ಬೆಂಗಳೂರು: ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗೆ ರಾಜ್ಯ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಆರೋಪಿಸಿದರು.
ವಿಧಾನಸೌಧದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ವಿಧಾನ ಪರಿಷತ್ ಸದಸ್ಯರು ನಡೆಸುತ್ತಿರುವ ಅಹೋರಾತ್ರಿ ಧರಣಿಗೆ ಶುಕ್ರವಾರ ಭೇಟಿ ನೀಡಿ, ಬೆಂಬಲ ಸೂಚಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ, ಶಿಕ್ಷಕರ, ಪ್ರಾಂಶುಪಾಲರ, ಉಪನ್ಯಾಸಕರ ಸಮಸ್ಯೆಯನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿಲ್ಲ. ಸಮಸ್ಯೆ ಬಗೆಹರಿಸುವಂತೆ ಕಳೆದ 10 ದಿನದಿಂದ ವಿಧಾನ ಪರಿಷತ್ ಸದಸ್ಯರೇ ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ, ಮುಖ್ಯಮಂತ್ರಿಯವರು ಕೈಕಟ್ಟಿ ಕುಳಿತಿರುವುದು ಬೇಜವಾಬ್ದಾರಿತನದ ಪರಮಾವಧಿ ಎಂದು ಟೀಕಿಸಿದರು.
ವಿಧಾನಸೌಧಕ್ಕೆ ಆಗಾಗ ಬಂದು ಹೋಗುವ ಮುಖ್ಯಮಂತ್ರಿಯವರು ಎಂಎಲ್‌ಸಿಗಳ ಬೇಡಿಕೆ ಆಲಿಸಿ, ಈಡೇರಿಸುವ ಪ್ರಯತ್ನ ಮಾಡಿದ್ದರೆ, ಪ್ರತಿಭಟನೆ ಇಷ್ಟು ಗಂಭೀರವಾಗುತ್ತಿರಲಿಲ್ಲ. ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ನೀಡಲಿ ಎಂದು ಆಗ್ರಹಿಸಿದರು.
ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಮಾತನಾಡಿ, ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಸಮಸ್ಯೆಗೆ ಪರಿಹಾರ ನೀಡದ ಸರ್ಕಾರ ಬೀದರ್, ಚಾಮರಾಜನಗರ ಮೊದಲಾದ ಭಾಗದ ಜನರ ಸಮಸ್ಯೆಗೆ ಸ್ಪಂದಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಶಿಕ್ಷಣ ಕ್ಷೇತ್ರದ ವಿವಿಧ ಸಮಸ್ಯೆಗೆ ಪರಿಹಾರ ಕೋರಿ ವಿಧಾನ ಪರಿಷತ್ ಸದಸ್ಯರೇ ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಬಗ್ಗುತ್ತಿಲ್ಲ. ಅನುದಾನಿತ, ಅನುದಾನ ರಹಿತ ಮತ್ತು ಸರ್ಕಾರಿ ಶಾಲೆಗಳ ಉಪನ್ಯಾಸಕರು, ಪ್ರಾಂಶುಪಾಲರ ಸಮಸ್ಯೆಗಳನ್ನು ಸಚಿವರ ಮಟ್ಟದಲ್ಲೇ ಬಗೆಹರಿಸಬಹುದಿತ್ತು. ಆದರೆ, ಬಗೆಹರಿಸಲು ಸಚಿವರು ವಿಫಲರಾಗಿ¨ªಾರೆ. ಇಲಾಖೆಗೆ ಇಂತಹ ಸಚಿವರು ಬೇಕೇ ಎಂದು ಲೇವಡಿ ಮಾಡಿದರು.