ನವದೆಹಲಿ: ಇದೀಗ ವ್ಯಾಪಕವಾಗಿ ಬಳಕೆಯಲ್ಲಿರುವ ಪ್ರಾಣಿಜನ್ಯ ಜಿಲಾಟಿನ್ ಕ್ಯಾಪ್ಸೂಲ್ ಬದಲಿಗೆ ಸಸ್ಯಜನ್ಯ ಕ್ಯಾಪ್ಸೂಲ್‌ಗಳನ್ನು ತಯಾರಿಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
ಈ ಕುರಿತ ಶಿಫಾರಸನ್ನು ಕೇಂದ್ರ ಆರೋಗ್ಯ ಸಚಿವಾಲಯ ಅನುಮೋದಿಸಿದ್ದು, ಪರಾಮರ್ಶೆಗೆ ಪ್ರೊ. ಸಿ.ಕೆ. ಕೊಕಾಟೆ ಅವರ ನೇತೃತ್ವದ ವೈಜ್ಞಾನಿಕ ಸಮಿತಿಗೆ ನೀಡಿದೆ.
ಪ್ರಾಣಿಜನ್ಯ ಜಿಲಾಟಿನ್‌ಗಳನ್ನು ಹಲವಾರು ವರ್ಷಗಳಿಂದ ಬಳಸಲಾಗುತ್ತಿದ್ದು, ಅದರ ಬದಲಿಗೆ ಪರಿಣಾಮಕಾರಿ ಸಸ್ಯ ಆಧಾರಿತ ಕೋಟಿಂಗ್‌ಗಳನ್ನು ಬಳಸುವ ಉದ್ದೇಶ ಹೊಂದಿದ್ದೇವೆ. ಇದಕ್ಕಾಗಿ ವೈಜ್ಞಾನಿಕ ಮಾಹಿತಿ ಮತ್ತು ದತ್ತಾಂಶಾಗಳನ್ನು ಪರಿಶೀಲನೆಗಾಗಿ ವೈಜ್ಞಾನಿಕ ಸಮಿತಿಗೆ ನೀಡಿದ್ದೇವೆ. ಈ ಬಗ್ಗೆ ಈಗಾಗಲೇ ಭಾರತೀಯ ಔಷಧ ನಿಯಂತ್ರಣ ಮಂಡಳಿ(ಡಿಸಿಜಿಐ) ಅನುಮತಿ ನೀಡಿದೆ.
ಸದ್ಯದ ಅಂಕಿಅಂಶಗಳ ಪ್ರಕಾರ ಭಾರತದಲ್ಲಿ 1 ಲಕ್ಷ ಕೋಟಿ ಔಷಧಗಳಲ್ಲಿ ಪ್ರಾಣಿಜನ್ಯ ಜಿಲಾಟಿನ್ ಬಳಸಲಾಗುತ್ತದೆ. ಅರ್ಥಾತ್ ಶೇ.80ರಷ್ಟು ಕ್ಯಾಪ್ಸೂಲ್,ಟ್ಯಾಬ್ಲೆಟ್‌ಗಳಲ್ಲಿ ಈ ಜಿಲಾಟಿನ್ ಬಳಕೆಯಲ್ಲಿದೆ.
ಏನಿದು ಜಿಲಾಟಿನ್ ಕ್ಯಾಪ್ಸೂಲ್?
ಪ್ರಾಣಿಜನ್ಯ ವಸ್ತುಗಳಿಂದ ತಯಾರಾಗುತ್ತೆ. ಇದಕ್ಕೆ ಜಾನುವಾರು, ಹಂದಿ ಅಥವಾ ಇತರ ಪ್ರಾಣಿಗಳ ಚರ್ಮ ಅಥವಾ ಎಲುಬಿನಲ್ಲಿರುವ ಕೊಲಾಜೆನ್ ಎಂಬ ವಸ್ತುವನ್ನು ಬಳಸಲಾಗುತ್ತದೆ. ಜಿಲಾಟಿನ್‌ನಿಂದ ಮಾಡಿದ ಕ್ಯಾಪ್ಸೂಲ್‌ಗಳನ್ನು ಸಾಫ್ಟ್ಜೆಲ್ಸ್ ಎಂದೂ ಕರೆಯಲಾಗುತ್ತದೆ. ಸಸ್ಯಜನ್ಯ ಕ್ಯಾಪ್ಸೂಲ್‌ಗಳಿಗೆ ಹೋಲಿಸಿದರೆ, ಇವುಗಳ ಬೆಲೆ ಕಡಿಮೆ.