Advertisement

ಎಸ್‌ಟಿ ಮೀಸಲಾತಿ ನೀಡಲು ಸರ್ಕಾರ ಬದ್ಧ

01:26 PM May 07, 2022 | Team Udayavani |

ನಾಯಕನಹಟ್ಟಿ: ಬಿಜೆಪಿ ಸರಕಾರದ ಅವಧಿಯಲ್ಲಿಯೇ ಎಸ್ಟಿ ಜನಾಂಗಕ್ಕೆ ಶೇ.7.5 ಮೀಸಲಾತಿ ನೀಡುವುದಕ್ಕೆ ಬಿಜೆಪಿ ಬದ್ಧವಾಗಿದೆ ಎಂದು ಸಾರಿಗೆ ಮತ್ತು ಪರಿಶಿಷ್ಟ ಪಂಗಡ ಅಭಿವೃದ್ಧಿ ಸಚಿವ ಬಿ.ಶ್ರೀರಾಮುಲು ಹೇಳಿದರು.

Advertisement

ಹೋಬಳಿಯ ಓಬಯ್ಯನಹಟ್ಟಿ ಗ್ರಾಮದ ಆಂಜನೇಯಸ್ವಾಮಿ ದೇವಾಲಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾನು ಮೊಳಕಾಲ್ಮೂರು ಕ್ಷೇತ್ರದ ಶಾಸಕನಾಗಿದ್ದಾಗ ಪಕ್ಷ ಅಧಿಕಾರದಲ್ಲಿರಲಿಲ್ಲ. ನಂತರ ಪಕ್ಷ ಅಧಿಕಾರಕ್ಕೆ ಬಂದಿದೆ. ಜತೆಗೆ ನಾನು ಸಚಿವನಾಗಿದ್ದೇನೆ. ಆದ್ದರಿಂದ ಪರಿಶಿಷ್ಟ ಪಂಗಡಕ್ಕೆ ಶೇ.7.5 ಮೀಸಲಾತಿ ನೀಡುವ ವಿಷಯದಲ್ಲಿ ಬದ್ಧತೆ ಹೊಂದಿದ್ದೇನೆ ಎಂದರು.

ಪರಿಶಿಷ್ಟ ಪಂಗಡ ಸಮುದಾಯವು ರಾಜ್ಯದಲ್ಲಿ ಬಹುದಿನಗಳಿಂದ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸುವಂತೆ ನೂರಾರು ಮನವಿಗಳು, ಹೋರಾಟಗಳನ್ನು ನಡೆದಿವೆ. ಸರಕಾರಿ ಈ ವಿಷಯದಲ್ಲಿ ಪ್ರಮಾಣಿಕ ಪ್ರಯತ್ನಗಳನ್ನು ನಡೆಸುತ್ತಿದೆ. ಮೀಸಲಾತಿ ಹೆಚ್ಚಿಸಲು ಸಂಪುಟ ಉಪಸಮಿತಿ ರಚಿಸಿ ಹಲವು ಸಾಧಕ ಬಾಧಕಗಳನ್ನು ಚರ್ಚಿಸಿ ಸಮುದಾಯದ ಹಿತಕ್ಕಾಗಿ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದರು.

ನಾಗಮೋಹನ ದಾಸ್‌ ವರದಿ ಹಿನ್ನೆಲೆಯಲ್ಲಿ ಮೀಸಲಾತಿ ಹೆಚ್ಚಿಸುವುದರಿಂದ ನಮ್ಮ ಸಮುದಾಯದ ಯುವಜನತೆಗೆ ಶಿಕ್ಷಣ, ಉದ್ಯೋಗದಲ್ಲಿ ಅವಕಾಶಗಳು ಹೆಚ್ಚಲಿವೆ. ಆದರೆ ಮೀಸಲಾತಿ ವಿಚಾರದಲ್ಲಿ ಕೆಲವರು ಸರ್ಕಾರದ ನಡೆಯನ್ನು ಅನಾವಶ್ಯಕವಾಗಿ ಟೀಕಿಸುತ್ತಿದ್ದಾರೆ. ಜತೆಗೆ ಹಲವು ಗೊಂದಲಗಳನ್ನು ಹುಟ್ಟುಹಾಕುವ ಕೆಲಸ ಮಾಡುತ್ತಿದ್ದಾರೆ. ಇದ್ಯಾವುದಕ್ಕೆ ಸಮುದಾಯದ ಜನರು ತಲೆಕೆಡಿಸಿಕೊಳ್ಳದೆ ಇರಬೇಕು. ಮೀಸಲಾತಿ ಜಾರಿ ವಿಷಯದಲ್ಲಿ ಸರ್ಕಾರ ದಿಟ್ಟ ಹಾಗೂ ಸ್ಪಷ್ಟ ನಿಲುವು ಹೊಂದಿದೆ. ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲೇ ಶೇ.7.5ರಷ್ಟು ಮೀಸಲಾತಿಯನ್ನು ಹೆಚ್ಚಿಸುವ ಕಾರ್ಯವನ್ನು ಮಾಡಲಾಗುವುದು. ಜನರು ಗೊಂದಲ ಉಂಟು ಮಾಡುವ ಕಿಡಿಗೇಡಿಗಳ ಮಾತುಗಳಿಗೆ ಕಿವಿಗೊಡಬಾರದು ಎಂದರು.

ಬಹುದಿನಗಳ ಬೇಡಿಕೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯಲ್ಲಿ ಕೆರೆಗಳನ್ನು ತುಂಬಿಸುವುದು ಮತ್ತು ತುಂಗಾಭದ್ರ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಕಾಮಗಾರಿಗಳನ್ನು ಒಂದು ವರ್ಷದ ಅವಧಿಯೊಳಗೆ ಪೂರ್ಣಗೊಳಿಸಲು ಸಂಬಂಧಪಟ್ಟ ನಿಗಮಗಳಿಗೆ ತಾಕೀತು ಮಾಡಲಾಗಿದೆ. ಈ ಎರಡು ಅಂಶಗಳನ್ನು ನಾನು ಅತ್ಯಂತ ಹೆಚ್ಚಿನ ಆಸಕ್ತಿಯಿಂದ ಪರಿಶೀಲಿಸುತ್ತಿದ್ದೇನೆ. ಮುಂದಿನ ಒಂದು ವರ್ಷದಲ್ಲಿ ನೀರು ಪೂರೈಸಲಾಗುವುದು ಎಂದು ಹೇಳಿದರು.

Advertisement

ಇದೇವೇಳೆ ಗ್ರಾಮಸ್ಥರು, ಓಬಯ್ಯನಹಟ್ಟಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಹಳ್ಳ ಇದ್ದು, ಸುಗಮ ಸಂಚಾರಕ್ಕೆ ಬೃಹತ್‌ ಸೇತುವೆ ಅವಶ್ಯಕತೆ ಇದೆ. ಪ್ರಸ್ತುತ ಇರುವ ಸೇತುವೆಯು ಎರಡು ದಶಕಗಳಿಂದ ಶಿಥಿಲಾವಸ್ಥೆ ತಲುಪಿದೆ. ನೂತನವಾಗಿ ಸೇತುವೆ ನಿರ್ಮಾಣಕ್ಕೆ ಎರಡು ಕೋಟಿ ರೂ ಅಗತ್ಯವಿದೆ. ಓಬಯ್ಯನಹಟ್ಟಿಯಿಂದ ರಾಮಸಾಗರ ಮಾರ್ಗದ ಮೂಲಕ ಗ್ರಾಮಪಂಚಾಯಿತಿ ಕೇಂದ್ರವಾದ ತಿಮ್ಮಪ್ಪಯ್ಯನಹಳ್ಳಿಗೆ ರಸ್ತೆ ನಿರ್ಮಿಸಲು 3ಕೋಟಿ ರೂ., ಗ್ರಾಮದ ಸಮೀಪದಲ್ಲೇ ಇರುವ ಸಿದ್ಧನಹಳ್ಳಕ್ಕೆ ತಡಗೋಡೆ ನಿರ್ಮಿಸಲು 2 ಕೋಟಿ ರೂ., ಹಾಗೂ ನೂತನ ಆಂಜನೇಯ ದೇವಾಲಯದ ರಾಜಗೋಪುರ ನಿರ್ಮಾಣಕ್ಕೆ 50ಲಕ್ಷ ರೂ.ಅನುದಾನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.

ಮನವಿ ಸ್ವೀಕರಿಸಿ ಮಾತನಾಡಿದ ಶ್ರೀರಾಮುಲು, ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಆಂಜನೇಯಸ್ವಾಮಿ ದೇಗುಲದ ರಾಜಗೋಪುರಕ್ಕೆ ನನ್ನ ವೈಯಕ್ತಿಕ ಹಣದಲ್ಲಿ ರಾಜಗೋಪುರ ನಿರ್ಮಿಸುತ್ತೇನೆ. ಗ್ರಾಮಸ್ಥರು ರಾಜಗೋಪುರದ ಕ್ರಿಯಾಯೋಜನೆ ತಯಾರಿಸಿ ಅಂದಾಜು ಮೊತ್ತವನ್ನು ತಿಳಿಸಿ ಎರಡು ದಿನದಲ್ಲಿ ಹಣ ತಲುಪಿಸುತ್ತೇನೆ ಎಂದು ಭರವಸೆ ನೀಡಿದರು.

ಗ್ರಾಪಂ ಅಧ್ಯಕ್ಷ ಬಂಡೆ ಕಪಿಲೇ ಓಬಣ್ಣ, ಬಿಜೆಪಿ ಮಂಡಲ ಅಧ್ಯಕ್ಷರಾದ ಡಾ| ಪಿ.ಎಂ. ಮಂಜುನಾಥ, ಇ.ರಾಮರೆಡ್ಡಿ, ಮುಖಂಡರಾದ ಎಂ.ವೈ.ಟಿ. ಸ್ವಾಮಿ, ಸಿ.ಬಿ. ಮೋಹನ್‌, ಕಾಕಸೂರಯ್ಯ, ಗ್ರಾಮಸ್ಥರಾದ ಪಟೇಲ್‌ ಪಿಎಂ., ಮಹದೇವಣ್ಣ, ಪರಮೇಶ್ವರಪ್ಪ, ದಳವಾಯಪ್ಪ, ಬೋರಜ್ಜಯ್ಯ, ಮರಡಿಬೋರಯ್ಯ, ಅಜ್ಜಣ್ಣ, ಮಾರಯ್ಯ, ತಿಪ್ಪೇಸ್ವಾಮಿ, ಗಣೇಶಬೋರಯ್ಯ, ಗೊ. ಸಣ್ಣಬೋರಯ್ಯ, ಮಲ್ಲಯ್ಯ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next