Advertisement

ರೈತರೊಂದಿಗೆ ಚೆಲ್ಲಾಟವಾಡುತ್ತಿರುವ ಸರ್ಕಾರ

12:56 PM May 08, 2017 | Team Udayavani |

ಮೈಸೂರು: ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ ಎದುರಾಗಿರುವಾಗ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಬರ ಪೀಡಿತರೊಂದಿಗೆ ಸಂಪರ್ಕವನ್ನೇ ಕಡಿದುಕೊಂಡು ಸಂತ್ರಸ್ತರ ಬದುಕಿನೊಂದಿಗೆ ಚೆಲ್ಲಾಟ ವಾಡುತ್ತಿದೆ ಎಂದು ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಕೆ.ಎಸ್‌. ಈಶ್ವರಪ್ಪ ಕಿಡಿಕಾರಿದ್ದಾರೆ.

Advertisement

ರಾಜ್ಯ ಬಿಜೆಪಿ ಕಾರ್ಯಕಾರಿಣಿಯ ಎರಡನೇ ದಿನವಾದ ಭಾನುವಾರ, ರಾಜ್ಯದ ಬರ ಪರಿಸ್ಥಿತಿ ಕುರಿತು ರಾಜ್ಯದಲ್ಲಿ ಭೀಕರ ಬರ ಪರಿಸ್ಥಿತಿ- ನಿದ್ರೆಗೆ ಜಾರಿದ ರಾಜ್ಯ ಕಾಂಗ್ರೆಸ್‌ ಸರ್ಕಾರ ವಿಷಯ ಕುರಿತು ನಿರ್ಣಯ ಮಂಡಿಸಿದ ಅವರು ತಮ್ಮದೇ ಶೈಲಿಯಲ್ಲಿ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ಧಾಳಿ ನಡೆಸಿದರು.

ಭೀಕರ ಬರ ಪರಿಸ್ಥಿತಿಯಿಂದಾಗಿ ಕುಡಿಯಲು ನೀರಿಲ್ಲ, ಜಾನುವಾರುಗಳಿಗೆ ಮೇವಿಲ್ಲ, ರೈತ ಬೆಳೆದ ಬೆಳೆ ನಷ್ಟವಾಗಿದೆ. ರೈತರ ಆತ್ಮಹತ್ಯೆ ಬಗ್ಗೆ ಈ ಸರ್ಕಾರಕ್ಕೆ ಕಿಂಚಿತ್ತೂ ಕಾಳಜಿ ಇಲ್ಲ. ಜಿಲ್ಲಾ ಉಸ್ತುವಾರಿ ಮಂತ್ರಿಗಳಂತೂ ನಾಪತ್ತೆಯಾಗಿದ್ದಾರೆ. ಅಕ್ರಮ ಮರಳು ದಂಧೆ, ವರ್ಗಾವಣೆ ದಂಧೆ, ಕಪ್ಪ ಕಾಣಿಕೆ ಕ್ರೋಢೀಕರಣ ದಂಧೆಗಳಂತಹ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಜನರ ಸಂಕಷ್ಟವನ್ನು ಕೇಳುವವರಿಲ್ಲದಂತಾಗಿದೆ ಎಂದರು.

ರೈತರ ಸಾಲಮನ್ನಾ ಮಾಡಿ ಎಂದರೆ ಕೇಂದ್ರ ಸರ್ಕಾರದೆಡೆಗೆ ಬೊಟ್ಟು ಮಾಡಿ ತೋರಿಸುವ ಈ ನಿರ್ಲಜ್ಜ ಸರ್ಕಾರಕ್ಕೇನಾಗಿದೆ. ಉತ್ತರಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಕೇಂದ್ರದೆಡೆಗೆ ಹಸ್ತ ಚಾಚದೆ ಅಧಿಕಾರಕ್ಕೆ ಬಂದ ವಾರದಲ್ಲೇ ರೈತರ ಸಾಲಮನ್ನಾ ಮಾಡಿ, ಮಾದರಿಯಾಗಿ ನಿಂತಿರುವಾಗ ಸಿದ್ದರಾಮಯ್ಯ ಸರ್ಕಾರ ಬರಪೀಡಿತರೊಂದಿಗೆ ಸಂಪರ್ಕವನ್ನೇ ಕಡಿದುಕೊಂಡು ದೀರ್ಘ‌ ನಿದ್ರೆಗೆ ಜಾರಿದೆ ಎಂದು ವ್ಯಂಗ್ಯವಾಡಿದರು.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ನಾಲ್ಕು ವರ್ಷಗಳಲ್ಲಿ ಬರ ಪರಿಹಾರಕ್ಕೆಂದು ನೀಡಿದ 4633 ಕೋಟಿ ರೂ.ಗಳನ್ನು ರಾಜ್ಯ ಸರ್ಕಾರ ದುರುಪಯೋಗ ಪಡಿಸಿಕೊಂಡಿದ್ದಲ್ಲದೆ, ಪರಿಹಾರ ಕಲ್ಪಿಸುವಲ್ಲಿ ಸಂಪೂರ್ಣವಾಗಿ ವಿಫ‌ಲಗೊಂಡಿದೆ. ಬರ ಪರಿಸ್ಥಿತಿಯನ್ನು ಮರೆತ ರಾಜ್ಯ ಸರ್ಕಾರದ ಮಂತ್ರಿ ಪಡೆ ನಂಜನಗೂಡು ಹಾಗೂ ಗುಂಡ್ಲುಪೇಟೆ ಉಪ ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಹಣ ಹಂಚುವ, ಆಮಿಷ ಒಡ್ಡುವ ಕಾರ್ಯದಲ್ಲಿ ಸಂಪೂರ್ಣವಾಗಿ ಮಗ್ನವಾಗಿತ್ತು. ಪಕ್ಷ ಸಂಘಟನೆ ನಡೆಸಬೇಕಾದ ಚುನಾವಣಾ ಪ್ರಕ್ರಿಯೆಯಲ್ಲಿ ಇಡೀ ರಾಜ್ಯ ಸರ್ಕಾರ ಹಾಗೂ ಆಡಳಿತ ಯಂತ್ರವೇ ಭಾಗಿಯಾಗಿತ್ತು ಎಂದು ತರಾಟೆಗೆ ತೆಗೆದುಕೊಂಡರು.

Advertisement

ಜಾನುವಾರುಗಳ ಮೇವಿನಲ್ಲೂ ರಾಜ್ಯಸರ್ಕಾರ ಹಗರಣ ನಡೆಸಿ ಕಳಂಕ ಹೊತ್ತಿದೆ. ಬರ ಪರಿಹಾರ ಎಲ್ಲಿ ನಡೆದಿದೆ ಎಂದು ದುರ್ಬೀನು ಹಿಡಿದು ಹುಡುಕುವ ಪರಿಸ್ಥಿತಿ ಇದೆ. ಜನರಿಗೆ ಉದ್ಯೋಗದ ಸಮಸ್ಯೆ, ಹಣಕಾಸಿನ ಅಡಚಣೆ, ರೈತರಿಗೆ ಬೆಳೆ ನಷ್ಟದ ಸಮಸ್ಯೆ, ಎಲ್ಲೆಲ್ಲೂ ಕುಡಿಯುವ ನೀರಿಗೆ ಹಾಹಾಕಾರ, ಜಾನುವಾರುಗಳಿಗೆ ಮೇವಿನ ಸಮಸ್ಯೆ ಹೀಗೆ ಕಾಂಗ್ರೆಸ್‌ ಆಡಳಿತದಲ್ಲಿ ರಾಜ್ಯದ ಉದ್ದಗಲಕ್ಕೂ ಸಮಸ್ಯೆಗಳೇ ತುಂಬಿವೆ ಎಂದರು.

ರಾಜ್ಯ ಸರ್ಕಾರ ಕೂಡಲೇ ಬರ ಪರಿಹಾರ ಕಾರ್ಯ ಕೈಗೊಳ್ಳಬೇಕು. ತೀವ್ರ ಹಾಹಾಕಾರಕ್ಕೆ ಕಾರಣವಾಗಿರುವ ಕುಡಿಯುವ ನೀರನ್ನು ಸಮರ್ಪಕವಾಗಿ ಪೂರೈಸಬೇಕು. ಜಾನುವಾರುಗಳ ರಕ್ಷಣೆಯನ್ನು ಆದ್ಯತೆಯ ಮೇಲೆ ಕೈಗೊಳ್ಳಲು ಬೇಕಾದ ಗೋಶಾಲೆಗಳು, ಮೇವಿನ ಪೂರೈಕೆ ಮುಂತಾದವುಗಳ ಕಡೆ ಗಮನ ಹರಿಸಿ, ಸರ್ಕಾರ ಹಾಗೂ ಸಂಬಂಧಿಸಿದ ಜಿಲ್ಲಾ ಮಂತ್ರಿಗಳು ರೈತ ಸಮುದಾಯದ ನೆರವಿಗೆ ಬರಬೇಕು ಎಂದು ಆಗ್ರಹಿಸಿದ್ದಾರೆ.

ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ಜನರ ನೆರವಿಗೆ ಬರಬೇಕಾಗಿರು ವುದು ಆಡಳಿತ ನಡೆಸುವವರ ಕರ್ತವ್ಯ. ಸರ್ಕಾರ ಕೂಡಲೇ ಜಾಗೃತಗೊಂಡು ಸರ್ಕಾರವೇ ಹೇಳುವ ಪ್ರಕಾರ ಕಳೆದ 30 ವರ್ಷಗಳಲ್ಲೇ ಭೀಕರ ಬರಗಾಲ. ಜಲಾಶಯಗಳು, ಕೆರೆ-ಕಟ್ಟೆಗಳು ಬರಿದು, ಮೇವು-ನೀರಿಲ್ಲದೆ ಮಲೆ ಮಹದೇಶ್ವರ ಬೆಟ್ಟದ ಪ್ರದೇಶದಲ್ಲಿ ನೂರಾರು ಗೋವುಗಳು ಮೃತಪಟ್ಟಿವೆ. ಕಾಡು ಪ್ರಾಣಿಗಳಿಗೂ ಬರ ತೀವ್ರತೆ ತಟ್ಟಿದೆ.

ಸರ್ಕಾರ ಕೂಡಲೇ ಜಾಗೃತ ಗೊಂಡು ತನ್ನ ಧೋರಣೆ ಬದಲಿಸಿಕೊಳ್ಳುವುದು ಅನಿವಾರ್ಯ. ಇಲ್ಲವಾದಲ್ಲಿ ಜನತೆಯೇ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ ಎಂದು ಎಚ್ಚರಿಕೆ ನೀಡಿದರು. ಕೆ.ಎಸ್‌.ಈಶ್ವರಪ್ಪ ಮಂಡಿಸಿದ ನಿರ್ಣಯವನ್ನು ಮಾಜಿ ಸಚಿವ ಗೋವಿಂದ ಕಾರಜೋಳ, ರಾಜ್ಯ ರೈತಮೋರ್ಚಾ ಅಧ್ಯಕ್ಷ ಸಿ.ಎಚ್‌.ವಿಜಯಶಂಕರ್‌ ಅನುಮೋದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next