Advertisement

Lok Sabha Election Results; ಎಲ್ಲೆಡೆ ಸರಕಾರ ರಚನೆಯದ್ದೇ ಚರ್ಚೆ

11:58 PM Jun 05, 2024 | Team Udayavani |

ಉಡುಪಿ/ತೆಕ್ಕಟ್ಟೆ: ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷೆಗೂ ಮೀರಿದ ಜಯ ಸಾಧಿಸಿದ ಹಿನ್ನೆಲೆಯಲ್ಲಿ ಬುಧವಾರ ಬೆಳಗ್ಗೆ ಕೋಟ ಶ್ರೀನಿವಾಸ ಪೂಜಾರಿ ಅವರು ಆನೆಗುಡ್ಡೆಯ ಶ್ರೀ ಸಿದ್ಧಿವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

Advertisement

ದೇವಸ್ಥಾನದ ವಿಶ್ರಾಂತ ಹಿರಿಯ ಧರ್ಮದರ್ಶಿ ಕೆ. ಸೂರ್ಯ ನಾರಾಯಣ ಉಪಾಧ್ಯಾಯ ಹಾಗೂ ಆಡಳಿತ ಧರ್ಮದರ್ಶಿ ಕೆ. ಶ್ರೀರಮಣ ಉಪಾಧ್ಯಾಯ ಅವರು ಪೂಜಾರಿ ಅವರನ್ನು ಶಾಲು ಹೊದೆಸಿ ಸಮ್ಮಾನಿಸಿದರು. ಇದೇ ವೇಳೆ ಅವರ ಆತ್ಮೀಯರು ಭೇಟಿಯಾಗಿ ಗೆಲುವಿಗೆ ಶುಭ ಕೋರಿದರು.

ಅವರ ವಿಜಯೋತ್ಸವವನ್ನು ಅದ್ದೂರಿ ಯಾಗಿ ಆಚರಿಸಲು ಜಿಲ್ಲಾ ಬಿಜೆಪಿ ಸಿದ್ಧತೆ ನಡೆಸುತ್ತಿದೆ. ಈ ಮಧ್ಯೆ ಜಿಲ್ಲೆಯ ಹಲವು ನಾಯಕರು ಈಗಾಗಲೇ ಭೇಟಿ ಮಾಡಿ ಶುಭಾಶಯ ತಿಳಿಸಿದ್ದಾರೆ. ಬುಧವಾರ ಸಂಜೆ ಶ್ರೀನಿವಾಸ ಪೂಜಾರಿಯವರು ಜಿಲ್ಲಾ ಬಿಜೆಪಿ ಕಚೇರಿಗೆ ಭೇಟಿ ನೀಡಿ ಪ್ರಮುಖರೊಂದಿಗೆ ಮಾತುಕತೆ ನಡೆಸಿದರು.

ಬಿಜೆಪಿಯಲ್ಲಿ ಉತ್ಸಾಹ
ಕೋಟ ಶ್ರೀನಿವಾಸ ಪೂಜಾರಿ ಗೆಲುವಿನ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿಯ ನಾಯಕರಲ್ಲಿ ಉತ್ಸಾಹ ಹೆಚ್ಚಿದೆ. ನಾಯಕರು ನಿರೀಕ್ಷೆ ಮಾಡಿರುವುದಕ್ಕಿಂತ ಗೆಲುವಿನ ಅಂತರವೂ ಹೆಚ್ಚಿದ್ದರಿಂದ ವಿಶೇಷವಾಗಿ ಕ್ಷೇತ್ರದ ಜನತೆ ಬಿಜೆಪಿ, ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಇಟ್ಟಿರುವ ವಿಶ್ವಾಸದ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಲೋಕಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಶ್ರೀನಿವಾಸ ಪೂಜಾರಿಯವರು ಗುರುವಾರ ಸಂಜೆ ದಿಲ್ಲಿಗೆ ಪ್ರಯಾಣ ಬೆಳೆಸಲಿದ್ದಾರೆ. ಎರಡು ಅಥವಾ ಮೂರು ದಿನ ದಿಲ್ಲಿಯಲ್ಲೇ ಇರಲಿದ್ದಾರೆ. ಪಕ್ಷದ ನೂತನ ಸಂಸದ ಸಭೆಯು ನಡೆಯುವ ಸಾಧ್ಯತೆ ಇರುವುದರಿಂದ ಸಭೆಯಲ್ಲಿ ಪಾಲ್ಗೊಂಡು ವಾಪಸಾಗಲಿದ್ದಾರೆ. ದಿಲ್ಲಿ ಭೇಟಿ ವೇಳೆ ಪಕ್ಷದ ರಾಷ್ಟ್ರೀಯ ಕಚೇರಿಯ ಜತೆಗೆ ಸಂಘ ಕಾರ್ಯಾಲಯಕ್ಕೂ ಭೇಟಿ ನೀಡುವ ಸಾಧ್ಯತೆ ಇದೆ ಎಂದು ಪೂಜಾರಿಯವರ ಆಪ್ತ ಮೂಲಗಳು ತಿಳಿಸಿವೆ.

Advertisement

ಎಲ್ಲೆಡೆ ಒಂದೇ ಚರ್ಚೆ
ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎಗೆ ಪೂರ್ಣ ಬಹುಮತ ಬಂದಿದ್ದರೂ ಬಿಜೆಪಿ ತನ್ನ ಸ್ವಂತ ಬಲದಲ್ಲಿ ಸರಕಾರ ರಚಿಸುವ ಶಕ್ತಿ ಹೊಂದಿಲ್ಲ. ಹೀಗಾಗಿ ಎನ್‌ಡಿಎ ನಾಯಕರನ್ನು ಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಳ್ಳ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಮಂಗಳವಾರ ಸಂಜೆಯಿಂದ ಜಿಲ್ಲೆಯ ಪ್ರತೀ ಮನೆ, ಅಂಗಡಿ ಮುಂಗಟ್ಟು, ಮಾಲ್, ಹೊಟೇಲ್, ಬಸ್‌, ಆಟೋ ನಿಲ್ದಾಣ ಸಹಿತವಾಗಿ ಎಲ್ಲ ಕಡೆಗಳಲ್ಲೂ ಚುನಾವಣೆಯ ವಿಷಯದ್ದೇ ಚರ್ಚೆ ಜೋರಾಗಿ ನಡೆಯುತ್ತಿದೆ.

ಮೋದಿ ಮತ್ತೊಮ್ಮೆ ಪ್ರಧಾನಿ ಆಗುವರೇ? ಎಷ್ಟು ಮಂದಿಯನ್ನು ಉಪಪ್ರಧಾನಿ ಮಾಡಲಿದ್ದಾರೆ? ಎನ್‌ಡಿಎ ನಾಯಕರ ಬೇಡಿಕೆ ಏನೇನು? ಹೀಗೆ ಹತ್ತಾರು ವಿಷಯಗಳನ್ನು ಒಳಗೊಂಡಂತೆ ಚುನಾವಣೆ ಫ‌ಲಿತಾಂಶದ ಮೇಲೆಯೇ ಚರ್ಚೆ ಎಲ್ಲೆಡೆ ನಡೆಯುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next