Advertisement

ಸರಕಾರಿ ಆಸ್ಪತ್ರೆಗಳು ಆತಂಕ ಹುಟ್ಟಿಸುವ ತಾಣಗಳಾಗದಿರಲಿ

09:50 PM Nov 03, 2022 | Team Udayavani |

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ಬಾಣಂತಿ ಹಾಗೂ ನವಜಾತ ಶಿಶುಗಳು ಮೃತಪಟ್ಟಿರುವ ವಿಚಾರ ನಿಜಕ್ಕೂ ದುರಂತ.

Advertisement

ರಾಜ್ಯದಲ್ಲಿ ಬಡವರ ಪಾಲಿಗೆ ಸರಕಾರಿ ಆಸ್ಪತ್ರೆಗಳೇ ಒಂದು ರೀತಿಯಲ್ಲಿ ದೇವಾಲಯ ಇದ್ದಂತೆ. ಆರೋಗ್ಯದಲ್ಲಿ ಏನೇ ತೊಂದರೆ ಆದರೂ ಸರಕಾರಿ ಆಸ್ಪತ್ರೆಗಳೇ ಆಸರೆ. ಆದರೆ ಸರಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯ ತೋರಿದರೆ ಎಲ್ಲಿಗೆ ಹೋಗಬೇಕು?

ಸರಕಾರ ಈ ಕುರಿತು ಗಂಭೀರವಾಗಿ ಪರಿಗಣಿಸಬೇಕಾಗಿದೆ. ಸರಕಾರಿ ಆಸ್ಪತ್ರೆಗಳ ವ್ಯವಸ್ಥೆ ಇಂದು ಸಾಕಷ್ಟು ಸುಧಾರಿಸಿದೆ. ಕೆಲವೆಡೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಸಿಗುವಂಥ ಸೌಕರ್ಯ ಸರಕಾರಿ ಆಸ್ಪತ್ರೆಗಳಲ್ಲೇ ಸಿಗುತ್ತಿದೆ. ಆದರೆ ಕೆಲವೊಮ್ಮೆ ನಡೆಯುವ ಇಂತಹ ಘಟನೆಗಳು ಇಡೀ ಸರಕಾರಿ ಆಸ್ಪತ್ರೆ ವ್ಯವಸ್ಥೆ ಮೇಲೆ ಅಪನಂಬಿಕೆ ಮತ್ತು ಅನುಮಾನ, ಆತಂಕ ಹುಟ್ಟಿಸುತ್ತವೆ.

ನಗರ ಹಾಗೂ ಗ್ರಾಮೀಣ ಭಾಗದ ಕೋಟ್ಯಂತರ ಜನ ಇಂದಿಗೂ ಆರೋಗ್ಯ ಸೇವೆಗಾಗಿ ಸರಕಾರಿ ಆಸ್ಪತ್ರೆ, ಸಮುದಾಯ ಭವನ, ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನೇ ಆಶ್ರಯಿಸಿದ್ದಾರೆ.

ಸರಕಾರಿ  ಆಸ್ಪತ್ರೆಗಳಲ್ಲಿನ ಬಹುತೇಕ ಸಿಬಂದಿ ಸೇವಾ ಮನೋಭಾವ ಹಾಗೂ ಸಜ್ಜನಿಕೆ ಉಳ್ಳವರೇ ಆಗಿರುತ್ತಾರೆ. ಆದರೆ ಎಲ್ಲೋ ಒಂದಿಬ್ಬರು ತೋರುವ ನಿರ್ಲಕ್ಷ್ಯಕ್ಕೆ ಸಂಭವಿಸುವ ದುರಂತಗಳಿಂದ ಸಾರ್ವಜನಿಕವಾಗಿ ಆಕ್ರೋಶಕ್ಕೆ ಕಾರಣವಾಗಬೇಕಾಗುತ್ತದೆ.

Advertisement

ಆರೋಗ್ಯ ಇಲಾಖೆ  ಈ ವಿಚಾರದಲ್ಲಿ ಮುತುವರ್ಜಿ ವಹಿಸಿ ಸರಕಾರಿ ಆಸ್ಪತ್ರೆ, ಸಮುದಾಯ ಆರೋಗ್ಯ ಕೇಂದ್ರ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಸಿಬಂದಿಗೆ ಅಗತ್ಯವಾದರೆ ಸಾರ್ವಜನಿಕರ ಜತೆ ಯಾವ ರೀತಿ ನಡೆದುಕೊಳ್ಳಬೇಕು ಎಂಬ ಬಗ್ಗೆ ತರಬೇತಿ ನೀಡುವುದು ಒಳ್ಳೆಯದು. ಜತೆಗೆ ಸರಕಾರಿ ಆಸ್ಪತ್ರೆಗಳಲ್ಲಿ ಸಿಬಂದಿ ಕೊರತೆ ನಿವಾರಿಸಿ ಇರುವ ಸಿಬಂದಿಯ ಮೇಲಿನ ಒತ್ತಡ ಕಡಿಮೆ ಮಾಡಬೇಕು. ಕೆಲವೊಮ್ಮೆ ಸಿಬಂದಿ ಕೊರತೆಯಿಂದಾಗಿ ಇರುವ ಸಿಬಂದಿಯೇ ಹೆಚ್ಚು ಕೆಲಸ ಮಾಡಬೇಕಾಗಿ ಬಂದಾಗಲೂ ಸಮಸ್ಯೆಯಾದ ಉದಾಹರಣೆಗಳಿವೆ.

ಮಂಡ್ಯದಲ್ಲಿ ಅನಾರೋಗ್ಯ ಪೀಡಿತ ಹಸುಗೂಸನ್ನು ಆಸ್ಪತ್ರೆಗೆ ಕರೆದೊಯ್ಯುವ ಅವಸರದಲ್ಲಿ  ಹೆಲ್ಮೆಟ್‌ ಧರಿಸದ ದಂಪತಿಯನ್ನು ತಡೆದ ಸಂಚಾರ ಪೊಲೀಸರು ದಂಡಕ್ಕೆ ಪೀಡಿಸಿದ್ದು, ಹಣ ಇಲ್ಲದೆ ಸ್ನೇಹಿತನ ಮೂಲಕ ಗೂಗಲ್‌ ಪೇ ಮೂಲಕ ಹಣ ಪಡೆದು ಪೊಲೀಸರಿಗೆ ದಂಡ ಪಾವತಿಸಿದ ಘಟನೆ ನಡೆದಿದೆ.

ಇಲ್ಲಿ ಕಾನೂನು ಪ್ರಕಾರ ಸಂಚಾರಿ ಪೊಲೀಸರು ಮಾಡಿದ್ದು ಸರಿ ಆದರೂ ಮಾನವೀಯತೆ ದೃಷ್ಟಿಯಿಂದ ಯೋಚಿಸಬೇಕಾಗಿತ್ತು. ಅನಾರೋಗ್ಯ ಪೀಡಿತ ಮಗುವನ್ನು ಆಸ್ಪತ್ರೆಗೆ ಕರೆದೊಯ್ಯಬೇಕು. ಹೀಗಾಗಿ ಹೆಲ್ಮೆಟ್‌ ಮರೆತು ಬಂದೆ ಎಂದು ಹೇಳಿದರೂ ಕೇಳದ ಪೊಲೀಸರ ವರ್ತನೆ ಬಗ್ಗೆ ವ್ಯಾಪಕ ಟೀಕೆಯೂ ವ್ಯಕ್ತವಾಗುತ್ತಿದೆ. ಇಂತಹ ಸಂದರ್ಭಗಳಲ್ಲಿ ವಾಹನ ಸಂಖ್ಯೆ ನಮೂದಿಸಿ ದಂಡದ ರಸೀದಿ ಕೊಟ್ಟು ಅನಂತರ ಪಾವತಿಸಲು ಅವಕಾಶವನ್ನಾದರೂ ಕೊಡಬಹುದಿತ್ತು.

ಸಮಾಜದಲ್ಲಿ ಪೊಲೀಸರು, ವೈದ್ಯರು, ಬಸ್‌ ಚಾಲಕ, ನಿರ್ವಾಹಕರು, ಶಿಕ್ಷಕರ ಪಾತ್ರ ಹಾಗೂ ಜವಾಬ್ದಾರಿ ದೊಡ್ಡದು. ಮಾನವೀಯತೆ ಹಾಗೂ ಕಷ್ಟಕ್ಕೆ ಸ್ಪಂದಿಸುವ ಗುಣ ಮುಖ್ಯವಾಗುತ್ತದೆ. ಕೆಲವೊಮ್ಮೆ ನಿಯಮಗಳಿಗಿಂತ ತತ್‌ಕ್ಷಣದ ತುರ್ತು ಗಮನಿಸಿ ಸಹಾಯ ಅಥವಾ ನೆರವಾಗುವುದು ಅತೀ ಮುಖ್ಯವಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next