ಹುಬ್ಬಳ್ಳಿ: “ಜೆಡಿಎಸ್ ಹಿರಿಯ ನಾಯಕರ ಹೇಳಿಕೆ ಗಮನಿಸಿದರೆ ಚುನಾವಣಾ ಫಲಿತಾಂಶ ಬರುವುದಕ್ಕೂ ಮೊದಲೇ ಮೈತ್ರಿ ಸರ್ಕಾರ ಉರುಳುತ್ತದೆ ಎನ್ನುವಂತಾಗಿದೆ. ಸರ್ಕಾರ ಬಹಳ ದಿನ ಉಳಿಯುವುದಿಲ್ಲ ಎಂದು ನಾವು ಹೇಳಿದಂತೆ ನಡೆಯುತ್ತಿದೆ ‘ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ, ಹಿರಿಯ ನಾಯಕ ಬಸವರಾಜ ಹೊರಟ್ಟಿ ವಿವಿಧ ಹೇಳಿಕೆ ನೀಡುತ್ತಿದ್ದಾರೆ. ಇದರಿಂದ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರಲ್ಲಿ ಯಾವುದೂ ಸರಿಯಿಲ್ಲ ಎಂಬುವುದು ಜಗಜ್ಜಾಹೀರಾಗಿದೆ. ಫಲಿತಾಂಶಕ್ಕೂ ಮೊದಲು ಮೈತ್ರಿ ಸರ್ಕಾರದಲ್ಲಿನ ಗೊಂದಲ ಸ್ಫೋಟವಾಗಿದ್ದು, ಅದು ನಾಯಕರ ಮೂಲಕ ಹೊರ ಬೀಳುತ್ತಿದೆ ಎಂದರು.
ಮೈತ್ರಿ ಸರ್ಕಾರದಲ್ಲಿನ ಗೊಂದಲ, ಬಿಕ್ಕಟ್ಟಿನಿಂದ ಬೇಸತ್ತು ಹೊರಟ್ಟಿ ವಿಧಾನಸಭೆ ವಿಸರ್ಜನೆ ಮಾಡುವುದು ಉತ್ತಮ ಎಂದು ಹೇಳಿರಬಹುದು. ಆದರೆ, ಸರ್ಕಾರದ ವಿಸರ್ಜನೆ ಸುಲಭದ ಮಾತಲ್ಲ. ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಿಗೆ ಸೇರಿ ಕ್ಯಾಬಿನೆಟ್‌ನಲ್ಲಿ ಬಹುಮತದ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರ ಮನಸ್ಸಿನಲ್ಲಿ ಏನಿದೆ ಎಂದು ಕಾದು ನೋಡೋಣ ಎಂದರು.
ಈ ಎಲ್ಲಾ ಬೆಳವಣಿಗೆ ನೋಡಿದರೆ ಲೋಕಸಭೆ ಚುನಾವಣೆ ಫಲಿತಾಂಶ ತಿರುಗು ಮುರುಗಾಗುತ್ತೆ ಎನ್ನುವುದು ಸ್ಪಷ್ಟವಾಗಿದೆ. ಕಾಂಗ್ರೆಸ್‌ನ ಹಿರಿಯ ನಾಯಕರು ಈ ಲೋಕಸಭೆ ಚುನಾವಣೆಯಲ್ಲಿ ಸೋಲುವುದು ಖಚಿತವಾಗಿದೆ. ಹೀಗಾಗಿ, ಗೊಂದಲಗಳು ಶುರುವಾಗಿವೆ.
ಮಂಡ್ಯ ಹಾಗೂ ಮೈಸೂರಿನಲ್ಲಿ ಮೈತ್ರಿ ಅಭ್ಯರ್ಥಿಯ ಸೋಲು ಖಚಿತವಾಗಿದ್ದು, ಇದು ಸರ್ಕಾರ ಉರುಳುವುದಕ್ಕೆ ಕಾರಣವಾಗಲಿದೆ. ಮಂಡ್ಯ ಸೇರಿದಂತೆ ರಾಜ್ಯದಲ್ಲಿ 22 ಕ್ಷೇತ್ರಗಳನ್ನು ನಾವು ಗೆಲ್ಲುತ್ತೇವೆ. ಕುಂದಗೋಳ ಹಾಗೂ ಚಿಂಚೋಳಿ ಕ್ಷೇತ್ರದಲ್ಲಿ ಕನಿಷ್ಠ 15-20 ಸಾವಿರ ಮತಗಳಿಂದ ನಮ್ಮ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದರು.
ಡಿಕೆಶಿಯಿಂದ ಅಸಮಾಧಾನ: ಕುಂದಗೋಳ ಕ್ಷೇತ್ರದ ಚುನಾವಣೆಯನ್ನು ಡಿ.ಕೆ.ಶಿವಕುಮಾರ ವಹಿಸಿಕೊಂಡಿದ್ದಕ್ಕೆ ಕಾಂಗ್ರೆಸ್ ನಾಯಕರು ಹಾಗೂ ಸ್ಥಳಿಯ ಮುಖಂಡರಲ್ಲಿ ಅಸಮಾಧಾನ ಉಂಟಾಗಿದೆ. ಆದರೆ ನಮ್ಮ ನಾಯಕರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದು, ನಮ್ಮ ಗೆಲುವು ನಿಶ್ಚಿತ ಎಂದರು.
ವೀರಶೈವರು ಯಾವುದೇ ಕಾರಣಕ್ಕೂ ಕಾಂಗ್ರೆಸ್‌ಗೆ ಮತ ಹಾಕುವುದಿಲ್ಲ. ಹಿಂದೆ ವೀರೇಂದ್ರ ಪಾಟೀಲ್ ಅವರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಿಸಲಾಗಿತ್ತು. ಇದನ್ನು ವೀರಶೈವರು ಮರೆಯುವುದಿಲ್ಲ. ಪಾಟೀಲರಿಗೆ ಆಗಿರುವ ಅವಮಾನ ನೆನಪಿಸುವ ಕೆಲಸ ಮಾಡುವುದರಲ್ಲಿ ತಪ್ಪೇನಿದೆ?
-ಬಿ.ಎಸ್.ಯಡಿಯೂರಪ್ಪ, ಮಾಜಿ ಸಿಎಂ