ಪುತ್ತೂರು: ಸರಕಾರ ಫಲಾ ನುಭವಿಗಳಿಗೆ ಸವಲತ್ತು ನೀಡುವ ಮೂಲಕ ಹೈನುಗಾರಿಕೆ ಮತ್ತು ರೈತರ ಅಭಿವೃದ್ಧಿಗಾಗಿ ಯೋಜನೆ ರೂಪಿಸುತ್ತಿದೆ ಎಂದು ಶಾಸಕ ಸಂಜೀವ ಮಠಂದೂರು ಹೇಳಿದರು.
ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಪಶುಪಾಲನೆ ಇಲಾಖೆಯಿಂದ ಪುತ್ತೂರು ಪಶುವೈದ್ಯಕೀಯ ಕಚೇರಿಯಲ್ಲಿ ನಡೆದ ಫಲಾನುಭವಿಗಳಿಗೆ ಹಸು ಖರೀದಿಗೆ ಸಾಲ ವಿತರಣ ಪತ್ರ ಮತ್ತು ಹಾಲು ಕರೆಯುವ ಯಂತ್ರವನ್ನು ವಿತರಿಸಿ ಅವರು ಮಾತನಾಡಿದರು.
ಹಾಲು ಉತ್ಪಾದಕರರಿಗೆ ಸರಕಾರ ಪ್ರೋತ್ಸಾಹ ನೀಡುತ್ತಿದೆ. ಸಾಲದ ವಿತರಣೆಯಿಂದ ಸಮಸ್ಯೆ ಆಗಬಾರದು ಎಂದು ಈ ವರ್ಷ 300 ಕೋಟಿ ರೂ. ಅನುದಾನದಲ್ಲಿ ಹಾಲು ಉತ್ಪಾದಕರ ಬ್ಯಾಂಕ್ ಸ್ಥಾಪಿಸಲು ಸರಕಾರ ಚಿಂತನೆ ನಡೆಸಿದೆ. ಹೈನುಗಾರರಿಗೆ ಮತ್ತು ರೈತರಿಗೆ ಸರಕಾರವು ವಿಶೇಷವಾದ ಸವಲತ್ತು ಕೊಡುವ ಮೂಲಕ ಉತ್ಪನ್ನಗಳಿಗೆ ಮಾರುಕಟ್ಟೆ ಮಾಡುವ ಹಾಗೂ ಒಳ್ಳೆಯ ಧಾರಣೆ ಕೊಡಲು ಹೊಸ ಹೊಸ ಆವಿಷ್ಕಾರವನ್ನು ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.
ಪಶು ವೈದ್ಯಕೀಯ ಇಲಾಖೆಯಲ್ಲಿನ ಕಚೇರಿಗಳಿಗೆ ಕಟ್ಟಡ ಒದಗಿಸಲಾಗಿದೆ. ವೈದ್ಯರ ಕೊರತೆ ಸಮಸ್ಯೆಗೆ ಈಗಾಗಲೇ ಸಚಿವರಲ್ಲಿ ಮಾತನಾಡಲಾಗಿದೆ. ಇದಕ್ಕೆ ಸ್ಪಂದನೆ ದೊರೆತಿದೆ ಎಂದರು. ಇದೇ ಸಂದರ್ಭದಲ್ಲಿ ಪಶು ಸಂಗೋಪನೆ ಇಲಾಖೆಗೆ ಅನುದಾನ ಒದಗಿಸಿದ ಶಾಸಕರನ್ನು ಪಶು ಸಂಗೋಪನಾ ಇಲಾಖೆಯ ವೈದ್ಯರು ಸಮ್ಮಾನಿಸಿದರು. ತಾಲೂಕು ಪಶುವೈದ್ಯಾಧಿಕಾರಿ ಡಾ| ಪ್ರಸನ್ನ ಹೆಬ್ಬಾರ್ ಸ್ವಾಗತಿಸಿದರು. ಡಾ| ಪ್ರಕಾಶ್ ವಂದಿಸಿದರು.