ಬೆಂಗಳೂರು: ಕೋವಿಡ್ 19 ಸೋಂಕು ತಡೆಗಾಗಿ ಜಾರಿಯಲ್ಲಿರುವ ಲಾಕ್‌ಡೌನ್‌ನಿಂದಾಗಿ ಸರಕಾರದ ತೆರಿಗೆ ಆದಾಯದ ಮೇಲೂ ಗಂಭೀರ ಪರಿಣಾಮ ಬೀರಿದ್ದು, ಎಪ್ರಿಲ್‌ನಲ್ಲಿ ಸರಕಾರಿ ನೌಕರರಿಗೆ ವೇತನ, ಪಿಂಚಣಿ, ಸಾಮಾಜಿಕ ಸುರಕ್ಷತಾ ಪಿಂಚಣಿ, ಆಹಾರ ಭದ್ರತೆ, ಮೂಲ ಆಡಳಿತ ವೆಚ್ಚ ಗಳನ್ನಷ್ಟೇ ಆದ್ಯತೆ ಮೇರೆಗೆ ಕೈಗೊಂಡು ಅನಗತ್ಯ ವೆಚ್ಚಗಳಿಗೆ ಅವಕಾಶ ನೀಡಬಾರದು ಎಂದು ಆರ್ಥಿಕ ಇಲಾಖೆ ಆದೇಶ ಹೊರಡಿಸಿದೆ.
ಈ ಸಂಬಂಧ ಆರ್ಥಿಕ ಇಲಾಖೆ ಕಾರ್ಯದರ್ಶಿ (ಆಯವ್ಯಯ ಮತ್ತು ಸಂಪನ್ಮೂಲ) ಡಾ| ಏಕ್‌ರೂಪ್ ಕೌರ್ ಅವರು ಆದೇಶ ಹೊರಡಿಸಿದ್ದು, ಇಲಾಖೆಗಳ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು ಮತ್ತು ಕಾರ್ಯದರ್ಶಿಗಳು ಈ ನಿರ್ದೇಶಗಳನ್ನು ಕಟ್ಟುನಿಟ್ಟಾಗಿ ಪಾಲಿಸ ಬೇಕು ಎಂದು ಸೂಚನೆ ನೀಡಲಾಗಿದೆ.
ಸರಕಾರಿ ನೌಕರರಿಗೆ ಸಂಬಳ, ಪಿಂಚಣಿಯನ್ನು ಆರ್ಥಿಕ ಇಲಾಖೆಯ ಒಪ್ಪಿಗೆಯೊಂದಿಗೆ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ನಾನಾ ನಿಗಮ, ಮಂಡಳಿಗಳು ಪಡೆದ ಸಾಲಕ್ಕೆ ಸಂಬಂಧಪಟ್ಟಂತೆ ಕಂತು ಮತ್ತು ಸಾಲ ಮರುಪಾವತಿ ದಿನಾಂಕಕ್ಕೆ ಕನಿಷ್ಠ 15 ದಿನಗಳ ಮೊದಲೇ ಆರ್ಥಿಕ ಇಲಾಖೆಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ಜತೆಗೆ ಆಯಾ ನಿಗಮ, ಮಂಡಳಿ ನಗದು ಲಭ್ಯತೆ ವಿವರ ಕುರಿತ ವರದಿಯನ್ನೂ ಆರ್ಥಿಕ ಇಲಾಖೆಗೆ ಸಲ್ಲಿಸಬೇಕು. ಯಾವುದೇ ಕಾರಣಕ್ಕೂ ಆರ್ಥಿಕ ಇಲಾಖೆಗೆ ಪ್ರಸ್ತಾವ ಸಲ್ಲಿಸುವಲ್ಲಿ ವಿಳಂಬ ಮಾಡಿ ಪಾವತಿ ತಪ್ಪದಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.
ಆಡಳಿತ, ಕಟ್ಟಡ ನಿರ್ವಹಣೆ, ಸಾರಿಗೆಗೆ ಸಂಬಂಧಪಟ್ಟಂತೆ ಅಗತ್ಯವಿದ್ದಷ್ಟೇ ವೆಚ್ಚ ಮಾಡಬೇಕು. ಯಾವುದೇ ಹೊಸ ವಾಹನ, ಪೀಠೊಪಕರಣ, ಕಟ್ಟಡದ ಪ್ರಮುಖ ದುರಸ್ತಿ ಕಾಮಗಾರಿ, ನಿರ್ಮಾಣ ಕಾಮಗಾರಿ ಕೈಗೊಳ್ಳುವಂತಿಲ್ಲ. ಜತೆಗೆ ಲಾಕ್‌ಡೌನ್ ಅವಧಿಯಲ್ಲಿ ಮತ್ತು ಲೌಕ್‌ಡೌನ್ ಅವಧಿ ಸಡಿಲಗೊಂಡ ಅವಧಿಯಲ್ಲಿ ಸಾರ್ವಜನಿಕ ಹಿತಾಸಕ್ತಿ ದೃಷ್ಟಿಯಿಂದ ಅಗತ್ಯವಾಗಿ ಜಾರಿಗೊಳಿಸಬೇಕಾದ ಕಾರ್ಯಕ್ರಮಗಳ ಬಗ್ಗೆ ವಾರದೊಳಗೆ ಆರ್ಥಿಕ ಇಲಾಖೆಗೆ ವರದಿ ಸಲ್ಲಿಸಬಹುದು. ಈ ಬಗ್ಗೆ ಇಲಾಖೆಯೂ ಪರಿಶೀಲನೆ ನಡೆಸಿ ಅವುಗಳ ಜಾರಿಗೆ ಪ್ರತ್ಯೇಕ ಆದೇಶ ಹೊರಡಿಸಲಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.
ಮಾರ್ಚ್ ತಿಂಗಳ ವೇತನ ಪಾವತಿಗೆ ಸೂಚನೆ
ಪಂಚಾಯತ್ ರಾಜ್ ಸಂಸ್ಥೆಗಳು, ನಗರ ಸ್ಥಳೀಯ ಸಂಸ್ಥೆಗಳ ವೆಚ್ಚಗಳಿಗೆ ಬಜೆಟ್ ಅನುದಾನ ಅನುಸಾರ ಹಣ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕು. ಈ ಅಂಶಗಳನ್ನು ಹೊರತುಪಡಿಸಿ ಇತರ ವೆಚ್ಚಗಳಿಗೆ ಆರ್ಥಿಕ ಇಲಾಖೆಯ ಅನುಮತಿ ಪಡೆಯಬೇಕು. ಕೇವಲ ಮಾರ್ಚ್ ತಿಂಗಳ ವೇತನವನ್ನಷ್ಟೇ ಪಾವತಿಸಬೇಕು. ಖಜಾನೆಯು ಆರ್ಥಿಕ ಇಲಾಖೆಯ ಸೂಕ್ತ ಅನುಮತಿಯಿಲ್ಲದೆ ಹಿಂಬಾಕಿ ಮೊತ್ತ ಪಾವತಿಸುವಂತಿಲ್ಲ ಎಂದು ಸೂಚನೆ ನೀಡಲಾಗಿದೆ.