Advertisement

ಸರ್ಕಾರ-ವೈದ್ಯರ ತಿಕ್ಕಾಟ; ರೋಗಿಗಳಿಗೆ ಸಂಕಟ 

12:09 PM Nov 17, 2017 | Team Udayavani |

ಮೈಸೂರು: ರಾಜ್ಯ ಸರ್ಕಾರದ ಉದ್ದೇಶಿತ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ವಿರೋಧಿಸಿ ಖಾಸಗಿ ವೈದ್ಯರು ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಗುರುವಾರದಿಂದ ನಗರದ ಖಾಸಗಿ ಆಸ್ಪತ್ರೆಗಳ ಹೊರ ರೋಗಿಗಳ ವಿಭಾಗ(ಒಪಿಡಿ) ಬಂದ್‌ ಆದ ಪರಿಣಾಮ ಖಾಸಗಿ ಆಸ್ಪತ್ರೆಗಳಿಗೆ ತೆರಳಿದ ರೋಗಿಗಳು ಹಾಗೂ ಸಾರ್ವಜನಿಕರು ಚಿಕಿತ್ಸೆಗಾಗಿ ಪರದಾಡಬೇಕಾಯಿತು.

Advertisement

 ವಿವಿಧ ಕಾರಣ ಮುಂದಿಟ್ಟುಕೊಂಡು ರಾಜ್ಯ ಸರ್ಕಾರ ಕರ್ನಾಟಕ ಖಾಸಗಿ ಆಸ್ಪತ್ರೆಗಳ ನಿಯಂತ್ರಣ ಕಾಯ್ದೆ ಜಾರಿಗೊಳಿಸಲು ಮುಂದಾಗಿದೆ. ಸರ್ಕಾರದ ನಿಲುವು ವಿರೋಧಿಸಿರುವ ಖಾಸಗಿ ವೈದ್ಯರು ನ.13ರಿಂದ ರಾಜಾದ್ಯಂತ ಕ್ಲಿನಿಕ್‌ಗಳು, ಪ್ರಯೋಗಾಲಯಗಳು ಸೇರಿದಂತೆ ಇನ್ನಿತರ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ಮುಷ್ಕರ ನಡೆಸುತ್ತಿದ್ದಾರೆ.

ಆದರೆ, ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಿರುವ ಖಾಸಗಿ ಆಸ್ಪತ್ರೆಗಳ ವೈದ್ಯರು ಆಸ್ಪತ್ರೆಗಳ ಸೇವೆ ಬಂದ್‌ ಮಾಡಿದ್ದಾರೆ. ಈ ಮೂಲಕ ಸರ್ಕಾರದ ಮೇಲೆ ಒತ್ತಡ ಪ್ರಯತ್ನ ಮಾಡಿದ್ದಾರೆ. ಆದರೆ ಸರ್ಕಾರ-ಖಾಸಗಿ ಆಸ್ಪತ್ರೆಗಳ ವೈದ್ಯರ ನಡುವಿನ ತಿಕ್ಕಾಟದಲ್ಲಿ ರೋಗಿಗಳು ಹಾಗೂ ಸಾರ್ವಜನಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದ್ದು, ಸೂಕ್ತ ಚಿಕಿತ್ಸೆ ಲಭಿಸದೆ ಹಲವರು ಕಂಗಾಲಾಗಿದ್ದಾರೆ. 

ರೋಗಿಗಳ ಸಂಖ್ಯೆ ಏರಿಕೆ: ಖಾಸಗಿ ಆಸ್ಪತ್ರೆಗಳು ಬಂದಾಗಿರುವ ಪರಿಣಾಮ ನಗರದ ಕೆ.ಆರ್‌.ಆಸ್ಪತ್ರೆಗೆ ಆಗಮಿಸುವ ರೋಗಿಗಳ ಸಂಖ್ಯೆಯಲ್ಲಿ ಸ್ಪಲ್ಪಮಟ್ಟಿನ ಏರಿಕೆಯಾಗಿದೆ. ಮೈಸೂರು ಮಾತ್ರವಲ್ಲದೆ ಚಾಮರಾಜನಗರ, ಮಂಡ್ಯ ಜಿಲ್ಲೆಯ ಜನರಿಗೆ ಅನುಕೂಲವಾಗಿರುವ ಕೆ.ಆರ್‌.ಆಸ್ಪತ್ರೆಗೆ ಕಳೆದ 3 ದಿನಗಳಿಗೆ ಹೋಲಿಸಿದರೆ ಗುರುವಾರ ಆಗಮಿಸಿರುವ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗಿತ್ತು.

ಅದರಂತೆ ನ.13ರಂದು 157-ಒಳರೋಗಿ, 1713 ಹೊರರೋಗಿ, ನ.14ರಂದು 145-ಒಳರೋಗಿ, 1533-ಹೊರರೋಗಿಗಳು, 15ರಂದು 107-ಒಳರೋಗಿ, 1502 ಹೊರರೋಗಿಗಳಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ ಕೆ.ಆರ್‌.ಆಸ್ಪತ್ರೆಗೆ ಪ್ರತಿನಿತ್ಯ ಹೆಚ್ಚಿನ ರೋಗಿಗಳು ಬರುತ್ತಿದ್ದರೂ ಹೆಚ್ಚಿನ ಸಮಸ್ಯೆ ಆಗಿಲ್ಲ ಎನ್ನುತ್ತಾರೆ ಆಸ್ಪತ್ರೆಯ ನೋಂದಣಿ ಕೇಂದ್ರದ ಸಿಬ್ಬಂದಿ.

Advertisement

ಸಾಲುಗಟ್ಟಿ ನಿಲ್ಲಬೇಕಾಯ್ತು: ಪ್ರತಿ ತಪಾಸಣೆಗಳಿಗೂ ಖಾಸಗಿ ಲ್ಯಾಬ್‌ನತ್ತ ಮುಖಮಾಡುತ್ತಿದ್ದ ಜನರು ಇದೀಗ ಸರ್ಕಾರಿ ಆಸ್ಪತ್ರೆ ಪ್ರಯೋಗಾಲಯಕ್ಕೆ ಬರುವಂತಾಗಿದೆ. ಹೀಗಾಗಿ ಚಿಕಿತ್ಸೆಗೆಂದು ಕೆ.ಆರ್‌.ಆಸ್ಪತ್ರೆಗೆ ಬಂದ ಹೊರ ರೋಗಿಗಳು ವಿವಿಧ ಪರೀಕ್ಷೆಗಾಗಿ ಕೇಂದ್ರೀಯ ಪ್ರಯೋಗಾಲಯವನ್ನು ಅವಲಂಬಿಸಬೇಕಾಯಿತು. ಪರಿಣಾಮ ಹಲವು ರೋಗಿಗಳು ಹಾಗೂ ಅವರ ಸಂಬಂಧಿಕರು ಪ್ರಯೋಗಾಲಯದ ಎದುರು ಗಂಟೆಗಟ್ಟಲೆ ಕಾದು ನಿಂತಿದ್ದ ದೃಶ್ಯಗಳು ಕಂಡುಬಂತು.

ಕೆ.ಆರ್‌. ಆಸ್ಪತ್ರೆ ಚರ್ಮರೋಗ ವಿಭಾಗ, ಕಣ್ಣಿನ ವಿಭಾಗ, ದಂತ ವಿಭಾಗ ಸೇರಿದಂತೆ ಇನ್ನಿತರ ವಿಭಾಗಗಳಲ್ಲಿ ಜನರು ಹೆಚ್ಚಾಗಿ ನಿಂತಿದ್ದರು. ನೋಂದಣಿ ಕೌಂಟರ್‌ನಲ್ಲಿ 3 ಸಾಲು ನಿಂತಿದ್ದರಿಂದ ಪ್ರತಿಯೊಬ್ಬರನ್ನು ಸಾಲಾಗಿ ನಿಲ್ಲಿಸಿ ಗೊಂದಲ ಉಂಟಾಗದಂತೆ ನೋಡಿಕೊಳ್ಳುವ ಕೆಲಸವನ್ನು ಭದ್ರತಾ ಸಿಬ್ಬಂದಿ ನೋಡಿಕೊಂಡರು. ಅಲ್ಲದೆ, ಎಂಬಿಬಿಎಸ್‌ ವಿದ್ಯಾರ್ಥಿಗಳ ನೆರವಿನಿಂದ ವೈದ್ಯರು ಎಲ್ಲಾ ರೋಗಿಗಳಿಗೆ ಸೂಕ್ತ ವೈದ್ಯಕೀಯ ಸೇವೆ ನೀಡುತ್ತಿರುವುದು ಕಂಡುಬಂತು.

ಖಾಸಗಿ ಆಸ್ಪತ್ರೆಗಳು ಖಾಲಿ ಖಾಲಿ: ವೈದ್ಯರ ಮುಷ್ಕರದ ಹಿನ್ನೆಲೆಯಲ್ಲಿ ನಗರದ ಪ್ರಮುಖ ಖಾಸಗಿ ಆಸ್ಪತ್ರೆಗಳ ವೈದ್ಯರು ಕರ್ತವ್ಯ ನಿರ್ವಹಿಸದೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರಿಂದ ಎಲ್ಲಾ ಆಸ್ಪತ್ರೆಗಳು ಬಿಕೋ ಎನ್ನುತ್ತಿತ್ತು. ನೋಂದಣಿ ಕೌಂಟರ್‌, ಹೊರರೋಗಿಗಳ ತಪಾಸಣಾ ಕೇಂದ್ರಕ್ಕೆ ವೈದ್ಯರು ತಲೆಹಾಕಲಿಲ್ಲ. ಆದರೆ, ತುರ್ತು ಚಿಕಿತ್ಸಾ ಘಟಕದ ಬಳಿಯಲ್ಲಿ ಒಂದಿಷ್ಟು ಜನದಟ್ಟಣೆ ಇರುವ ದೃಶ್ಯಗಳು ಬಹುತೇಕ ಖಾಸಗಿ ಆಸ್ಪತ್ರೆಗಳಲ್ಲಿ ಸಾಮಾನ್ಯವಾಗಿತ್ತು.

24ಗಂಟೆ ಕಾರ್ಯನಿರ್ವಹಿಸಲು ಸೂಚನೆ: ರೋಗಿಗಳು ಹಾಗೂ ಸಾರ್ವಜನಿಕರಿಗೆ ಹೆಚ್ಚಿನ ಸಮಸ್ಯೆ ಆಗದ ರೀತಿಯಲ್ಲಿ ಜಿಲ್ಲೆಯಲ್ಲಿ ನಿಗಾವಹಿಸಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಸೇವೆ ಲಭಿಸಿದ ಕಾರಣದಿಂದ ಅನೇಕರು ಸರ್ಕಾರಿ ಆಸ್ಪತ್ರೆಗಳ ಮೊರೆ ಹೋಗಬೇಕಿದೆ.

ಹೀಗಾಗಿ ಕಳೆದ 3 ದಿನಗಳಿಗೆ ಹೋಲಿಸಿದರೆ ಗುರುವಾರ ಕೆ.ಆರ್‌.ಆಸ್ಪತ್ರೆಯಲ್ಲಿ ಹೊರರೋಗಿಗಳ ಪ್ರಮಾಣ ಸ್ವಲ್ಪ$ಮಟ್ಟಿಗೆ ಹೆಚ್ಚಾಗಿದೆ. ತಾಲೂಕು ಹಾಗೂ ಜಿಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳು 24ಗಂಟೆ ಕಾರ್ಯ ನಿರ್ವಹಿಸುವಂತೆ ಸೂಚಿಸಲಾಗಿದ್ದು, ಇದರಿಂದ ರಾಜ್ಯದ ಇತರೆ ಜಿಲ್ಲೆಗಳಿಗೆ ಹೋಲಿಸಿದರೆ ಸಿಎಂ ತವರು ಜಿಲ್ಲೆಯ ಜನರು ನಿಟ್ಟುಸಿರು ಬಿಡುವಂತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next