ಬಂಗಾರಪೇಟೆ: ತಾಲೂಕಿನಲ್ಲಿ ಮೈಸೂರು ಮಹಾರಾಜರ ಕಾಲದಲ್ಲಿ ನಿರ್ಮಿಸಿರುವ ಕೆರೆಗಳು ದಿನೇ ದಿನೆ ಮಾಯವಾಗುತ್ತಿದ್ದು, ಪ್ರಸ್ತುತ ರಾಜಕಾರಣಿಗಳ ಕೈಗೊಂಬೆಯಾಗಿರುವ ಕಂದಾಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರಿ ಆಸ್ತಿಪಾಸ್ತಿಗಳನ್ನು ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆಂದು ರೈತಸಂಘದ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಆರೋಪಿಸಿದರು. ತಾಲೂಕಿನ ಕೆರೆಗಳ ರಕ್ಷಣೆಗೆ ಆಗ್ರಹಿಸಿ ರಾಜ್ಯ ರೈತಸಂಘ ಹಾಗೂ ಹಸಿರು ಸೇನೆ ಪಟ್ಟಣದ ತಾಲೂಕು ಕಚೇರಿ ಮುಂದೆ ಹಮ್ಮಿಕೊಂಡಿದ್ದ ಧರಣಿಯಲ್ಲಿ ಮಾತನಾಡಿದರು.
ಕೆರೆ ಒತ್ತುವರಿ ತೆರವುಗೊಳಿಸಿ: ತಾಲೂಕಿನ ಕೆರೆಗಳು ಬಲಾಡ್ಯರು ಹಾಗೂ ಭೂಗಳ್ಳರ ಪಾಲಾಗುತ್ತಿವೆ. ಒತ್ತುವರಿ ತೆರವುಗೊಳಿಸಿ, ಒತ್ತುವರಿದಾರರ ವಿರುದ್ಧ ಭೂ ಕಂದಾಯದ ನಿಯಮದಂತೆ ಕ್ರಮ ಕೈಗೊಳ್ಳಬೇಕು. ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಮಟ್ಟದ ಅಧಿಕಾರಿಗಳಿಂದ ಲಂಚದ ಹಾವಳಿ ವಿಪರೀತವಾಗಿದ್ದು, ಸಂಬಂಧಪಟ್ಟ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.
ಕೆರೆಗಳ ಉಳಿಸಿ: ಪಟ್ಟಣದ ಪ್ರಸಿದ್ಧ ದೊಡ್ಡಕೆರೆಯ ಸರ್ವೆ ನಂ.7ರಲ್ಲಿ 35 ಎಕರೆ ಹಾಗೂ ಸರ್ವೆ ನಂ.37ರ 4 ಎಕರೆ 15 ಗುಂಟೆ, ದೇಶಿಹಳ್ಳಿ ಕೆರೆ ಸಂಪೂರ್ಣ ಒತ್ತುವರಿಯಾಗಿವೆ. ಈ ಒತ್ತುವರಿಯನ್ನು ತೆರವುಗೊಳಿಸಿ ಆರೋಪಿಗಳ ವಿರುದ್ಧ ಕ್ರಮ ಕೈಗೊಂಡು, ಕೆರೆಗಳನ್ನು ಉಳಿಸಿ, ಅಭಿವೃದ್ಧಿಗೊಳಿಸಬೇಕೆಂದು ಮನವಿ ಮಾಡಿದರು.
ತಹಶೀಲ್ದಾರ್ ಕಚೇರಿ ಮುಂದೆ ಅಂಬೇಡ್ಕರ್ ಪುತ್ಥಳಿ: ರೈತಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ, ಸರ್ಕಾರಿ ಕಚೇರಿಗಳಲ್ಲಿ ಲಂಚವಿಲ್ಲದೇ ಯಾವುದೆ ಕೆಲಸಗಳು ಆಗುವುದಿಲ್ಲ. ಪೂರ್ವಜರು ನಿರ್ಮಿಸಿರುವ ಕೆರೆಗಳು ಭೂಗಳ್ಳರ ಪಾಲಾಗಿವೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಬೇಕು. ದೃಢೀಕೃತ ಪ್ರಮಾಣ ಪತ್ರವಿಲ್ಲದ ಬಿತ್ತನೆ ಆಲೂಗಡ್ಡೆ ಮಾರಾಟ ಮಾಡುವ ವ್ಯಾಪಾರಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು. ಸಂವಿದಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿಯನ್ನು ತಹಶೀಲ್ದಾರ್ ಕಚೇರಿ ಮುಂದೆ ಸ್ಥಾಪಿಸಬೇಕೆಂದು ಆಗ್ರಹಿಸಿದರು.
ಕಳಪೆ ರಸ್ತೆ ಕಾಮಗಾರಿ: ತಾಲೂಕಿನ ಗ್ರಾಮೀಣ ರಸ್ತೆಗಳು ಕಾಮಗಾರಿ ಮಾಡಿದ 4 ತಿಂಗಳಲ್ಲಿ ಹಾಳಾಗುತ್ತಿದ್ದು, ಕಳಪೆ ಕಾಮಗಾರಿ ಮಾಡಿದ ಗುತ್ತಿಗೆದಾರರು ಹಾಗೂ ಅವರಿಗೆ ಸಹಕಾರ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಮಹಿಳಾ ರೈತಸಂಘದ ಜಿಲ್ಲಾಧ್ಯಕ್ಷೆ ಎ.ನಳಿನಿ, ತಾಲೂಕು ಅಧ್ಯಕ್ಷ ಇಲಿಯಾಜ್ ಖಾನ್, ಬೂದಿಕೋಟೆ ಹರೀಶ್, ಐತಾಂಡಹಳ್ಳಿ ಅಂಬರೀಶ್, ಕೊಮ್ಮನಹಳ್ಳಿ ನಾರಾಯಣಸ್ವಾಮಿ, ಭಾರಧ್ವಾಜ್, ಫಾರುಕ್‌ಪಾಷ, ಮರಗಲ್ ವೆಂಕಟೇಶ್, ಆನಂದ್‌ಸಾಗರ್, ಪುರುಷೋತ್ತಮ್, ಶಿವು, ಕೆಂಬೋಡಿ ಕೃಷ್ಣೇಗೌಡ, ಹೊಸಹಳ್ಳಿ ಚಂದ್ರಪ್ಪ, ಕ್ಯಾಸಂಬಳ್ಳಿ ಪ್ರತಾಪ್, ವೆಂಕಟೇಶ್, ಸತೀಶ್, ನಾರಾಯಣಸ್ವಾಮಿ, ಮಂಜುನಾಥ್, ಸೇಟ್ ಬಾಬಾಜಾನ್ ಮರಗಲ್, ನಾಯಕರಹಳ್ಳಿ ಮಂಜುನಾಥ್, ಕೃಷ್ಣಪ್ಪ, ಮೀಸೆ ವೆಂಕಟೇಶಪ್ಪ, ಐತಾಂಡಹಳ್ಳಿ ಮಂಜುನಾಥ್, ವಿಜಯಪಾಲ್, ಅನಿಲ್, ಪ್ರವೀಣ್, ಶಿವರಾಜ್, ಚರಣ್, ನಾಗರಾಜ್ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ತಾಲೂಕಿನ ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಮಟ್ಟದ ಅಧಿಕಾರಿಗಳೇ ಲಂಚಕ್ಕೆ ಕೈಯೊಡ್ಡಿ ಸಿಕ್ಕಿ ಬೀಳುತ್ತಿರುವುದು ಇಲಾಖೆಯ ಭ್ರಷ್ಟಾಚಾರಕ್ಕೆ ಸಾಕ್ಷಿಯಾಗಿದ್ದು, ಇದಕ್ಕೆ ಕಡಿವಾಣ ಹಾಕಬೇಕು. ನಾಡ ಕಚೇರಿಗಳ ಪರಿಸ್ಥಿತಿಯಂತೂ ಸಂಪೂರ್ಣ ಕುಲಗೆಟ್ಟಿದೆ. ರಿಯಲ್ ಎಸ್ಟೇಟ್ ಅಡ್ಡೆಗಳಾಗಿರುವ ನಾಡಕಚೇರಿಗಳ ಬಗ್ಗೆ ಅಧಿಕಾರಿಗಳು ನಿಗಾ ವಹಿಸಬೇಕು.
ಕಿ ಮರಗಲ್ ಶ್ರೀನಿವಾಸ್, ರೈತಸಂಘ ಜಿಲ್ಲಾಧ್ಯಕ್ಷರು