Advertisement

ಜಾರ್ಜ್‌ ಬೆಂಬಲಕ್ಕೆ ನಿಲ್ಲಲು ಸರ್ಕಾರ ನಿರ್ಧಾರ

07:33 AM Oct 27, 2017 | |

ಬೆಂಗಳೂರು: ಡಿವೈಎಸ್ಪಿ ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ವಿರುದ್ಧ ಎಫ್ಐಆರ್‌ನ್ನು ದಾಖಲಿಸಿದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸಂಪುಟದ ಹಿರಿಯ ಸಹೋದ್ಯೋಗಿಗಳ ಜತೆ ಚರ್ಚಿಸಿದ್ದಾರೆಂದು ತಿಳಿದು ಬಂದಿದೆ.

Advertisement

ಸಿಬಿಐ ಸಲ್ಲಿಸಿರುವ ಎಫ್ಐಆರ್‌ ಬಗ್ಗೆ ಅಧಿಕಾರಿಗಳಿಂದ ಸಿದ್ದರಾಮಯ್ಯ ಮಾಹಿತಿ ಪಡೆದುಕೊಂಡು ಸಚಿವರೊಂದಿಗೆ ಸಮಾಲೋಚನೆ ನಡೆಸಿದರು. ಪೊಲೀಸ್‌ ಅಧಿಕಾರಿ ಗಣಪತಿ ಸಾವಿನ ಪ್ರಕರಣದಲ್ಲಿ ಈ ಹಿಂದೆ ಪ್ರತಿಪಕ್ಷ ಬಿಜೆಪಿ ಹೋರಾಟ ನಡೆಸಿ ತೀವ್ರ ಒತ್ತಡ ಹಾಕಿದ್ದರಿಂದ ಜಾರ್ಜ್‌ ರಾಜೀನಾಮೆಯನ್ನು ಪಡೆದಿದ್ದರು. ಈಗ ಮತ್ತೆ ಸಿಬಿಐ ಎಫ್ಐಆರ್‌ ದಾಖಲಿಸಿರುವುದರಿಂದ ಬಿಜೆಪಿ ಹೋರಾಟ ನಡೆಸಿ ಒತ್ತಡ ಹಾಕುವುದರ ಜೊತೆಗೆ ಚುನಾವಣೆ ಸಂದರ್ಭದಲ್ಲಿ ರಾಜಕೀಯ ಲಾಭ ಪಡೆಯಲು ಯತ್ನಿಸಿದರೆ, ಅದನ್ನು ಎದುರಿಸುವುದು ಮತ್ತು ಬಿಜೆಪಿಯ ತಂತ್ರಗಾರಿಕೆಯನ್ನು ವಿಫ‌ಲಗೊಳಿಸುವ ಕುರಿತಂತೆಯೂ ಸಭೆಯಲ್ಲಿ ಚರ್ಚಿಸಿದರೆಂದು ತಿಳಿದು ಬಂದಿದೆ.

ಮುಖ್ಯಮಂತ್ರಿ ಅವರು ಸಮಾಲೋಚನಾ ಸಭೆಯಲ್ಲಿ ಹಿರಿಯ ಸಚಿವರಾದ ಡಿ.ಕೆ. ಶಿವಕುಮಾರ್‌, ಎಚ್‌.ಸಿ. ಮಹದೇವಪ್ಪ, ರಮೇಶ್‌ ಕುಮಾರ್‌, ಟಿ.ಬಿ. ಜಯಚಂದ್ರ, ಎಚ್‌.ಕೆ. ಪಾಟೀಲ್‌, ರಾಮಲಿಂಗಾ ರೆಡ್ಡಿ ಸೇರಿ ಹಲವರು ಉಪಸ್ಥಿತರಿದ್ದರೆಂದು ತಿಳಿದು ಬಂದಿದೆ. 

ಸಿಬಿಐ ಯಾವ ಅಂಶ ಆಧರಿಸಿ ಎಫ್ಐಆರ್‌ ದಾಖಲಿಸಿದೆ ಎನ್ನುವುದರ ಬಗ್ಗೆ ನನಗೆ ಮಾಹಿತಿಯಿಲ್ಲ. ಈಗಾಗಲೇ ಪ್ರಕರಣದಲ್ಲಿ ಸಿಐಡಿ ಕ್ಲೀನ್‌ ಚಿಟ್‌ ನೀಡಿದೆ. ಈಗ ಸಿಬಿಐ ತನಿಖೆ ಆರಂಭಿಸಿದೆ. ಅವರು ಮುಕ್ತ ತನಿಖೆ ನಡೆಸಲಿ. ಎರಡು, ಮೂರು ತಿಂಗಳಲ್ಲಿ ವರದಿ ಬರುತ್ತದೆ. ಆಗ ಪ್ರತಿಕ್ರಿಯೆ ನೀಡುತ್ತೇನೆ. 
 ● ಕೆ.ಜೆ. ಜಾರ್ಜ್‌, ಬೆಂಗಳೂರು ನಗರಾಭಿವೃದ್ಧಿ ಸಚಿವ.

ಈ ಹಿಂದೆ ತನಿಖೆಯನ್ನು ಸಿಐಡಿ ಆರಂಭಿಸಿದಾಗ ಜಾರ್ಜ್‌ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈಗ ಸಿಬಿಐ ಎಫ್ಐಆರ್‌ ದಾಖಲಿಸಿದರೂ ರಾಜೀನಾಮೆ ನೀಡುತ್ತಿಲ್ಲ. ಅಲ್ಲದೆ, ಮುಖ್ಯಮಂತ್ರಿ ಸೇರಿ ಸಚಿವರೆಲ್ಲರೂ ಜಾರ್ಜ್‌ ರಾಜೀನಾಮೆ ಅಗತ್ಯವಿಲ್ಲ ಎಂದು ಹೇಳುತ್ತಾರೆ. ಹಾಗಿದ್ದರೆ ಸಿಐಡಿಯಿಂದ ಕ್ಲೀನ್‌ಚಿಟ್‌ ಪಡೆದುಕೊಳ್ಳುವ ಭರವಸೆಯಿಂದಲೇ ಜಾರ್ಜ್‌ ಅವರು ಆಗ ರಾಜೀನಾಮೆ ನೀಡಿದ್ದರೇ?
 ● ಕೆ.ಎಸ್‌.ಈಶ್ವರಪ್ಪ, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ

Advertisement

ರಾಜಕೀಯ ಆರೋಪವನ್ನು ನಾವು ರಾಜಕೀಯವಾಗಿಯೇ ಎದುರಿಸುತ್ತೇವೆ. ಚುನಾವಣೆ ಸಂದರ್ಭದಲ್ಲಿ ನಮ್ಮ ನೈತಿಕ ಸ್ಥೈರ್ಯ ಕುಗ್ಗಿಸುವ ಕೆಲಸ ನಡೆದಿದೆ. ಸಚಿವ ಜಾರ್ಜ್‌ ಈ ಪ್ರಕರಣದಲ್ಲಿ ರಾಜೀನಾಮೆ ಕೊಡುವ ಅಗತ್ಯವಿಲ್ಲ. ನಾವೆಲ್ಲ ಅವರ ಬೆಂಬಲಕ್ಕಿದ್ದೇವೆ.
 ● ರಮೇಶ್‌ ಕುಮಾರ್‌ ಆರೋಗ್ಯ ಸಚಿವ

ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಬಿಐ ಎಫ್ ಐಆರ್‌ ದಾಖಲಿಸಿರುವ ಹಿನ್ನೆಲೆಯಲ್ಲಿ ಸಚಿವ ಕೆ.ಜೆ.ಜಾರ್ಜ್‌ ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.
 ● ಜಗದೀಶ ಶೆಟ್ಟರ್‌ ವಿಧಾನಸಭೆ ಪ್ರತಿಪಕ್ಷದ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next