Advertisement

Government Doctor: ಆಸ್ಪತ್ರೆಯಲ್ಲಿ ರಾಜಕೀಯ ಮಾಡುವುದಾದ್ರೆ ಸರ್ಕಾರಿ ನೌಕರಿ ತ್ಯಜಿಸಿ

07:59 PM Jul 20, 2024 | Team Udayavani |

ರಬಕವಿ-ಬನಹಟ್ಟಿ: ರಾಜಕೀಯ ಮಾಡುವುದು ಬಿಟ್ಟು ಸರ್ಕಾರಿ ಆಸ್ಪತ್ರೆಗಳ ವೈದ್ಯರು ರೋಗಿಗಳ ಸೇವೆ ಮಾಡಬೇಕು.  ರಬಕವಿ-ಬನಹಟ್ಟಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ನಡುವೆ ದಾಖಲೆಯ ರೋಗಿಗಳ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಮಹಾಲಿಂಗಪುರ ಸರ್ಕಾರ ಆಸ್ಪತ್ರೆ ರೋಗಿಗಳಿಲ್ಲದೇ ಭಣಗುಡುತ್ತಿದೆ. ರಾಜಕೀಯ ಮಾಡುವ ತೆವಲಿದ್ದರೆ ಸರ್ಕಾರಿ ನೌಕರಿ ತ್ಯಜಿಸಿ ನೇರವಾಗಿ ರಾಜಕೀಯಕ್ಕಿಳಿಯಿರಿ, ಪವಿತ್ರ ವೈದ್ಯ ವೃತ್ತಿಗೆ ದ್ರೋಹ ಬಗೆಯದೇ ನಿಷ್ಠರಾಗಿರಬೇಕೆಂದು ಶಾಸಕ ಸಿದ್ದು ಸವದಿ ಸರ್ಕಾರಿ ನೌಕರರಿಗೆ ತೀಕ್ಷ್ಣವಾಗಿ ಹೇಳಿದರು.

Advertisement

ರಬಕವಿ-ಬನಹಟ್ಟಿ ನಗರಸಭೆ ಸಭಾಭವನದಲ್ಲಿ ಶನಿವಾರ ನಡೆದ ಜರುಗಿದ ತಾಲೂಕು ಮಟ್ಟದ ಕೆಡಿಪಿ ಸಭೆಯಲ್ಲಿ ಇಲಾಖಾವಾರು ಪ್ರಗತಿ ಪರಿಶೀಲನೆ ವೇಳೆ  ಮಹಾಲಿಂಗಪುರ ಸರ್ಕಾರಿ ಆಸ್ಪತ್ರೆಯಲ್ಲಿ ಮಾಸಿಕ ಒಳರೋಗಿಗಳ ಮತ್ತು ಹೆರಿಗೆಯಾದ ಸಂಖ್ಯೆಗಳ ಬಗ್ಗೆ ಮುಧೋಳ ತಾಲೂಕು ವೈದ್ಯಾಧಿಕಾರಿ ಡಾ.ಮಲಘಾಣ ನೀಡಿದ ವಿವರಣೆಗೆ ಕೆಂಡವಾದ ಶಾಸಕ ಸಿದ್ದು ಸವದಿ, ಸಿಬ್ಬಂದಿ ಕೊರತೆಯಿಂದ ಬಹುತೇಕ ಸರ್ಕಾರಿ ಆಸ್ಪತ್ರೆಗಳು ನಲುಗುತ್ತಿವೆ. ಇಲ್ಲಿನ 32 ಸಿಬ್ಬಂದಿಗೆ ಯಾವ ಪುರುಷಾರ್ಥಕ್ಕೆ ಸರ್ಕಾರ ಸಂಬಳ ನೀಡಿ ಆಸ್ಪತ್ರೆ ಮುಂದುವರಿಸಬೇಕೆಂದು ಪ್ರಶ್ನಿಸಿದರು. ರೋಗಿಗಳೇ ಬಾರದ ಆಸ್ಪತ್ರೆಯನ್ನು ಆರು ತಿಂಗಳ ಕಾಲ ಮುಚ್ಚಲು ಮತ್ತು ಬೇಜವಾಬ್ದಾರಿಯಿಂದ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿ ಮೇಲೆ ಕ್ರಮ ಜರುಗಿಸಲು ಜಿಲ್ಲಾ ವೈದ್ಯಾಧಿಕಾರಿಗಳಿಗೆ ಸೂಚಿಸುವಂತೆ ನಿರ್ದೇಶನ ನೀಡಿದರು.

ತಾಲೂಕು ವೈದ್ಯಾಧಿಕಾರಿ ಡಾ.ಜಿ.ಎಸ್.ಗಲಗಲಿ ಮಾತನಾಡಿ ತಾಲೂಕು ಪ್ರದೇಶದಲ್ಲಿ 14 ಡೆಂಗ್ಯೂ ಪ್ರಕರಣಗಳು ಪತ್ತೆಯಾಗಿದ್ದು, ಸಮರ್ಪಕ ಚಿಕಿತ್ಸೆಯಿಂದ ಗುಣಮುಖರಾಗಿದ್ದಾರೆ. ಕಳೆದೆರಡು ತಿಂಗಳಿಂದ ಲಾರ್ವಾ ಸರ್ವೇ ನಡೆಸುತ್ತಿದ್ದು, ಸದ್ಯ ಯಾವುದೇ ಡೆಂಗ್ಯೂ ಪ್ರಕರಣ ಪತ್ತೆಯಾಗಿಲ್ಲವೆಂದು ವಿವರಿಸಿದರು. ಸರ್ಕಾರಿ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಬೇಕಾದರೆ ನಮಗೆ 10 ಎಕರೆ ಪ್ರದೇಶ ಗುರುತಿಸಿ ನೀಡುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಬನಹಟ್ಟಿಯ ಸಣ್ಣ ಕೈಗಾರಿಕೆ ಪ್ರದೇಶದಲ್ಲಿದ್ದ ಕಾಲೇಜು ಕಟ್ಟಡದ ಜಾಗ ಇಲ್ಲವೇ ಮದನಮಟ್ಟಿ ಬಳಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಳಿ ಜಾಗ ನೀಡಲು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದರು.

ಶಾಲಾ ಶಿಕ್ಷಣ ಇಲಾಖೆ ಬಿಇಒ ಅಶೋಕ ಬಸನ್ನವರ ಮಾತನಾಡಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ.೮೩.೯೭ ಫಲಿತಾಂಶ ಪಡೆಯುವ ಮೂಲಕ ನಮ್ಮ ತಾಲೂಕು ಪ್ರಥಮ ಸ್ಥಾನದಲ್ಲಿದ್ದು, ಫಲಿತಾಂಶ ಸುಧಾರಣೆಗೆ ಪರಿಹಾರ ಬೋಧನೆ ನಡೆಸಲಾಗುತ್ತಿದೆ. ಎಂದು ವಿವರಿಸಿದರು. ಕುಡುಕ ಶಿಕ್ಷಕರ ಬಗ್ಗೆ ಮತ್ತು ವೃತಾ ರಾಜಕಾರಣ ಮಾಡುತ್ತ ಕಾಲ ವ್ಯಯಿಸುವ ಶಿಕ್ಷಕರ ವಿರುದ್ಧ ಯಾವುದೇ ಮುಲಾಜಿಲ್ಲದೇ ಕ್ರಮ ಜರುಗಿಸಲು ಶಾಸಕ ಸವದಿ ಸೂಚಿಸಿದರು.

ಜಿಪಂ ಸಹಾಯಕ ಕಾರ್ಯಪಾಲಕ ಅಭಿಯಂತರ ನಾಯಕ್, ವೇದಿಕೆಯಲ್ಲಿ ತಾಲೂಕು ಪಂಚಾಯತಿ ಆಡಳಿತಾಧಿಕಾರಿ ಎಚ್.ಬಿ.ಪಾಟೀಲ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಸಿದ್ದಪ್ಪ ಪಟ್ಟಿಹಾಳ, ಉಪತಹಶೀಲ್ದಾರ ಶಾಂತಾ ಕೂಗಾಟೆ, ಪೌರಾಯುಕ್ತ ಜಗದೀಶ ಈಟಿ ಉಪಸ್ಥಿತರಿದ್ದರು. ಲೋಕೋಪಯೋಗಿ,  ಸಣ್ಣ ನೀರಾವರಿ, ಜಿಎಲ್‌ಬಿಸಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಪ್ರಗತಿ ಪರಿಶೀಲನಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next