ದಾವಣಗೆರೆ: ರಾಜ್ಯಾದ್ಯಂತ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುವ ಮಧ್ಯಾಹ್ನದ
ಬಿಸಿಯೂಟ ಸಿಬ್ಬಂದಿಗೆ ನಿವೃತ್ತಿ ವೇಳೆ ಇಡಿಗಂಟು ನೀಡಲು ಒಪ್ಪಿಗೆ ನೀಡಿದ್ದ ರಾಜ್ಯ ಸರ್ಕಾರ, ಈಗ ಅದರ ಅನುಷ್ಠಾನಕ್ಕಾಗಿ ಮಾರ್ಗಸೂಚಿ ಪ್ರಕಟಿಸಿದೆ. ಇಡಿಗಂಟು ಸೌಲಭ್ಯ ಪಡೆಯಲು ಸೇವಾವಧಿಯ ಹಾಜರಾತಿ ದಾಖಲೆಯನ್ನು ಪ್ರಮುಖ ದಾಖಲೆಯಾಗಿ ಪರಿಗಣಿಸಲು ಸೂಚಿಸಿದ್ದು, ಇದರ ಪರಿಶೀಲನೆಗೆ ತ್ರಿಸದಸ್ಯ ಸಮಿತಿ ರಚಿಸಿದೆ.
Advertisement
ಪಿಎಂ ಪೋಷಣ್ ಶಕ್ತಿ ನಿರ್ಮಾಣ ಯೋಜನೆಯಡಿ ಆಯ್ಕೆಗೊಂಡು 60 ವರ್ಷ ವಯೋಮಾನ ಪೂರ್ಣಗೊಳಿಸಿ 31-3-2022ಕ್ಕೆ ಅಥವಾ ನಂತರ ಕರ್ತವ್ಯದಿಂದ ಬಿಡುಗಡೆ ಹೊಂದಿದ ಅಡುಗೆ ಸಿಬ್ಬಂದಿಗೆ ಅಂತಿಮವಾಗಿ ಒಂದು ಬಾರಿಯ ಇಡಿಗಂಟು ಸೌಲಭ್ಯವನ್ನು ಸರ್ಕಾರ ನೀಡುತ್ತಿದೆ. ಐದು ವರ್ಷ ಮೇಲ್ಪಟ್ಟು ಹಾಗೂ 15 ವರ್ಷಕ್ಕಿಂತ ಕಡಿಮೆ ಅವಧಿ ಸೇವೆ ಸಲ್ಲಿಸಿದವರಿಗೆ 30,000 ರೂ. ಹಾಗೂ 15 ವರ್ಷ ಹಾಗೂ ಅದರ ಮೇಲ್ಪಟ್ಟು ಸೇವೆ ಸಲ್ಲಿಸಿದವರಿಗೆ 40 ಸಾವಿರ ರೂ. ನೀಡಲು ಸರ್ಕಾರ ತೀರ್ಮಾನಿಸಿದೆ. ಐದು ವರ್ಷಕ್ಕಿಂತ ಕಡಿಮೆ ಸೇವೆ ಸಲ್ಲಿಸಿದವರಿಗೆ ಇಡಿಗಂಟು ಸೌಲಭ್ಯ ದೊರೆಯುವುದಿಲ್ಲ.
Related Articles
Advertisement
ಬಳಿಕ ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಮಂಜೂರಾತಿ ಆದೇಶ ಆಧರಿಸಿ, ಅಡುಗೆ ಸಿಬ್ಬಂದಿಗೆ ಅಥವಾ ಅರ್ಹ ಕಾನೂನುಬದ್ಧ ಅವಲಂಬಿತರ ಬ್ಯಾಂಕ್ ಖ್ಯಾತೆಗೆ ನೇರವಾಗಿ ಇಡಿಗಂಟಿನ ಮೊತ್ತ ಬಿಡುಗಡೆ ಮಾಡಬೇಕು. ಪ್ರತಿವರ್ಷ ಸಲ್ಲಿಸುವ ಮುಂದಿನ ಆಯವ್ಯಯದ ಬೇಡಿಕೆಯಲ್ಲಿ ಆಯಾ ವರ್ಷದಲ್ಲಿ 60 ವರ್ಷ ಪೂರೈಸುವ ಅಡುಗೆ ಸಿಬ್ಬಂದಿ ಮಾಹಿತಿಯೊಂದಿಗೆ ಅಂದಾಜು ಅನುದಾನ ಬೇಡಿಕೆ ಸಲ್ಲಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಆಯುಕ್ತ ಡಾ| ಕೆ.ವಿ.ತ್ರಿಲೋಕಚಂದ್ರ ನಿರ್ದೇಶನನೀಡಿದ್ದಾರೆ. ರಾಜ್ಯಾದ್ಯಂತ 1.20 ಲಕ್ಷ ಬಿಸಿಯೂಟ ಸಿಬ್ಬಂದಿ ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದು ಇವರಲ್ಲಿ ಸಾವಿರಾರು ಸಿಬ್ಬಂದಿ ಎರಡು ದಶಕಕ್ಕಿಂತ ಹೆಚ್ಚಿನ ಅವಧಿಯಿಂದ ಸೇವೆ ಸಲ್ಲಿಸುತ್ತಿದ್ದು ನಿವೃತ್ತಿ ಅಂಚಿನಲ್ಲಿದ್ದಾರೆ. 31-3-2022ಕ್ಕೆ ಅಥವಾ ನಂತರ ನಿವೃತ್ತಿಯಾದವರಿಗೆ ಸರ್ಕಾರ ಇಡಿಗಂಟು ಸೌಲಭ್ಯ ನೀಡಲು ನಿರ್ಧರಿಸಿದೆ. ಪ್ರಸ್ತುತ ಅವರಿಗೆ ಪ್ರತಿ ತಿಂಗಳು 3600 ರೂ. ಗೌರವಧನ ನೀಡಲಾಗುತ್ತಿದ್ದು, ಭವಿಷ್ಯ ನಿಧಿ ಸೇರಿದಂತೆ ಯಾವುದೇ ಸೌಲಭ್ಯ ಇರಲಿಲ್ಲ. ಇಡಿಗಂಟು ಸೌಲಭ್ಯಕ್ಕಾಗಿ ಬಿಸಿಯೂಟ ಸಂಘಟನೆಗಳು ಎರಡು ದಶಕಗಳಿಂದ ಹೋರಾಟ ಮಾಡುತ್ತಲೇ ಬಂದಿದ್ದವು. ಈಗ ಸರ್ಕಾರ ಇಡಿಗಂಟು ನೀಡಲು ಅಸ್ತು ಎಂದಿದ್ದು ಅದರ ಅನುಷ್ಠಾನಕ್ಕೂ ಮುಂದಾಗಿದೆ. ಅರ್ಹ ಅಡುಗೆ ಸಿಬ್ಬಂದಿಗೆ ಇಡಿಗಂಟು ನೀಡುವ ಸಂದರ್ಭದಲ್ಲಿ ಸರ್ಕಾರದ ಆದೇಶದಲ್ಲಿ ಉಲ್ಲೇಖೀಸಿದ ಎಲ್ಲ ಷರತ್ತುಗಳನ್ನು ಜಿಲ್ಲಾ ಮತ್ತು ತಾಲೂಕು ಹಂತಗಳಲ್ಲಿನ ಅನುಷ್ಠಾನಾಧಿಕಾರಿಗಳು ಕಡ್ಡಾಯವಾಗಿ ಪಾಲಿಸಬೇಕು. ಪ್ರತಿ ವರ್ಷ ಆ.20ರೊಳಗೆ ರಾಜ್ಯ ಕಚೇರಿಗೆ ಇಡಿಗಂಟು ಅಂದಾಜು ಅನುದಾನ ಬೇಡಿಕೆ ಸಲ್ಲಿಸಬೇಕು.
●ಡಾ|ತ್ರಿಲೋಕಚಂದ್ರ, ಆಯುಕ್ತರು,
ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು *ಎಚ್.ಕೆ.ನಟರಾಜ