ರಾಮನಗರ: ಕೋವಿಡ್-19 ಸೋಂಕಿತರು ರಸ್ತೆಯಲ್ಲೇ ಪ್ರಾಣ ಬಿಡುತ್ತಿದ್ದಾರೆ. ಜನರ ಪ್ರಾಣ ಉಳಿಸಬೇಕಾದದ್ದು ಸರ್ಕಾರದ ಕರ್ತವ್ಯ. ಆದರೆ ಸರ್ಕಾರ ಈ ವಿಚಾರದಲ್ಲಿ ವಿಫಲವಾಗಿದೆ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಕಿಡಿಕಾರಿದರು.
ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ವೃತ್ತದಲ್ಲಿ ಸರ್ಕಾರದ ವಿರುದಟಛಿ ನಡೆಸಿದ ಪ್ರತಿಭಟನೆಯಲ್ಲಿ ಕಿಡಿಕಾರಿದರು. ಕೋವಿಡ್-19 ಸೋಂಕು ತಡೆ ಹಾಗೂ ಸೋಂಕಿತರ ನ್ನು ನಡೆಸಿಕೊಳ್ಳುತ್ತಿರುವ ವಿಚಾರದಲ್ಲಿ ಸರ್ಕಾರ ಹೇಳ್ಳೋದು ಒಂದು, ರಾಜ್ಯದಲ್ಲಿ ನಡಿತಿರೋದೆ ಇನ್ನೊಂದು ಎಂದು ದೂರಿದರು.
ಸಾವಿನ ಮನೆಯಾಗಿದೆ ರಾಜ್ಯ: ಕೋವಿಡ್-19 ಸೋಂಕು ಹರಡುವಿಕೆ ತಡೆ ವಿಚಾರದಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಹೀಗಾಗಿಯೇ ರಾಜ್ಯ ಸಾವಿನ ಮನೆಯಾಗಿದೆ. ಸರ್ಕಾರ ಪ್ರಾಮಾಣಿಕವಾಗಿ ತನ್ನ ಕರ್ತವ್ಯ ನಿರ್ವಹಿಸುತ್ತಿಲ್ಲ ಎಂದು ಹರಿಹಾಯ್ದರು. ರೋಗಿಗಳನ್ನು ಕರೆದೊಯ್ಯಲು ಆ್ಯಂಬುಲೆನ್ಸ್ ಬರು ತ್ತಿಲ್ಲ. ಸರ್ಕಾರ ತಕ್ಷಣ ಸಂಚಾರಿ ಆಸ್ಪತ್ರೆ ಆರಂಭಿಸಬೇಕು. ತಾಲೂಕು, ಹೋಬಳಿ, ಗ್ರಾಮಗಳಿಗೆ ತೆರಳಿ ಚಿಕಿತ್ಸೆ ಕೊಡ ಬೇಕು. ಸೋಂಕಿನ ವಿಚಾರದಲ್ಲಿ ಸರ್ಕಾರ ಸುಳ್ಳು, ಮೋಸ ಮಾಡಬಾರದು ಎಂದರು.
ಸ್ಮಶಾನಕ್ಕೆ ಪ್ರತಿ ಜಿಲ್ಲೆಯಲ್ಲಿ 10 ಎಕರೆ: ಕೋವಿಡ್-19 ಸೋಂಕಿತರು ಮೃತಪಟ್ಟರೆ ಅವರನ್ನು ಕಾಲು ಕಸಕ್ಕಿಂತ ಕಡೆ ಯಾಗಿ ನೋಡಲಾಗುತ್ತಿದೆ. ಗುಂಡಿಯಲ್ಲಿ ಶವಗಳನ್ನು ಎಸೆಯಲಾಗುತ್ತಿದೆ. ಇದು ನಿಲ್ಲಬೇಕು. ಪ್ರತಿ ಜಿಲ್ಲೆಯಲ್ಲಿ ಸ್ಮಶಾನಕ್ಕಾಗಿ ತಾಲೂಕುವಾರು ಕನಿಷ್ಠ 10 ಎಕರೆ ಭೂಮಿಯನ್ನು ಸರ್ಕಾರ ಗುರುತಿಸಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ರಾಜ್ಯದಲ್ಲಿ ಕೋವಿಡ್-19 ಸೋಂಕು ತಡೆ ಹಾಗೂ ಸ್ಮಶಾನಕ್ಕಾಗಿ ಭೂಮಿ ಗುರುತಿಸಲು ವಿಳಂಬವಾದರೆ ಕನ್ನಡ ಚಳವಳಿ ವಾಟಾಳ್ ಪಕ್ಷದಿಂದ ಪ್ರಾಣ ಉಳಿಸಿ ಚಳವಳಿ ಹಮ್ಮಿಕೊಳ್ಳು ವುದಾಗಿ ಎಚ್ಚರಿಸಿದರು. ಕರುನಾಡ ಸೇನೆ ಜಗದೀಶ, ಜಯಕುಮಾರ್ ಇದ್ದರು.