Advertisement

ಕೃಷಿಕನಿಗೆ ಸಮರ್ಪಕ ವಿದ್ಯುತ್‌ ನೀಡದ ಸರಕಾರ: ಆಕ್ರೋಶ 

04:08 PM Jan 18, 2018 | |

ಕಡಬ: ಮೆಸ್ಕಾಂ ಕಡಬ ಉಪ ವಿಭಾಗ ಮಟ್ಟದ ವಿದ್ಯುತ್‌ ಗ್ರಾಹಕರ ಜನ ಸಂಪರ್ಕ ಸಭೆ ಮೆಸ್ಕಾಂ ಮಂಗಳೂರು
ವೃತ್ತ ಕಚೇರಿಯ ಅಧೀಕ್ಷಕ ಎಂಜಿನಿಯರ್‌ ಮಂಜಪ್ಪ ಅವರ ನೇತೃತ್ವದಲ್ಲಿ ಕಡಬದ ಅನುಗೃಹ ಸಭಾಭವನದಲ್ಲಿ ಬುಧವಾರ ಜರಗಿತು. ಬಳಕೆದಾರರಿಂದ ಪ್ರಶ್ನೆಗಳ ಸುರಿಮಳೆಯೇ ಆಯಿತು. ಅಧಿಕಾರಿಗಳೂ ಸಮಸ್ಯೆ ಆಲಿಸಿ, ಸೂಕ್ತವಾಗಿ ಸ್ಪಂದಿಸುವ ಮೂಲಕ ಜನರನ್ನು ಸಮಾಧಾನಿಸಿದರು.

Advertisement

ದೇಶಕ್ಕೆ ಅನ್ನ ನೀಡುವ ಕೃಷಿಕರಿಗೆ ಬೇಕಾದಷ್ಟು ವಿದ್ಯುತ್‌ ನೀಡಲು ವಿಫ‌ಲವಾಗಿರುವ ಸರಕಾರ, ರೈತನ ಬೆನ್ನೆಲುಬು ಮುರಿಯುತ್ತಿದೆ ಎಂದು ವಿದ್ಯುತ್‌ ಬಳಕೆದಾರರು ಆಕ್ರೋಶ ವ್ಯಕ್ತಪಡಿಸಿದರು. ದೂರುಗಳ ನಡುವೆ ಕೆಲವು ಅಧಿಕಾರಿಗಳ ಬಗ್ಗೆ ಪ್ರಶಂಸೆಯ ಮಾತುಗಳು ಕೇಳಿಬಂದವು.

ಫ‌ಲಾನುಭವಿಗಳಿಗೆ ಅನ್ಯಾಯ
ದೀನ್‌ದಯಾಳ್‌ ಉಪಾಧ್ಯಾಯ ಯೋಜನೆಯಲ್ಲಿ ಬಡವರಿಗೆ ವಿದ್ಯುತ್‌ ಸಂಪರ್ಕ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ, ಈ
ಯೋಜನೆಯ ಬಗ್ಗೆ ಸಮೀಕ್ಷೆ ನಡೆಸಿ ಅಂದಾಜು ಪಟ್ಟಿ ತಯಾರಿಸಿದರೂ ಹಲವು ಬಡವರ ಮನೆಗಳಿಗೆ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ. ಕೆಲವು ಪ್ರಭಾವಿಗಳಿಗೆ ಪ್ರತ್ಯೇಕ ಟ್ರಾನ್ಸ್‌ ಫಾರ್ಮರ್‌ ವ್ಯವಸ್ಥೆ ಮಾಡಿಕೊಟ್ಟು, ಅರ್ಹ ಫ‌ಲಾನುಭವಿಗಳಿಗೆ ಅನ್ಯಾಯ ಮಾಡಿದ್ದಾರೆ. ಟಿ.ಸಿ.ಯ ಸಾಮರ್ಥ್ಯಕ್ಕಿಂತ ಹೆಚ್ಚಿನ ಪಂಪ್‌ ಗಳಿಗೆ ಸಂಪರ್ಕ ಕೊಡುತ್ತಾರೆಯೇ ಹೊರತು, ಹೆಚ್ಚುವರಿ ಸಾಮರ್ಥ್ಯದ ಟಿಸಿ ಅಳವಡಿಸುವುದಿಲ್ಲ ಎಂದು ಆರೋಪಿಸಿದರು.

4 ಗಂಟೆ ತ್ರಿಫೇಸ್‌ ವಿದ್ಯುತ್‌ ಕೊಡಿ
ನೀರಕಟ್ಟೆ ಹೈಡಲ್‌ ಪವರ್‌ ಸ್ಟೇಶನ್‌ನಿಂದ 33 ಕೆವಿ 2 ಸರ್ಕ್ನೂಟ್‌ ಗುರುವಾಯನಕೆರೆಗೆ ಹೋಗಿದೆ. ಇದರಲ್ಲಿ 1 ಫೀಡರ್‌ನ ವಿದ್ಯುತ್‌ ಪಡಕೊಂಡು ನೀರಕಟ್ಟೆ ಸ್ಥಾವರದಿಂದ ನೆಲ್ಯಾಡಿ ಸ್ಥಾವರಕ್ಕೆ ವಿದ್ಯುತ್‌ ಸಂಪರ್ಕ ಕೊಟ್ಟಲ್ಲಿ ನೆಲ್ಯಾಡಿ, ಕಡಬ, ಸವಣೂರು, ಸುಬ್ರಹ್ಮಣ್ಯ ಭಾಗದಲ್ಲಿ ವಿದ್ಯುತ್‌ ಪೂರೈಕೆ ಸುಧಾರಣೆಯಾಗಲಿದೆ. ಕಡಬದಿಂದ ಪಂಜ ಮುಖಾಂತರ ನಿಂತಿಕಲ್ಲು , ಏನೆಕಲ್ಲು ಪ್ರದೇಶಕ್ಕೆ ಸರಬರಾಜು ಆಗುವ ವಿದ್ಯುತನ್ನು ಪಂಜ ತನಕ ಮಾತ್ರ ನೀಡಿ ಉಳಿದ ಭಾಗವನ್ನು ಬೆಳ್ಳಾರೆ ಸಬ್‌ಸ್ಟೇಶನ್‌ಗೆ ಸೇರ್ಪಡೆಗೊಳಿಸಬೇಕು. ದಿನಕ್ಕೆ ಕನಿಷ್ಠ 4 ಗಂಟೆ ತ್ರಿಫೇಸ್‌ ಗುಣಮಟ್ಟದ ವಿದ್ಯುತ್‌ ನೀಡಬೇಕು. ವಿದ್ಯಾರ್ಥಿಗಳ ಪರೀಕ್ಷೆ ಸಮಯದಲ್ಲಿ ಬೆಳಗ್ಗೆ ಮತ್ತು ಸಂಜೆ ವಿದ್ಯುತ್‌ ಕಡಿತ ಮಾಡಬಾರದು ಎಂದು ಗ್ರಾಹಕರು ಆಗ್ರಹಿಸಿದರು.

ಅಪಾಯಕಾರಿ ಲೈನ್‌, ಕಂಬ ತೆರವು
ರಸ್ತೆ ಬದಿಯ ಅಪಾಯಕಾರಿ ಕಂಬಗಳು, ಲೈನ್‌ಗಳನ್ನು ತತ್‌ಕ್ಷಣ ತೆರವು ಮಾಡಬೇಕು. ಕಡಬ ಸಬ್‌ಸ್ಟೇಶನ್‌ಗೆ ಪೂರ್ಣಕಾಲಿಕ ಕಾರ್ಯನಿರ್ವಾಹಕ ಎಂಜಿನಿಯರ್‌ ನೀಡಲಾಗುವುದು. ಸರಕಾರದಿಂದ ಎಲ್‌ಇಡಿ ಬಲ್ಬ್  ಗಳ ಸರಬರಾಜು ಕೆಲವು ತಿಂಗಳಿಂದ ಸ್ಥಗಿತಗೊಂಡಿದೆ. ಎಲ್ಲ ಶಾಖೆಗಳಲ್ಲೂ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

Advertisement

ಜಿ.ಪಂ. ಸದಸ್ಯರಾದ ಪಿ.ಪಿ. ವರ್ಗೀಸ್‌, ಆಶಾ ತಿಮ್ಮಪ್ಪ ಗೌಡ, ಪುತ್ತೂರು ವಿಭಾಗ ಕಚೇರಿಯ ಕಾರ್ಯನಿರ್ವಾಹಕ ಎಂಜಿನಿಯರ್‌ ನಾರಾಯಣ ಪೂಜಾರಿ, ಕಡಬ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ರಾಮಚಂದ್ರ, ಕಡಬ ತಾಂತ್ರಿಕ ವಿಭಾಗದ ಸಹಾ ಯಕ ಎಂಜಿನಿಯರ್‌ ಸಜಿಕುಮಾರ್‌, ಕಡಬ ಶಾಖಾಧಿಕಾರಿ ಈರಣ್ಣ ಗೌಡ, ನೆಲ್ಯಾಡಿ ಶಾಖಾಧಿಕಾರಿ ರಮೇಶ್‌, ಆಲಂಕಾರು ಶಾಖಾಧಿಕಾರಿ ಗೌತಮ್‌, ಬಿಳಿನೆಲೆ ಶಾಖಾಧಿಕಾರಿ ಅಭಿಷೇಕ್‌ ಉಪಸ್ಥಿತರಿದ್ದರು.

ಜಿ.ಪಂ. ಮಾಜಿ ಸದಸ್ಯ ಸಯ್ಯದ್‌ ಮೀರಾ ಸಾಹೇಬ್‌, ಎಪಿಎಂಸಿ ಮಾಜಿ ಅಧ್ಯಕ್ಷ ಸೀತಾ ರಾಮ ಗೌಡ ಪೊಸವಳಿಕೆ, ಸದಸ್ಯೆ ಪುಲಸ್ತ್ಯಾ ರೈ, ರಾಮಕೃಷ್ಣ ಹೊಳ್ಳಾರು, ತಾ.ಪಂ. ಸದಸ್ಯರಾದ ಆಶಾ ಲಕ್ಷ್ಮಣ್‌ ಗುಂಡ್ಯ, ಫಝಲ್‌ ಕೋಡಿಂಬಾಳ, ಪಿ.ವೈ. ಕುಸುಮಾ, ರಾಮಕುಂಜ ಗ್ರಾ.ಪಂ. ಅಧ್ಯಕ್ಷ ಪ್ರಶಾಂತ್‌ ಆರ್‌.ಕೆ., ಕೊಯಿಲ ಗ್ರಾ.ಪಂ. ಮಾಜಿ ಅಧ್ಯಕ್ಷ ಬಾಲಕೃಷ್ಣ ಗೌಡ, ಬಿಳಿನೆಲೆ ಗ್ರಾ.ಪಂ. ಅಧ್ಯಕ್ಷೆ ಶಾರದಾ, ಐತ್ತೂರು ಗ್ರಾ.ಪಂ. ಅಧ್ಯಕ್ಷ ಸತೀಶ್‌ ಕೆ., ಕಡಬ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಿವಾಕರ ಗೌಡ ಶಿರಾಡಿ, ಕಾರ್ಯದರ್ಶಿ ಡೆನಿಸ್‌ ಫೆರ್ನಾಂಡಿಸ್‌, ಪ್ರಮುಖರಾದ ಹರೀಶ್‌ ರೈ ನಡುಮಜಲು, ಸುಂದರ ಗೌಡ ಬಳ್ಳೇರಿ, ಕೆ.ಎಂ. ಹನೀಫ್‌, ಗಂಗಾಧರ ಶೆಟ್ಟಿ ನೆಲ್ಯಾಡಿ, ಕಮಲಾಕ್ಷ ರೈ ಮನವಳಿಕೆ, ರೋಯಿ ಅಬ್ರಹಾಂ, ಸುಬ್ರಹ್ಮಣ್ಯ ಭಟ್‌ ಕುಂತೂರು, ಹರೀಶ್‌ ಕೋಡಂದೂರು, ದೇವಯ್ಯ ಪನ್ಯಾಡಿ, ಉಮೇಶ್‌ ಶೆಟ್ಟಿ ಸಾಯಿರಾಂ, ಎನ್‌.ಎಸ್‌. ಭಟ್‌, ವರ್ಗೀಸ್‌ ಅಬ್ರಹಾಂ, ಗುರುಪ್ರಸಾದ್‌ ಪೆರಾಬೆ, ವಿಕ್ಟರ್‌ ಮಾರ್ಟಿಸ್‌ ಚರ್ಚೆಯಲ್ಲಿ ಪಾಲ್ಗೊಂಡಿದ್ದರು.

ಮೆಸ್ಕಾಂ ಸಲಹಾ ಸಮಿತಿಗೆ ಮನಣೆ ನೀಡಿ
ಸರಕಾರದಿಂದ ನೇಮಕಗೊಂಡಿರುವ ಮೆಸ್ಕಾಂ ಸಲಹಾ ಸಮಿತಿಯ ಸದಸ್ಯರನ್ನು ಅಧಿಕಾರಿಗಳು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಆರೋಪ ಸಭೆಯಲ್ಲಿ ಕೇಳಿಬಂತು. ಸಲಹಾ ಸಮಿತಿ ಸದಸ್ಯರಾದ ಬಳಿಕ ತಿಂಗಳಲ್ಲಿ ಒಂದು ಸಭೆಯೂ ನಡೆದಿಲ್ಲ. ಈ ಜನಸಂಪರ್ಕ ಸಭೆ ಕುರಿತಾಗಿಯೂ ಕೆಲವು ಸದಸ್ಯರಿಗೂ ಮಾಹಿತಿಯೇ ಇಲ್ಲ ಎಂದು ಸದಸ್ಯರು ದೂರಿದರು. ಮುಂದೆ ಹೀಗಾಗದಂತೆ ನೋಡಿಕೊಳ್ಳುವುದಾಗಿ ಅಧಿಕಾರಿಗಳು ಭರವಸೆ ನೀಡಿದರು.

110 ಕೆ.ವಿ. ಸಬ್‌ ಸ್ಟೇಷನ್‌
ಆಲಂಕಾರು ಭಾಗದಲ್ಲಿ 110 ಕೆ.ವಿ. ಸಬ್‌ ಸ್ಟೇಷನ್‌ ಕೂಡಲೇ ಆರಂಭಿಸಬೇಕು. ಕಡಬ ಭಾಗದಿಂದ ಸುಬ್ರಹ್ಮಣ್ಯ ತನಕ
ವಿದ್ಯುತ್‌ ಸರಬರಾಜು ಆಗುತ್ತಿದೆ. ಬಿಳಿನೆಲೆಯಿಂದ ಸಂಪರ್ಕ ಕಡಿತಗೊಳಿಸಿ ಬಿಳಿನೆಲೆ ಹಾಗೂ ಕೈಕಂಬ ಭಾಗವನ್ನು ಸುಬ್ರಹ್ಮಣ್ಯ ಸಬ್‌ಸ್ಟೇಶನ್‌ಗೆ ಸೇರ್ಪಡೆಗೊಳಿಸಬೇಕು. ಆಲಂಕಾರು ಭಾಗದ ವಿದ್ಯುತ್‌ ಸಮಸ್ಯೆ ನೀಗಿಸಲು ಸವಣೂರು ಸಬ್‌ ಸ್ಟೇಶನ್‌ನಿಂದ ವಿದ್ಯುತ್‌ ಸರಬರಾಜು ಮಾಡಬೇಕು ಎಂಬ ಸಲಹೆಗಳು ವ್ಯಕ್ತವಾದವು.

ಅನುದಾನ ಕೊರತೆಯಿಲ್ಲ
ಮೆಸ್ಕಾಂ ಮಂಗಳೂರು ವೃತ್ತ ಕಚೇರಿ ಎಂಜಿನಿಯರ್‌ ಮಂಜಪ್ಪ ಮಾತನಾಡಿ, ಆಲಂಕಾರು 110 ಕೆವಿ ಸಬ್‌ಸ್ಟೇಶನ್‌ ಅನುಷ್ಠಾನದ ಪ್ರಕ್ರಿಯೆ ನಡೆಯುತ್ತಿದೆ. ಸರ್ವೆ ಕಾರ್ಯ ನಡೆದಿದೆ. ಪ್ರಸ್ತಾವನೆ ಸರಕಾರದ ಮುಂದಿದೆ. ಕನಿಷ್ಠ 2 ವರ್ಷ ಕಾಲಾವಕಾಶ ಬೇಕು. ಬಿಳಿನೆಲೆ ಹಾಗೂ ಕೈಕಂಬಕ್ಕೆ ಕಡಬ ಭಾಗದಿಂದ ಸರಬರಾಜು ಆಗುವ ವಿದ್ಯುತ್ತನ್ನು ಕಡಿತಗೊಳಿಸಿ ಬಿಳಿನೆಲೆ ಭಾಗವನ್ನು ಸುಬ್ರಹ್ಮಣ್ಯ ವಿಭಾಗಕ್ಕೆ ಸೇರಿಸಲು ಪ್ರಸ್ತಾವನೆ ಸಲ್ಲಿಸಲಾಗುವುದು. ನೀರಕಟ್ಟೆಯ 33 ಕೆವಿ ವಿದ್ಯುತ್‌ ಸ್ಥಾವರದಿಂದ ವಿದ್ಯುತ್‌ ಸರಬರಾಜು ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳ ಜತೆ ಚರ್ಚಿಸಿ, ಸರ್ವೆ ಮಾಡಿ, ಡಿಪಿಆರ್‌ ತಯಾರಿಸಲಾಗುವುದು. ಈ ಭಾಗದಲ್ಲಿ 149 ವಿದ್ಯುತ್‌ ಪರಿವರ್ತಕಕ್ಕೆ ಬೇಡಿಕೆ ಬಂದಿದೆ. ಎಚ್‌ಟಿ ಹಾಗೂ ಎಲ್‌ಟಿ ಲೈನ್‌ಗಳ ಬದಲಾವಣೆಗೂ ಅಹವಾಲು ಬಂದಿದೆ. ಅದನ್ನು ಆದ್ಯತೆ ನೆಲೆಯಲ್ಲಿ ವ್ಯವಸ್ಥೆ ಮಾಡಲಾಗುವುದು. ಪುತ್ತೂರು ವಿಭಾಗಕ್ಕೆ 1.50 ಕೋ. ರೂ. ಅನುದಾನ ಮಂಜೂರಾಗಿದ್ದು, ಇನ್ನೂ 1 ಕೋ. ರೂ.ಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next