Advertisement

ಗೃಹ ಸಾಲಕ್ಕೆ ಸರ್ಕಾರವೇ ಗ್ಯಾರಂಟಿ!

11:47 AM Sep 23, 2017 | |

ಬೆಂಗಳೂರು: ಗೃಹ ಮಂಡಳಿ ವತಿಯಿಂದ ಸುಸಜ್ಜಿತ ಫ್ಲ್ಯಾಟ್‌ಗಳನ್ನು ನಿರ್ಮಿಸಿ ರಿಯಾಯ್ತಿ ದರದಲ್ಲಿ ನೀಡಲಾಗುತ್ತಿದ್ದು, ಸಾಮಾನ್ಯ ಜನರ ಅನುಕೂಲಕ್ಕಾಗಿ ಬ್ಯಾಂಕ್‌ ಸಾಲಕ್ಕೆ ಸರ್ಕಾರದಿಂದಲೇ ಮೂರನೇ ಖಾತರಿ (ತರ್ಡ್‌ ಪಾರ್ಟಿ ಗ್ಯಾರಂಟಿ) ನೀಡುವುದಾಗಿ ವಸತಿ ಸಚಿವ ಎಂ.ಕೃಷ್ಣಪ್ಪ ಹೇಳಿದರು.

Advertisement

ಕರ್ನಾಟಕ ಗೃಹ ಮಂಡಳಿಯು ಕೆಂಗೇರಿ ಪ್ಲಾಟಿನಂ ವಸತಿ ಸಮುಚ್ಚಯದಲ್ಲಿ ಆಯೋಜಿಸಿರುವ ಮೂರು ದಿನಗಳ “ಪ್ರಾಪರ್ಟಿ ಎಕ್ಸ್‌ಪೋ’ ಕಾರ್ಯಕ್ರಮವನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು, “ಸುಭದ್ರ ಸೂರಿನಿಂದ ಸುಖಮಯ ಜೀವನ ಪರಿಕಲ್ಪನೆಯಡಿ ಇದೇ ಮೊದಲ ಬಾರಿಗೆ ಗೃಹ ಮಂಡಳಿಯಿಂದ ಫ್ಲ್ಯಾಟ್‌ ಖರೀದಿಸುವ ಗ್ರಾಹಕರಿಗೆ ಆರ್ಥಿಕ ನೆರವು ಕಲ್ಪಿಸಲು ಬ್ಯಾಂಕ್‌ ಸಾಲಕ್ಕೆ ರಾಜ್ಯ ಸರ್ಕಾರವೇ ಖಾತರಿ ನೀಡಲು ಮುಂದಾಗಿದೆ’ ಎಂದು ತಿಳಿಸಿದರು.

“ವಾರ್ಷಿಕ ಆದಾಯ 3 ಲಕ್ಷ ರೂ. ಮಿತಿಯೊಳಗಿರುವ ಅರ್ಜಿದಾರರು ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಬ್ಯಾಂಕ್‌ ಸಾಲದ ಮೂಲಕ ಫ್ಲ್ಯಾಟ್‌ ಖರೀದಿಸುವವರಿಗೆ ಕೇಂದ್ರ ಸರ್ಕಾರದಿಂದ ವಿಶೇಷ ಸಹಾಯಧನ, ಕ್ರೆಡಿಟ್‌ ಲಿಂಕ್‌ ಸ್ಕೀಮ್‌ ಅಡಿ ಬಡ್ಡಿಯಲ್ಲಿ ವಿಶೇಷ ರಿಯಾಯ್ತಿ ಸಿಗಲಿದೆ,’ ಎಂದು ತಿಳಿಸಿದರು.

ಮಾರುಕಟ್ಟೆಗಿಂತ ಕಡಿಮೆ ಬೆಲೆ:ಫ್ಲ್ಯಾಟ್‌ ಬೆಲೆ ದುಬಾರಿಯಾಗಿದ್ದು, ಸಾಮಾನ್ಯ ಜನರ ಕೈಗೆಟುಕದಂತಾಗಿದೆ ಎಂಬ ಮಾತು ಕೇಳಿಬಂದ ಹಿನ್ನೆಲೆಯಲ್ಲಿ ಮಂಡಳಿಯಲ್ಲಿ ಚರ್ಚಿಸಿ ದರ ಇಳಿಕೆ ಮಾಡಲಾಗಿದೆ. ಸಾಮಾನ್ಯ ಜನರು ಗೃಹ ಮಂಡಳಿಯ ಫ್ಲ್ಯಾಟ್‌ಗಳನ್ನು ಖರೀದಿಸುವಂತಾಗಬೇಕು ಎಂಬ ಉದ್ದೇಶದಿಂದ ಮಾರುಕಟ್ಟೆ ದರಗಿಂತ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ಫ್ಲ್ಯಾಟ್‌ ನಿರ್ಮಿಸಿ ಹಂಚಿಕೆ ಮಾಡಲಾಗುತ್ತಿದೆ ಎಂದು ಸಚಿವ ಕೃಷ್ಣಪ್ಪ ಹೇಳಿದರು.

ನೋಟು ಅಮಾನ್ಯದಿಂದ ಹಿನ್ನಡೆ: ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಮಾಲೀಕಯ್ಯ ಗುತ್ತೇದಾರ್‌ ಮಾತನಾಡಿ, “ಫ್ಲ್ಯಾಟ್‌ಗಳ ನಿರ್ಮಾಣ ಕಾರ್ಯ ಬಹು ದಿನ ಹಿಂದೆಯೇ ಪೂರ್ಣಗೊಳ್ಳಬೇಕಿತ್ತು. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ದಿಢೀರ್‌ 500 ರೂ., 1000 ರೂ. ಮುಖಬೆಲೆಯ ನೋಟು ಅಮಾನ್ಯಗೊಳಿಸಿದ್ದರಿಂದ ಗ್ರಾಹಕರು ಫ್ಲ್ಯಾಟ್‌ ಖರೀದಿಯಿಂದ ಹಿಂದೆ ಸರಿದಿದ್ದರು. ಕೇಂದ್ರ ಸರ್ಕಾರದ ನೋಟು ಅಮಾನ್ಯ ಕ್ರಮದಿಂದ ಆರ್ಥಿಕ ವ್ಯವಸ್ಥೆಗೆ ಭಾರಿ ಹೊಡೆತ ಬಿದ್ದಿದೆ. ಹೀಗಾಗಿ ವಸತಿ ನಿರ್ಮಾಣ ಯೋಜನೆಗಳಿಗೆ ಹಿನ್ನಡೆಯಾಗಿದೆ,’ ಎಂದು ಹೇಳಿದರು.

Advertisement

ಸೇವಾ ಮನೋಭಾವ: “ಲಾಭ ಪಕ್ಕಕ್ಕಿರಿಸಿ ಸೇವಾ ಮನೋಭಾವದೊಂದಿಗೆ ವಸತಿ ಸಮುಚ್ಚಯಗಳನ್ನು ನಿರ್ಮಿಸಿ ಕೈಗೆಟುಕುವ ದರದಲ್ಲಿ ನೀಡಲಾಗುತ್ತಿದೆ. ಫ್ಲ್ಯಾಟ್‌ ಹಂಚಿಕೆಯಲ್ಲಿ ತಾರತಮ್ಯಕ್ಕೆ ಅವಕಾಶವಿಲ್ಲ. “ಮೊದಲು ಬಂದವರಿಗೆ ಮೊದಲ ಆದ್ಯತೆ’ ಆಧಾರದಲ್ಲಿ ಹಂಚಿಕೆ ಮಾಡಲಾಗುವುದು. ದಸರಾ ವಿಶೇಷ ಕೊಡುಗೆಯಾಗಿ ಮೇಳದಲ್ಲಿ ಒಂದು ಲಕ್ಷ ರೂ. ಮುಂಗಡ ಠೇವಣಿ ನೀಡಿ ಫ್ಲ್ಯಾಟ್‌ ಖರೀದಿಸಿದವರಿಗೆ ಶೇ.2ರಷ್ಟು ರಿಯಾಯ್ತಿ ಸಿಗಲಿದೆ. ಎಲ್ಲ ಫ್ಲ್ಯಾಟ್‌ಗಳು à ಮೇಳದಲ್ಲಿ ಮಾರಾಟವಾಗುವ ವಿಶ್ವಾಸವಿದೆ’ ಎಂದರು.

ಫ್ಲ್ಯಾಟ್‌ ಖರೀದಿಸಿದ ರಾಜಶೇಖರ್‌ ಹೊಕ್ರಾಣಿ ಎಂಬುವರಿಗೆ ಸಚಿವ ಎಂ.ಕೃಷ್ಣಪ್ಪ ಅವರು ಹಂಚಿಕೆ ಪತ್ರ ನೀಡುವ ಮೂಲಕ ಮೇಳಕ್ಕೆ ಚಾಲನೆ ನೀಡಿದರು. ಶಾಸಕ ಎಸ್‌.ಟಿ.ಸೋಮಶೇಖರ್‌, ಪಾಲಿಕೆ ಸದಸ್ಯ ಮುನಿರಾಜು, ಗೃಹ ಮಂಡಳಿ ಆಯುಕ್ತ ಎ.ಬಿ.ಇಬ್ರಾಹಿಂ, ಗೃಹ ಮಂಡಳಿ ನಿರ್ದೇಶಕ ಶಿವಾನಂದ್‌ ಇತರರು ಉಪಸ್ಥಿತರಿದ್ದರು.

ಬೆಲೆ ಇಳಿಕೆ ಸೌಲಭ್ಯಕ್ಕಾಗಿ ಮನವಿ: ಕೆಂಗೇರಿ ಉಪನಗರದ “ಕೆಂಗೇರಿ ಪ್ಲಾಟಿನಂ’ ವಸತಿ ಸಮುಚ್ಚಯದಲ್ಲಿ ಈ ಹಿಂದೆ ಫ್ಲ್ಯಾಟ್‌ ದರ ಪ್ರತಿ ಚದರ ಅಡಿಗೆ 3,650 ರೂ. ಇತ್ತು. ಇದೀಗ ಪ್ರತಿ ಚದರ ಅಡಿ ದರದಲ್ಲಿ 350 ರೂ. ಇಳಿಸಿ 3,300 ರೂ.ಗೆ ನಿಗದಿ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ “ಕೆಂಗೇರಿ ಪ್ಲಾಟಿನಂ’ನಲ್ಲಿ ಈಗಾಗಲೇ ಫ್ಲ್ಯಾಟ್‌ ಖರೀದಿಸಿದವರು ತಮಗೂ ಬೆಲೆ ಇಳಿಕೆ ಲಾಭ ನೀಡುವಂತೆ ಸಮಾರಂಭದಲ್ಲಿ ಸಚಿವರಿಗೆ ಮನವಿ ಮಾಡಿದರು. ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಸಚಿವ ಎಂ.ಕೃಷ್ಣಪ್ಪ ಭರವಸೆ ನೀಡಿದರು.

ಯಾರಿಗೆ ಎಷ್ಟು ಸಹಾಯಧನ?: 3 ಲಕ್ಷಕ್ಕೂ ಕಡಿಮೆ ವಾರ್ಷಿಕ ಆದಾಯ ಹೊಂದಿರುವವರು ಒಂದು ಬೆಡ್‌ ರೂಮ್‌ನ ಫ್ಲ್ಯಾಟ್‌ ಖರೀದಿಸಿದಾಗ ಕೇಂದ್ರ ಸರ್ಕಾರದಿಂದ 1.5 ಲಕ್ಷ ರೂ.ವರೆಗೆ ಸಹಾಯಧನ ಸಿಗಲಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ 1.80 ಲಕ್ಷ ರೂ.ವರೆಗೆ ವಿಶೇಷ ಸಹಾಯಧನ ಲಭ್ಯವಿದೆ. ಹಾಗೇ ವಾರ್ಷಿಕ 18 ಲಕ್ಷ ರೂ.ವರೆಗೆ ಆದಾಯ ಹೊಂದಿರುವವರು ಫ್ಲ್ಯಾಟ್‌ ಖರೀದಿಸಿದರೆ ಗರಿಷ್ಠ 2.67 ಲಕ್ಷ ರೂ.ವರೆಗೆ ಕ್ರೆಡಿಟ್‌ ಲಿಂಕ್‌ ಸ್ಕೀಮ್‌ ಅಡಿ ಬಡ್ಡಿಯಲ್ಲಿ ವಿಶೇಷ ರಿಯಾಯ್ತಿ ಪಡೆಯಬಹುದು. ಪ್ರಧಾನ ಮಂತ್ರಿ ಆವಾಸ್‌ ಯೋಜನೆಯಡಿ ಬ್ಯಾಂಕ್‌ ಸಾಲ ಪಡೆದು ಫ್ಲ್ಯಾಟ್‌ ಖರೀದಿಸಿದರೆ ಮಾತ್ರ ಸಹಾಯಧನ ಸೌಲಭ್ಯ ಸಿಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next