Advertisement

ಸರಕಾರಿ ವೈದ್ಯರಿಂದ ಅನಿರ್ದಿಷ್ಟಾವಧಿ ಮುಷ್ಕರ: ರೋಗಿಗಳು ಕಂಗಾಲು

09:10 AM Apr 14, 2018 | Team Udayavani |

ಕಾಸರಗೋಡು: ಅಗತ್ಯದ ವೈದ್ಯರು ಮತ್ತು ಇತರ ಸಿಬಂದಿಯನ್ನು ನೇಮಿಸದೆ ಹೊಸದಾಗಿ ಆರಂಭಿಸಲಾದ ಕುಟುಂಬ ಆರೋಗ್ಯ ಕೇಂದ್ರಗಳಲ್ಲಿ ಸಂಜೆ ಒ.ಪಿ. (ಹೊರರೋಗಿಗಳ ವಿಭಾಗ) ಆರಂಭಿಸಿರುವುದನ್ನು ಪ್ರತಿಭಟಿಸಿ ರಾಜ್ಯ ಸರಕಾರಿ ಆಸ್ಪತ್ರೆಗಳ ವೈದ್ಯರು ಎ. 13ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಿದ್ದಾರೆ. ಸರಕಾರಿ ವೈದ್ಯರ ಸಂಘಟನೆಯಾದ ಕೇರಳ ಗವರ್ನ್ ಮೆಂಟ್‌ ಮೆಡಿಕಲ್‌ ಆಫೀಸರ್ಸ್‌ ಅಸೋಸಿಯೇಶನ್‌ (ಕೆ.ಜಿ.ಎಂ.ಒ.ಎ.) ನೇತೃತ್ವದಲ್ಲಿ ಮುಷ್ಕರ ನಡೆಯುತ್ತಿದೆ. ತುರ್ತುಚಿಕಿತ್ಸಾ ವಿಭಾಗ ಮತ್ತು ಒಳರೋಗಿಗಳ ವಿಭಾಗಗಳನ್ನು ಹೊರತು ಪಡಿಸಿ ಒ.ಪಿ. ಸೇರಿದಂತೆ ಇತರ ಯಾವುದೇ ವಿಭಾಗಗಳ ಸೇವೆಗಳಲ್ಲಿ ವೈದ್ಯರು ಹಾಜರಾಗದೆ ಮುಷ್ಕರ ನಿರತರಾಗಿದ್ದಾರೆ. ಜಿಲ್ಲೆಯಲ್ಲಿ 188 ವೈದ್ಯರು ಮುಷ್ಕರ ನಿರತರಾಗಿದ್ದಾರೆ. ಜಿಲ್ಲಾಸ್ಪತ್ರೆ, ಜನರಲ್‌ ಆಸ್ಪತ್ರೆ, 5 ತಾಲೂಕು ಆಸ್ಪತ್ರೆ, 33 ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಅದೇ ರೀತಿ ಎಲ್ಲಾ ಸಾಮೂಹಿಕ ಆರೋಗ್ಯ ಕೇಂದ್ರಗಳ ವೈದ್ಯರು ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಆದರೆ ರಾಜ್ಯದಲ್ಲಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳ ಸೇವೆ ಎಂದಿನಂತೆ ನಡೆಯುತ್ತಿದೆ. ಅಗತ್ಯದ ಪೂರ್ವಸಿದ್ಧತೆ ಒದಗಿಸದೆ ಪಾಲ್ಗಾಟ್‌ ಕುಮಾರಂಪುತ್ತೂರು ಕುಟುಂಬ ಆರೋಗ್ಯ ಕೇಂದ್ರದಲ್ಲಿ ಒ.ಪಿ. ವಿಭಾಗ ಆರಂಭಿಸಿರುವುದನ್ನು ಪ್ರತಿಭಟಿಸಿ ಆ ಸೇವೆಗೆ ಹಾಜರಾಗದ ಡಾ| ಲತಾ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿತ್ತಲ್ಲದೆ, ಆ ಬಗ್ಗೆ ಇಬ್ಬರು ವೈದ್ಯರಿಗೆ ಸ್ಪಷ್ಟೀಕರಣ ನೀಡುವಂತೆ ನಿರ್ದೇಶಿಸಿ ಸರಕಾರ ನೊಟೀಸನ್ನು ಜಾರಿಗೊಳಿಸಿತ್ತು. ಅಂತಹ ಕ್ರಮಕ್ಕೂ ಶುಕ್ರವಾರ ಆರಂಭಿಸಿದ ಮುಷ್ಕರದೊಂದಿಗೆ ಸರಕಾರಿ ವೈದ್ಯರು ಪ್ರತಿಭಟನೆ ವ್ಯಕ್ತಪಡಿಸುತ್ತಿದ್ದಾರೆ.

Advertisement

ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೆಸರು ಬದಲಾಯಿಸಿ ಅದನ್ನು ಈಗ ಕುಟುಂಬ ಆರೋಗ್ಯ ಕೇಂದ್ರಗಳನ್ನಾಗಿ ಬದಲಾಯಿಸಲಾಗುತ್ತಿದೆ. ಜಾರಿಯಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಒ.ಪಿ. ವಿಭಾಗ ಬೆಳಗ್ಗೆ 9ರಿಂದ 2 ಗಂಟೆಯ ತನಕ ತೆರೆದು ಕಾರ್ಯವೆಸಗುತ್ತಿದೆ. ಕುಟುಂಬ ಆರೋಗ್ಯ ಕೇಂದ್ರ ಆರಂಭಿಸಿದ ಬಳಿಕ ಒ.ಪಿ. ವಿಭಾಗದ ಸೇವಾ ಸಮಯವನ್ನು ಸಂಜೆ 6ರ ತನಕ ವಿಸ್ತರಿಸಲಾಗಿದೆ. ಅದಕ್ಕೆ ಪ್ರತೀ ಆಸ್ಪತ್ರೆಗಳಲ್ಲಿ ಕನಿಷ್ಠ ಐವರು ವೈದ್ಯರುಗಳನ್ನಾದರೂ ಮತ್ತು ಅಗತ್ಯದ ಇತರ ಸಿಬಂದಿಯನ್ನು ನೇಮಿಸಬೇಕಾಗಿದೆ. ಆದರೆ ಹೆಚ್ಚುವರಿ ವೈದ್ಯರನ್ನಾಗಲೀ, ಇತರ ಸಿಬಂದಿಯನ್ನಾಗಲೀ ನೇಮಿಸದೆ ಒ.ಪಿ. ವಿಭಾಗದ ಸೇವೆಯನ್ನು ಈಗ ಸಂಜೆ 6 ಗಂಟೆ ತನಕ ವಿಸ್ತರಿಸಲಾಗಿದೆ ಎಂದೂ, ಅದನ್ನು ಪ್ರತಿಭಟಿಸಿ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗಿದೆಯೆಂದು ಕೆಜಿಎಂಒಎ ಪದಾಧಿಕಾರಿಗಳು ತಿಳಿಸಿದ್ದಾರೆ.

ಸ್ಪೆಷಲಿಸ್ಟ್‌ ವಿಭಾಗದ ವೈದ್ಯರು ಮುಷ್ಕರದಲ್ಲಿ ಪಾಲ್ಗೊಳ್ಳುತ್ತಿಲ್ಲ. ಆದರೆ ಅವರು ಮುಷ್ಕರಕ್ಕೆ ನೈತಿಕ ಬೆಂಬಲ ನೀಡುತ್ತಿದ್ದಾರೆ. ಮುಷ್ಕರ ನಿರತ ವೈದ್ಯರು ಒ.ಪಿ. ವಿಭಾಗ ಮಾತ್ರವಲ್ಲದೆ  ಪಿಐಪಿಡಬ್ಲ್ಯೂ, ಸರ್ಟಿಫಿಕೇಟ್‌ ವಿತರಣೆ, ವೈದ್ಯಕೀಯ ಶಿಬಿರ, ಆರೋಗ್ಯ ಇಲಾಖೆಗೆ ವರದಿ ಸಲ್ಲಿಕೆ ಇತ್ಯಾದಿ ಕರ್ತವ್ಯಗಳಲ್ಲೂ ಹಾಜರಾಗಿಲ್ಲ. ಮಾತ್ರವಲ್ಲ ಫೀಲ್ಡ್‌ ವರ್ಕ್‌ ಸೇವೆಯನ್ನು ನಿಲುಗಡೆಗೊಳಿಸಿದ್ದಾರೆ. ಮುಷ್ಕರದಿಂದಾಗಿ ಚಿಕಿತ್ಸೆಗಾಗಿ ಆಸ್ಪತ್ರೆಗಳಿಗೆ ಬರುತ್ತಿರುವ ರೋಗಿಗಳನ್ನು ತೀವ್ರ ಸಂಕಷ್ಟಕ್ಕೊಳಪಡಿಸಿದೆ. ಚಿಕಿತ್ಸೆ ಲಭಿಸದ ರೋಗಿಗಳು ಮತ್ತು ಸಂಬಂಧಿಕರು ರೊಚ್ಚಿಗೆದ್ದು ಆಸ್ಪತ್ರೆ ಅಧಿಕಾರಿಗಳನ್ನು ಪ್ರಶ್ನಿಸಿ ವಾಗ್ವಾದದಲ್ಲಿ ತೊಡಗಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ಹಲವು ಆಸ್ಪತ್ರೆಗಳಲ್ಲಿ ನಡೆದಿದೆ. ಕಾಸರಗೋಡು ಜನರಲ್‌ ಆಸ್ಪತ್ರೆ ಯಲ್ಲಿ ಚಿಕಿತ್ಸೆಗಾಗಿ ನೂರಾರು ರೋಗಿಗಳು ಬಂದಿದ್ದು, ಚಿಕಿತ್ಸೆ ಲಭಿಸದೆ ನಿರಾಶೆಯಿಂದ ವಾಪಸಾದರು.

Advertisement

Udayavani is now on Telegram. Click here to join our channel and stay updated with the latest news.

Next