ಗದಗ: ಲಾಕ್‌ಡೌನ್ ಸಂದರ್ಭದಲ್ಲಿ ಕಟ್ಟಡ ಕಾರ್ಮಿಕರು, ಅಸಂಘಟಿತ ವಲಯದ ಕ್ಷೌರಿಕ ಹಾಗೂ ಅಗಸರಿಗೆ ಸರ್ಕಾರ ಘೋಷಿಸಿದ್ದ 5 ಸಾವಿರ ರೂ. ನೆರವು ಜಿಲ್ಲೆಯ ಶೇ.90 ಜನರಿಗೆ ಸಂದಾಯವಾಗಿದೆ. ಲಾಕ್‌ಡೌನ್ ವೇಳೆ ದುಡಿಮೆ ಇಲ್ಲದೇ ಪರದಾಡುವಂತಾಗಿದ್ದ ಸಾಂಪ್ರದಾಯಿಕ ಕುಲಕಸಬುದಾರರ ಕೈಹಿಡಿದಿದೆ. ಆದರೆ ಇನ್ನುಳಿದ ಅರ್ಜಿದಾರರು ಸರ್ಕಾರದ ನೆರವಿಗಾಗಿ ನಿತ್ಯ ಕಚೇರಿಗೆ ಅಲೆಯುವಂತಾಗಿದೆ.
ಕೋವಿಡ್ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಮಾರ್ಚ್ ತಿಂಗಳಲ್ಲಿ ಲಾಕ್ ಡೌನ್ ಘೋಷಿಸಿದ್ದರಿಂದ ಇಡೀ ದೇಶವೇ ಸ್ತಬ್ಧಗೊಂಡಿತ್ತು. ಸುಮಾರು ಮೂರುವರೆ ತಿಂಗಳ ಕಾಲ ಲಾಕ್‌ಡೌನ್ ಜಾರಿಯಲ್ಲಿದ್ದಿದ್ದರಿಂದ ನಿತ್ಯ ದುಡಿಮೆಯನ್ನೇ ನಂಬಿದ್ದ ಕಟ್ಟಡ ಕಾರ್ಮಿಕರು, ಕುಲ ಕಸಬುದಾರರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಸರ್ಕಾರದಿಂದ ಉಚಿತ ಅಕ್ಕಿ ಹಾಗೂ ಮತ್ತಿತರೆ ಪಡಿತರ ನೀಡಿದರೂ ತರಕಾರಿ ಮತ್ತಿರೆ ಖರ್ಚು-ವೆಚ್ಚಗಳಿಗೆ ಕೈಯಲ್ಲಿ ಕಾಸಿಲ್ಲದೇ ಪರದಾಡುವಂತಾಗಿತ್ತು. ಹೀಗಾಗಿ ಅನಿವಾರ್ಯವಾಗಿ ಕೆಲವರು ಕ್ಷೌರಿಕ ಅಂಗಡಿ ತೆರೆದು ಪೊಲೀಸರ ಲಾಠಿ ರುಚಿ ಅನುಭವಿಸುವಂತಾಯಿತು.
ಮತ್ತೂಂದೆಡೆ ನೇರವಾಗಿ ಜನರ ಪ್ರಾಥಮಿಕ ಸಂಪರ್ಕಕ್ಕೆ ಬರುವುದರಿಂದ ಕೋವಿಡ್ ಹರಡುವ ಭೀತಿಯೂ ಹೆಚ್ಚಿತ್ತು. ರಾಜ್ಯದ ವಿವಿಧೆಡೆ ಕ್ಷೌರಿಕರು ಕೋವಿಡ್ ಗೆ ಒಳಗಾಗಿದ್ದಕ್ಕೆ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಾಂಪ್ರದಾಯಿಕ ವೃತ್ತಿದಾರರಿಗೆ ತಲಾ 5 ಸಾವಿರ ರೂ. ನೆರವು ಘೋಷಿಸಿದ್ದರು.
ಜಿಲ್ಲೆಯ 25 ಸಾವಿರ ಜನರಿಗೆ ಲಾಭ: ಜಿಲ್ಲೆಯಲ್ಲಿ 28,070 ಕಟ್ಟಡ ಕಾರ್ಮಿಕರಿದ್ದು, ಆ ಪೈಕಿ ಕಾರ್ಮಿಕ ಮಂಡಳಿ ಮೂಲಕ 23,377 ಜನರ ಬ್ಯಾಂಕ್ ಖಾತೆಗೆ ನೇರವಾಗಿ ತಲಾ ಐದು ಸಾವಿರ ರೂ. ಜಮಾ ಮಾಡಲಾಗಿದೆ. ಆದರೆ ಇನ್ನುಳಿದ ಸುಮಾರು ಮೂರು ಸಾವಿರ ಜನ ಕಾರ್ಮಿಕರಲ್ಲಿ ಕೆಲವರು ಲಾಕ್‌ಡೌನ್ ಬಳಿಕ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿಸಿಕೊಂಡಿದ್ದರೆ, ಇನ್ನೂ ಕೆಲವರ ಬ್ಯಾಂಕ್ ಪಾಸ್‌ಬುಕ್ ಅಪಡೇಟ್ ಆಗದಿರುವುದು ಮತ್ತಿತರೆ ಕಾರಣದಿಂದಾಗಿ ಸಹಾಯಧನ ಬಂದಿಲ್ಲ. ಅದರೊಂದಿಗೆ ಸೇವಾ ಸಿಂಧು ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಿದ್ದ 1999 ಕ್ಷೌರಿಕರು, 1240 ಜನ ಅಗಸರ ಪೈಕಿ ಕ್ರಮವಾಗಿ 1477 ಮತ್ತು 1051 ಸೇರಿದಂತೆ ಒಟ್ಟು 2528 ಜನ ಕಾರ್ಮಿಕರಿಗೆ ತಲಾ 5 ಸಾವಿರ ರೂ. ಗಳಂತೆ ಒಟ್ಟು 1.26 ಕೋಟಿ ರೂ. ಬ್ಯಾಂಕ್ ಖಾತೆಗೆ ಪಾವತಿಸಲಾಗಿದೆ. ಆದರೆ ಇನ್ನೂ ನೂರಾರು ಜನ ಅರ್ಜಿದಾರರಿಗೆ ಸರ್ಕಾರದ ಸಹಾಯಧನ ಬಿಡುಗಡೆಯಾಗಿಲ್ಲ. ಸರ್ಕಾರ ನಿಗದಿ ಪಡಿಸಿದ್ದ ಬಜೆಟ್ ಖಾಲಿಯಾಗಿದೆ. ಹೀಗಾಗಿ ಕಾರ್ಮಿಕರು ಸಹಾಯಧನಕ್ಕಾಗಿ ಪ್ರತಿದಿನ ಸ್ಥಳೀಯ ಕಾರ್ಮಿಕ ಇಲಾಖೆ ಕಚೇರಿಗೆ ಅಲೆಯುವಂತಾಗಿದೆ.
ಲಾಕ್‌ಡೌನ್ ಸಂದರ್ಭದಲ್ಲಿ ಕುಲ ಕಸುಬುದಾರರಿಗೆ ನೆರವು ಘೋಷಿಸಿದ್ದು, ಸಾಕಷ್ಟು ಜನರಿಗೆ ಅನುಕೂಲವಾಗಿದೆ. ಆದರೆ ರೇಷನ್ ಕಾರ್ಡ್‌ವೊಂದಕ್ಕೆ ಒಂದೇ ಅರ್ಜಿ ಪರಿಗಣಿಸಿದ್ದರಿಂದ ಅವಿಭಕ್ತ ಕುಟುಂಬದ ಅನೇಕ ಅರ್ಜಿದಾರರು ಸಹಾಯಧನದಿಂದ ವಂಚಿತರಾಗಿದ್ದಾರೆ. ಈ ನಿಯಮ ಸಡಿಲಿಸಿ ಬಾಕಿ ಉಳಿದಿರುವ ಅರ್ಜಿದಾರರಿಗೆ ತಕ್ಷಣ ಹಣ ಬಿಡುಗಡೆ ಮಾಡಬೇಕು.
-ರಾಜು ಗೌಡರ, ಸವಿತಾ ಸಮಾಜದ ಜಿಲ್ಲಾಧ್ಯಕ್ಷ
ಈಗಾಗಲೇ ಆನ್ ಲೈನ್ ಪೋರ್ಟಲ್‌ನಲ್ಲಿ ಸ್ವೀಕೃತಗೊಂಡಿದ್ದ ಶೇ.90 ಅರ್ಜಿದಾರರಿಗೆ ಸಹಾಯಧನ ಜಮಾ ಆಗಿದೆ. ಕೆಲ ಕಟ್ಟಡ ಕಾರ್ಮಿಕ ವಿವರಗಳಲ್ಲಿ ಲೋಪದೋಷಗಳಿದ್ದು, ಅವುಗಳನ್ನು ಸರಿಪಡಿಸಿ ಮತ್ತೆ ಇಲಾಖೆಗೆ ಸಲ್ಲಿಸಲಾಗಿದೆ.
-ಸುಧಾ ಗರಗ, ಜಿಲ್ಲಾ ಕಾರ್ಮಿಕ ಅಧಿಕಾರಿ
-ವೀರೇಂದ್ರ ನಾಗಲದಿನ್ನಿ