ಜಪಾನ್ : ಸರ್ಕಾರಿ ಕಚೇರಿಗಳಲ್ಲಿ ಕರ್ತವ್ಯದ ಸಮಯ ಪಾಲನೆ ಸರಿಯಾಗಿ ಆಗುವುದಿಲ್ಲ.ಈ ಕೆಟ್ಟ ವ್ಯವಸ್ಥೆಗೆ ಅಂಕುಶ ಹಾಕುವವರು ಯಾರು ಎಂಬುದು ಜನಸಾಮಾನ್ಯರ ಪ್ರಶ್ನೆ ಆಗಿರುತ್ತದೆ. ಆದರೆ, ಇಲ್ಲೊಂದು ಕಡೆ ಎರಡು ನಿಮಿಷ ಬೇಗನೆ ಆಫೀಸ್‍ನಿಂದ ಹೊರಟಿದ್ದಕ್ಕೆ ಸರ್ಕಾರಿ ನೌಕರರಿಗೆ ತಕ್ಕ ಶಾಸ್ತಿ ಆಗಿದೆ.
ಹೌದು, ಸರ್ಕಾರಿ ನೌಕರರು, ಅಧಿಕಾರಿಗಳು ತಮಗೆ ಅನುಕೂಲವಾದ ಸಮಯಕ್ಕೆ ಕಚೇರಿಗೆ ಬರುವುದು, ಬೇಕಾದಾಗ ಮನೆಗೆ ಹೋಗುವಂತಹ ದೂರುಗಳು ಆಗಾಗ ಕೇಳಿ ಬರುತ್ತಿರುತ್ತವೆ. ಇಂತಹ ಅಧಿಕಾರಿಗಳಿಗೆ ಜಪಾನ್ ಸರ್ಕಾರ ಸರಿಯಾದ ಶಿಕ್ಷೆ ನೀಡಿದೆ. ಇನ್ನೆಂದು ನಿಗದಿತ ಸಮಯಕ್ಕಿಂತ ಬೇಗನೆ ಕಚೇರಿ ಖಾಲಿ ಮಾಡದಂತೆ ಎಚ್ಚರಿಕೆ ಕೂಡ ನೀಡಿದೆ.
ಜಪಾನ್ ದೇಶದ ಚಿಬಾ ಪ್ರಿಫೆಕ್ಚರ್‌ನಲ್ಲಿರುವ ಫುನಾಬಾಶಿ ಸಿಟಿ ಬೋರ್ಡ್ ಆಫ್ ಎಜುಕೇಶನ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಗಳು, ನೌಕರರು ಪ್ರತಿನಿತ್ಯ ನಿಗದಿತ ಸಮಯಕ್ಕಿಂತ ಎರಡು ನಿಮಿಷ ಬೇಗನೆ ಹೊರಡುತ್ತಿದ್ದರು. ಸಾಯಂಕಾಲ 5.15 ಕ್ಕೆ ಕಚೇರಿಯಿಂದ ತೆರಳಬೇಕಿತ್ತು. ಆದರೆ, 5.13ಕ್ಕೆ ಎಲ್ಲರೂ ಮನೆಗೆ ಹೊರಟು ಹೋಗುತ್ತಿದ್ದರು. ಇವರಿಗೆ 59 ವರ್ಷದ ಹಿರಿಯ ಮೇಲಾಧಿಕಾರಿ ಕೂಡ ಸಹಾಯ ಮಾಡುತ್ತಿದ್ದ.
ಶಿಕ್ಷಣ ಇಲಾಖೆಯ ಈ ಕಳ್ಳಾಟ ಗಮನಿಸಿದ ಸರ್ಕಾರ ಈ ಅಧಿಕಾರಿಗಳಿಗೆ ಬಿಸಿ ಮುಟ್ಟಿಸಿದೆ. ಕಚೇರಿಯ ಮಹಿಳಾ ಅಧಿಕಾರಿಯೋರ್ವಳ ಸಂಬಳದಲ್ಲಿ ಕಳೆದ ಮೂರು ತಿಂಗಳಿನಿಂದ 10% ಕಡಿತಗೊಳಿಸಿದೆ. ಇಬ್ಬರು ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ಎಚ್ಚರಿಕೆ ನೀಡಿದೆ. ನಾಲ್ವರು ನೌಕರರಿಗೆ ನೋಟಿಸ್ ಜಾರಿ ಮಾಡಿದೆ.
ಇನ್ನು ಜಪಾನ್ ದೇಶದಲ್ಲಿ ಮೈಗಳ್ಳ ಸರ್ಕಾರಿ ಅಧಿಕಾರಿಗಳಿಗೆ ಬಿಸಿ ಮುಟ್ಟಿಸುತ್ತಿರುವುದು ಇದೇ ಮೊದಲೆನಲ್ಲ. ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಅದಕ್ಷ ಹಾಗೂ ಸೋಮಾರಿ ಸರ್ಕಾರಿ ನೌಕರರ ವಿರುದ್ಧ ಅಲ್ಲಿಯ ಸರ್ಕಾರ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ ಉದಾಹರಣೆ ಇದೆ.