರುವುದಿಲ್ಲ. ಕಂದಾಯ ಇಲಾಖೆಯಿಂದ 94ಸಿಸಿ ಅಡಿಯಲ್ಲಿ ನಿವೇಶನ ಹಂಚಿಕೆ ಮಾಡಿದರೆ ತತ್‌ಕ್ಷಣವೇ ಮನೆ ನೀಡಬಹುದು. ಆದರೆ ನಿವೇಶನ ಹಂಚಿಕೆಗೆ ಸರಕಾರಿ ಜಾಗದ ಕೊರತೆಯಿದೆ. ಗ್ರಾಮೀಣ ಭಾಗದಲ್ಲಿ ಬಹುಮಹಡಿ ವಸತಿ ಸಮುತ್ಛಯ ನಿರ್ಮಾಣಕ್ಕೆ ಸರಕಾರ ಅನುಮತಿ ನೀಡುವುದಿಲ್ಲ.
– ಪ್ರಸನ್ನ ಎಚ್‌., ಉಡುಪಿ ಜಿ.ಪಂ. ಸಿಇಒಇ

Advertisement

Udayavani is now on Telegram. Click here to join our channel and stay updated with the latest news.

Next