Advertisement

ಸರಕಾರಿ ಆಸ್ಪತ್ರೆಗಳು ಮೇಲ್ದರ್ಜೆಗೆ: ಡಿಸಿ

01:29 AM Jun 17, 2020 | Hari Prasad |

ಉಡುಪಿ: ಜಿಲ್ಲೆಯ ಎಲ್ಲ ಸರಕಾರಿ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್‌ ತಿಳಿಸಿದ್ದಾರೆ.

Advertisement

ಮಂಗಳವಾರ ಜಿ.ಪಂ. ಸಭಾಂಗಣದಲ್ಲಿ ನಡೆದ ಕೋವಿಡ್‌-19 ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಕುಂದಾಪುರದ ಡಾ| ಜಿ. ಶಂಕರ್‌ ಆಸ್ಪತ್ರೆಗೆ ಈಗಾಗಲೇ ಎಸ್‌ಬಿಐಯಿಂದ 4 ಮತ್ತು ಇನ್ಫೋಸಿಸ್‌ನಿಂದ 3 ವೆಂಟಿಲೇಟರ್‌ಗಳ ಸರಬರಾಜು ಆಗಿದ್ದು, ಅಳವಡಿಕೆ ಪ್ರಗತಿಯಲ್ಲಿದೆ. ಕನಿಷ್ಠ 40 ಬೆಡ್‌ಗಳಿಗೆ ಆಕ್ಸಿಜನ್‌ ಸಂಪರ್ಕ ಕಲ್ಪಿಸುವ ಮೂಲಕ ಇದನ್ನು ಸುಸಜ್ಜಿತ ಕೋವಿಡ್‌ ಆಸ್ಪತ್ರೆ ಮಾಡಲು ನಿರ್ಧರಿಸಲಾಗಿದೆ ಎಂದರು.

ಮಾಹಿತಿ ನೀಡದ ಆಸ್ಪತ್ರೆಗಳ ವಿರುದ್ಧ ಕ್ರಮ
ಜಿಲ್ಲೆಯ ಎಲ್ಲ ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್‌ ಹೋಂಗಳಲ್ಲಿ ಫೀವರ್‌ ಕ್ಲಿನಿಕ್‌ ಸ್ಥಾಪಿಸಿ ರೋಗಿಗಳ ತಪಾಸಣೆ ನಡೆಸಬೇಕು. ತಮ್ಮಲ್ಲಿ ದಾಖಲಾಗುವ ಎಲ್ಲ ಐ.ಎಲ್‌.ಐ. (ಫ್ಲ್ಯೂ ಜ್ವರ ಲಕ್ಷಣ) ಮತ್ತು ಸಾರಿ (ತೀವ್ರ ಉಸಿರಾಟದ ಸಮಸ್ಯೆ) ಪ್ರಕರಣಗಳ ಕುರಿತು ಪ್ರತಿ ದಿನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡದ ಆಸ್ಪತ್ರೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಜಿಲ್ಲೆಯಲ್ಲಿ ಕೋವಿಡ್‌-19 ರೋಗಿಗಳು ಅತ್ಯಂತ ಶೀಘ್ರದಲ್ಲಿ ಗುಣಮುಖರಾಗುತ್ತಿದ್ದು, ಎಲ್ಲ ವೈದ್ಯಕೀಯ ಸಿಬಂದಿಗೆ ಜಿಲ್ಲಾಡಳಿತ ಅಭಿನಂದನೆ ಸಲ್ಲಿಸುತ್ತಿದೆ ಎಂದರು. ಜಿಲ್ಲಾ ಸರ್ಜನ್‌ ಡಾ| ಮಧುಸೂಧನ್‌ ನಾಯಕ್‌, ಡಿಎಚ್‌ಒ ಡಾ| ಸುಧೀರ್‌ ಚಂದ್ರ ಸೂಡ, ನೋಡಲ್‌ ಅಧಿಕಾರಿ ಡಾ| ಪ್ರಶಾಂತ್‌ ಭಟ್‌, ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

ಗುಣಮುಖ ಪ್ರಮಾಣ ಅಧಿಕ
ಹೋಂ ಕ್ವಾರಂಟೈನ್‌ನಲ್ಲಿ ಇರುವವರ ಮನೆಗಳಿಗೆ ಆರೋಗ್ಯ ಇಲಾಖೆ ಸಿಬಂದಿ ಪ್ರತೀ ದಿನ ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.ಯಾವುದೇ ಕೋವಿಡ್‌-19 ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಕೋವಿಡ್‌ ಆಸ್ಪತ್ರೆಗೆ ದಾಖಲಿಸಲು ಕ್ರಮಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಇದುವರೆಗೆ ಕೋವಿಡ್‌ -19ರಿಂದ ಗುಣಮುಖರಾಗುವ ಪ್ರಮಾಣ ಅತ್ಯಂತ ಹೆಚ್ಚಿದೆ ಎಂದರು.

2 ತಿಂಗಳು ಸವಾಲಿನದ್ದು
ಮುಂದಿನ 2 ತಿಂಗಳು ಜಿಲ್ಲಾಡಳಿತಕ್ಕೆ ಸವಾಲಿನದಾಗಿದ್ದು, ಹೊರರಾಜ್ಯದಿಂದ ಇನ್ನೂ ಅನೇಕ ಮಂದಿ ಆಗಮಿಸುತ್ತಿದ್ದಾರೆ. ಅದರಲ್ಲಿ ಕೋವಿಡ್‌-19 ರೋಗ ಲಕ್ಷಣಗಳಿರುವ ಮತ್ತು ವಿಶೇಷ ವರ್ಗದವರನ್ನು ಮಾತ್ರ ಪರೀಕ್ಷಿಸುತ್ತಿದ್ದು, ಉಳಿದವರನ್ನು ಪರೀಕ್ಷೆ ಮಾಡುತ್ತಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಸರ್ವೆಲೆನ್ಸ್‌ ಅನ್ನು ತೀವ್ರಗೊಳಿಸುವಂತೆ ಎಲ್ಲ ವೈದ್ಯಾಧಿಕಾರಿಗಳಿಗೆ ಸೂಚಿಸಿದ್ದೇನೆ.
– ಜಿ.ಜಗದೀಶ್‌ ಜಿಲ್ಲಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next