ರಾಮನಗರ: ಖಾಸಗಿ ಡಯೋಗ್ನಾಸ್ಟಿಕ್ ಸೆಂಟರ್‌ನಲ್ಲಿ ಸರ್ಕಾರಿ ವೈದ್ಯೆಯೊಬ್ಬರು ಕೆಲಸದ ಸಮಯದಲ್ಲೇ ಸ್ಕ್ಯಾನಿಂಗ್ ಎಂಬ ಆಪಾದನೆ ಜಿಲ್ಲಾ ಪಿಸಿ ಅಂಡ್ ಪಿಎನ್‌ಡಿಟಿ ಸಮಿತಿ ತಪಾಸಣೆಯ ವೇಳೆ ಪತ್ತೆಯಾಗಿದ್ದರೂ ಸಂಬಂಧಿಸಿದ ಆರೋಗ್ಯ ಇಲಾಖೆ ಹಲವು ತಿಂಗಳು ಕಳೆದರೂ ಕ್ರಮ ಕೈಗೊಳ್ಳದಿರುವ ಸಂಗತಿ ಸಾಕಷ್ಟು ಚರ್ಚೆಗೆ ಎಡೆಮಾಡಿಕೊಟ್ಟಿದೆ. ಮಾಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮೃತ ಸ್ತ್ರೀಭ್ರೂಣ ಪತ್ತೆಯ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮತ್ತೂಮ್ಮೆ ಭ್ರೂಣ ಹತ್ಯೆ ಪ್ರಕರಣ ಸದ್ದು ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಮಾಹಿತಿ ಸಂಗ್ರಹಿಸಲು ಮುಂದಾದ ಪತ್ರಿಕೆಗೆ ಆರೋಗ್ಯ ಇಲಾಖೆಯಲ್ಲಿ ಅಧಿಕಾರಿಯಾಗಿದ್ದ ವೈದ್ಯರೊಬ್ಬರ ವಿರುದ್ಧವೇ ಪಿಸಿಅಂಡ್ ಪಿಎನ್‌ಡಿಸಿ ಸಮಿತಿ ದೂರು ನೀಡಿದ್ದರೂ ಇಲಾಖೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂಬ ಸಂಗತಿ ಬಯಲಾಗಿದೆ.
ಏನಿದು ಪ್ರಕರಣ: 2022ರ ನವೆಂಬರ್‌ನಲ್ಲಿ ಕನಕಪುರ ಮತ್ತು ಹಾರೋಹಳ್ಳಿಯ ಎರಡು ಖಾಸಗಿ ಡಯೋಗ್ನಾಸ್ಟಿಕ್ ಸೆಂಟರ್‌ಗಳಿಗೆ ಭೇಟಿ ನೀಡಿ ಸಮಿತಿ ಪರಿಶೀಲನೆ ನಡೆಸಿದಾಗ ಕೆಲ ದಾಖಲೆಗಳು ಸರಿ ಇರಲಿಲ್ಲ. ಇನ್ನು ತಂಡದ ಭೇಟಿ ಸಮಯದಲ್ಲಿ ತಾಲೂಕು ಮಟ್ಟದ ಅಧಿಕಾರಿಯಾಗಿದ್ದ ಮಹಿಳಾ ವೈದ್ಯೆಯೊಬ್ಬರು ಖಾಸಗಿ ಡಯೋಗ್ನಾಸ್ಟಿಕ್ ಸೆಂಟರ್‌ನಲ್ಲಿ ಕೆಲಸ ಮಾಡುತ್ತಿರುವ ಸಂಗತಿ ತಂಡದ ಗಮನಕ್ಕೆ ಬಂದಿದೆ. ಈ ಸಂಬಂಧ ಆರೋಗ್ಯ ಇಲಾಖೆಗೆ ವರದಿ ನೀಡಲಾಗಿದೆಯಾದರೂ ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಪಿಸಿ ಅಂಡ್ ಪಿಎನ್‌ಡಿಸಿ ಸಮಿತಿಯ ಸದಸ್ಯರೊಬ್ಬರು ಪತ್ರಿಕೆಗೆ ತಿಳಿಸಿದ್ದಾರೆ.
ಇನ್ನು ಆರೋಗ್ಯ ಇಲಾಖೆಯ ಪ್ರಮುಖ ಅಧಿಕಾರಿಯೊಬ್ಬರ ವಿರುದ್ಧ ಕೇಳಿ ಬಂದಿರುವ ಆರೋಪ ಗಳಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳದಿರುವುದು ಸಾಕಷ್ಟು ಚರ್ಚೆಗೆ ಎಡೆಮಾಡಿ ಕೊಟ್ಟಿದ್ದು, ಅಧಿಕಾರಿಗಳು ಇವರನ್ನು ರಕ್ಷಿಸುತ್ತಿದ್ದಾರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ತಮ್ಮ ಸಿಬ್ಬಂದಿಯನ್ನು ರಕ್ಷಿಸುವ ಆರೋಗ್ಯ ಇಲಾಖೆ ಖಾಸಗಿ ಡಯೋಗ್ನಾಸ್ಟಿಕ್ ಸೆಂಟರ್‌ಗಳ ಮೇಲೆ ಕ್ರಮ ಕೈಗಿಗೊಳ್ಳಲು ಸಾಧ್ಯವೇ ಎಂಬ ಪ್ರಶ್ನೆ ಸಹ ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ.
ಬೇಕಾಬಿಟ್ಟಿ ಕೆಲಸ ಮಾಡುತ್ತಿರುವ ವೈದ್ಯರು: ಪಿಸಿ ಅಂಡ್ ಪಿಎನ್‌ಡಿಟಿ ನಿಯಮದ ಪ್ರಕಾರ ಸ್ಕ್ಯಾನಿಂಗ್ ಯಂತ್ರಗಳನ್ನು ಅಳವಡಿಸುವ ಆಸ್ಪತ್ರೆ ಅಥವಾ ಡಯಾಗ್ನಾಸ್ಟಿಕ್ ಸೆಂಟರ್ ಈ ಯಂತ್ರವನ್ನು ಬಳಸಿ ಯಾವ ವೈದ್ಯರು ಕೆಲಸ ನಿರ್ವಹಿಸುತ್ತಾರೆ, ಅವರು ಇಲ್ಲದೆ ಹೋದರೆ ನಿರ್ವಹಿಸುವ ಇತರೆ ಡಾಕ್ಟರ್‌ಗಳ ಯಾರು ಎಂಬುದನ್ನು ಬಾಲಿಕಾ ಆನ್‌ಲೈನ್ ವೆಬ್‌ಪೋರ್ಟಲ್‌ನ ಎಂ ಪ್ಯಾನಲ್‌ನಲ್ಲಿ ನಮೂದಿಸಿರಬೇಕು. ಆದರೆ ಜಿಲ್ಲೆಯಲ್ಲಿ ಬಹುತೇಕ ಯಾರದೋ ಹೆಸರು ಯಂತ್ರದಲ್ಲಿ ಇದ್ದರೆ ಇನ್ಯಾರೋ ವೈದ್ಯರು ಸ್ಕ್ಯಾನಿಂಗ್ ಮಾಡುತ್ತಿದ್ದು, ಕೆಲ ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ದಾಖಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಈ ಬಗ್ಗೆ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಕೆಲಸ ಮಾಡಬೇಕಿದೆ.
ಸದಸ್ಯರಿಗೆ ಸರಿಯಾದ ಮಾಹಿತಿ ಇಲ್ಲ : ಜಿಲ್ಲೆಯ ಪಿಸಿ ಅಂಡ್ ಪಿಎನ್‌ಡಿಸಿ ಸಮಿತಿಯಲ್ಲಿ ಸದಸ್ಯರಾಗಿರುವವರ ಪೈಕಿ ಕೆಲ ಸದಸ್ಯರಿಗೆ ಕಾಯಿದೆಯ ಬಗ್ಗೆ ಅರಿವೇ ಇಲ್ಲ ಎಂಬ ಸಂಗತಿ ಸಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಕಾಯಿದೆಯ ಬಗ್ಗೆ ಅರಿವೇ ಇಲ್ಲದವರು ಯಾವರೀತಿ ಕಾನೂನು ಕ್ರಮ ಕೈಗೊಳ್ಳಲು ಸಾಧ್ಯ ಎಂಬುದು ಪ್ರಜ್ಞಾವಂತರ ಪ್ರಶ್ನೆಯಾಗಿದೆ. ಸರ್ಕಾರ ಜಿಲ್ಲಾ ಮಟ್ಟದ ಸಮಿತಿಯನ್ನು ರಚನೆ ಮಾಡುತ್ತದೆ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ ಹೆಸರುಗಳೇ ಸಮಿತಿಗೆ ಅಂತಿಮವಾಗುತ್ತದೆ. ಹೀಗಾಗಿ ರಾಜಕೀಯ ಹಿನ್ನೆಲೆಯುಳ್ಳವರಿಗೆ ಈ ಸಮಿತಿಯಲ್ಲಿ ಅವಕಾಶ ಸಿಗುತ್ತಿದ್ದು, ಇವರು ಸಮಿತಿಯಲ್ಲಿ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಿಲ್ಲ ಎಂಬ ಆಪಾದನೆಗಳಿವೆ.
ಬೇರೆ ಯಂತ್ರದಲ್ಲಿ ಸ್ಕ್ಯಾನಿಂಗ್: ಇತ್ತೀಚಿಗೆ ಜಿಲ್ಲಾ ಪಿಸಿ ಅಂಡ್ ಪಿಎನ್‌ಡಿಟಿ ಸಮಿತಿ ಖಾಸಗಿ ಸ್ಕ್ಯಾನಿಂಗ್ ಸೆಂಟರ್ ಒಂದರ ಮೇಲೆ ದಾಳಿ ಮಾಡಿದಾಗ ಅಲ್ಲಿ ಇಲಾಖೆಯಿಂದ ಅನುಮತಿ ಪಡೆದು ಬಾಲಿಕಾ ಸಾಫ್ಟ್‌ವೇರ್‌ನಲ್ಲಿ ಅಪ್‌ಡೇಟ್ ಆಗಿದ್ದ ಯಂತ್ರವೇ ಒಂದಾಗಿದ್ದರೆ, ಸ್ಕ್ಯಾನ್ ಮಾಡುತ್ತಿದ್ದ ಯಂತ್ರವೇ ಇನ್ನೊಂದಾಗಿತ್ತು. ಕೆಲ ಆಸ್ಪತ್ರೆಗಳಲ್ಲಿ ಈರೀತಿ ಮಾಡುತ್ತಿದ್ದು, ಆರೋಗ್ಯ ಇಲಾಖೆಯ ನಿಯಂತ್ರಣದಲ್ಲಿ ಇಲ್ಲದ ಸ್ಕ್ಯಾನಿಂಗ್ ಯಂತ್ರದಲ್ಲಿ ಸ್ಕ್ಯಾನಿಂಗ್‌ಮಾಡಿ ವರದಿ ನೀಡುತ್ತಿದ್ದು ಇದು ಸಹ ಭ್ರೂಣಲಿಂಗ ಪತ್ತೆಗೆ ಸಹಕಾರಿಯಾಗಿದೆ ಎಂಬ ಆಪಾದನೆಗಳಿವೆ. ಆರೋಗ್ಯ ಇಲಾಖೆಯ ಬಾಲಿಕಾ ವೆಬ್‌ಪೋರ್ಟ ಲ್‌ನಲ್ಲಿ ನಮೂದಿಸಿರುವ ರೀತಿಯಲ್ಲಿ 2018 ರಿಂದಿಚೆಗೆ ಜಿಲ್ಲೆಯಲ್ಲಿ 2 ಲಕ್ಷಕ್ಕೂ ಹೆಚ್ಚು ಸ್ಕ್ಯಾನ್‌ಗಳನ್ನು ಗರ್ಭೀಣಿಯರಿಗೆ ಮಾಡಲಾಗಿದೆ. ಆದರೆ, ಜಿಲ್ಲಾ ಮಟ್ಟದ ಸಮಿತಿ ದಾಖಲಿಸಿರುವ ಪ್ರಕರಣಗಳು ಮಾತ್ರ ಕೇವಲ 5, ಅದರಲ್ಲಿ ಎರಡು ಪ್ರಕರಣಗಳು ಮಾತ್ರ ದೂರು ದಾಖಲಾಗಿದ್ದು, ಇನ್ನು ಮೂರು ಪ್ರಕರಣಗಳು ಬಾಕಿ ಉಳಿದಿವೆ.
ಎರಡು ಸ್ಕ್ಯಾನಿಂಗ್ ಸೆಂಟರ್‌ನಲ್ಲಿ ತಾಲೂಕು ಮಟ್ಟದ ಅಧಿಕಾರಿಯಾಗಿದ್ದ ವೈದ್ಯರು ಕೆಲಸ ಮಾಡುತ್ತಿರುವ ಬಗ್ಗೆ ಸಮಿತಿ ನವೆಂಬರ್‌ನಲ್ಲಿ ವರದಿ ನೀಡಿದ್ದರೂ ಇನ್ನೂ ಅಧಿಕಾರಿಗಳು ಕ್ರಮ ಕೈಗೊಂಡಿಲ್ಲ. ಇದು ಜಿಲ್ಲೆಯಲ್ಲಿ ಸರ್ಕಾರಿ ವೈದ್ಯರಿಗೆ ಇಲಾಖೆಯಿಂದ ರಕ್ಷಣೆ ಸಿಗುತ್ತಿದೆ ಎಂಬುದಕ್ಕೆ ಸಾಕ್ಷಿ.
● ಹೆಸರೇಳಲಿಚ್ಚಿಸದ ಪಿಸಿ ಅಂಡ್ ಪಿಎನ್‌ಡಿಟಿ ಸಮಿತಿ ಸದಸ್ಯರು
ಪಿಸಿ ಅಂಡ್ ಪಿಎನ್‌ಡಿಟಿ ಸಮಿತಿ ವರದಿ ನೀಡಿರುವ ವೈದ್ಯರ ವಿರುದ್ಧ ವಿಭಾಗೀಯ ಜಂಟಿ ನಿರ್ದೇ ಶಕರು ಮತ್ತು ಇಲಾಖಾ ಆಯುಕ್ತರಿಗೆ ವರದಿ ನೀಡಲಾಗಿದೆ. ಮಾಗಡಿಯಲ್ಲಿ ಮೃತ ಭ್ರೂಣ ಪತ್ತೆಯಾಗಿರುವ ಬಗ್ಗೆಯೂ ಕ್ರಮ ವಹಿಸಲಾಗಿದೆ. ಇನ್ನೆರಡು ದಿನಗಳ ಒಳಗೆ ಪಿಸಿಅಂಡ್ ಪಿಎನ್‌ಡಿಸಿ ಸಮಿತಿ ಸಭೆ ನಡೆಸ ಲಾಗುವುದು. ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. ಇದರಲ್ಲಿ ಯಾವುದೇ ಸಂಶಯ ಬೇಡ.
● ಡಾ.ಕಾಂತರಾಜು, ಜಿಲ್ಲಾ ಆರೋಗ್ಯಾಧಿಕಾರಿ
– ಸು.ನಾ.ನಂದಕುಮಾರ್