ತಿಪಟೂರು: ತಾಲೂಕಿನ ಹಾಲ್ಕುರಿಕೆ ಹಾಗೂ ಪಟ್ಟದದೇವರ ಕೆರೆಗೆ ನೀರು ಹರಿಸುವ ಕಾಮಗಾರಿಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಭೂಮಿಪೂಜೆ ನೆರವೇರಿಸಿದರು.
ಈ ವೇಳೆ ಮಾತನಾಡಿದ ಸಚಿವರು, ಹಾಲ್ಕುರಿಕೆ ಕೆರೆಗೆ ಹೇಮಾವತಿ ನೀರು ಹರಿಸಬೇಕೆನ್ನುವುದು ಈ ಭಾಗದ ಜನರ ದಶಕಗಳ ಕನಸು. ಹಲವಾರು ಅಡ್ಡಿ ಆತಂಕಗಳನ್ನು ನಿವಾರಿಸಿ ಪ್ರಾರಂಭಗೊಳ್ಳು ತ್ತಿದ್ದು ಯೋಜನೆಯನ್ನು ಶೀಘ್ರವಾಗಿ ಪೂರ್ಣ ಗೊಳಿಸಲಾಗುವುದು ಎಂದು ಹೇಳಿದರು.
89 ಕೋಟಿ ರೂ. ವೆಚ್ಚ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಜೆ.ಸಿ.ಮಾಧುಸ್ವಾಮಿ ಅವರ ಸಹಕಾರದೊಂದಿಗೆ 89 ಕೋಟಿ ರೂ. ವೆಚ್ಚದ ಕಾಮಗಾರಿಗೆ ಚಾಲನೆ ನೀಡಿದ್ದು, ಈ ವರ್ಷದ ಹೇಮಾವತಿ ನಾಲೆ ನೀರು ಬಿಡುವುದರೊಳಗೆ ಕಾಮಗಾರಿ ಪೂರ್ಣಗೊಳಿಸಿ ಹಾಲ್ಕುರಿಕೆ ಕೆರೆ ಹಾಗೂ ಪಟ್ಟದದೇವರ ಕೆರೆಗೆ ನೀರು ಹರಿಸಲಾಗು ವುದು ಎಂದು ಹೇಳಿದರು.
ನೀರಾವರಿ ಯೋಜನೆ ಅನುಷ್ಠಾನಕ್ಕೆ ಬದ್ಧ: ನಿಯಮಬದ್ಧವಾಗಿ ಭೂಸ್ವಾಧೀನಕ್ಕೆ ಅರ್ಹ ರೈತರಿಗೆ ಅನ್ಯಾಯವಾಗದಂತೆ ಪರಿಹಾರ ದೊರ ಕಿಸಿಕೊಡಲಾಗುವುದು. ಅರಣ್ಯ ಇಲಾಖೆಯ ಅನುಮೋದನೆ ಪಡೆಯಲು ಸಾಕಷ್ಟು ಅಡ್ಡಿ ಆತಂಕಗಳು ಎದುರಾದರೂ ಇಲಾಖೆಯಿಂದ ಬಳಸಿಕೊಳ್ಳುವ ಭೂಮಿಗೆ ಪರ್ಯಾಯವಾಗಿ ತಾಲೂಕಿನ ರಜತಾದ್ರಿಪುರ ಹಾಗೂ ಕೋಡಿಹಳ್ಳಿ ಬಳಿ ಭೂಮಿ ನೀಡಲಾಗಿದೆ. ನಮ್ಮ ಸರ್ಕಾರ ನೀರಾವರಿ ಯೋಜನೆಗಳ ಅನುಷ್ಠಾನಗೊಳಿಸಲು ಬದ್ಧವಾಗಿದೆ ಎಂದು ಹೇಳಿದರು.
ನೀರಾವರಿ ಯೋಜನೆ ಪ್ರಗತಿ: ತಾಲೂಕಿಗೆ 180 ಕೋಟಿ ರೂ. ವೆಚ್ಚದ ನೀರಾವರಿ ಯೋಜನೆ ಹಣ ಮುಂಜೂರಾಗಿದ್ದು, ಶೀಘ್ರ ಮುಖ್ಯಮಂತ್ರಿಗಳಿಂದ ಯೋಜನೆಗೆ ಚಾಲನೆ ದೊರಕಲಿದೆ. ತಾಲೂಕಿನ ಸಣ್ಣೇನಹಳ್ಳಿ, ಹೊನ್ನವಳ್ಳಿ, ರಂಗಾಪುರ, ಕಿಬ್ಬನಹಳ್ಳಿ ಏತ ನೀರಾವರಿ ಸೇರಿ ಹಲವಾರು ನೀರಾವರಿ ಯೋಜನೆಗಳು ಪ್ರಗತಿಯಲ್ಲಿವೆ ಎಂದು ವಿವರಿಸಿದರು.
ಸಾರ್ವಜನಿಕರಿಂದ ಸನ್ಮಾನ: ಕಾರ್ಯಕ್ರಮಕ್ಕೂ ಮುನ್ನ ಹಾಲ್ಕುರಿಕೆ ಗ್ರಾಮದೇವತೆ ಶ್ರೀ ಕೆಂಪಮ್ಮ ದೇವಿ ದೇವಾಲಯದ ಆವರಣದಲ್ಲಿ ಆಯೋಜಿ ಸಿದ್ದ ವಿಶ್ವಗುರು ಶ್ರೀಬಸವೇಶ್ವರ ಜಯಂತಿ, ಅಭಿನಂದನಾ ಸಮಾರಂಭದಲ್ಲಿ ಸಾರ್ವಜನಿಕರಿಂದ ಸನ್ಮಾನ ಸ್ವೀಕರಿಸಿದರು.
ಕಾರ್ಯಕ್ರಮದಲ್ಲಿ ಸಚಿವರ ಪತ್ನಿ ವೀಣಾ ನಾಗೇಶ್, ಬಿಜೆಪಿ ತಾ. ಅಧ್ಯಕ್ಷ ಸುರೇಶ್, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ವಿ.ನಾಗರಾಜು, ಹಾಲಿ ಸದಸ್ಯ ಬಸವರಾಜು, ಹರಿಸಮುದ್ರ ಗಂಗಾಧರ್, ಗಂಗರಾಜು, ನಗರಸಭೆ ಅಧ್ಯಕ್ಷ ರಾಮಮೋಹನ್, ಗ್ರಾಮಸ್ಥರಾದ ನಂಜುಂಡಪ್ಪ, ವೀರಪ್ಪ, ಮಹೇಶ್, ಪರಮೇಶ್, ದೊಡ್ಡಯ್ಯ, ಗುತ್ತಿಗೆದಾರ ರಘುಪತಿ ಮತ್ತಿತರರಿದ್ದರು.