ವಿಧಾನಸಭೆ: ಖಾಸಗಿ ಕಾಲೇಜುಗಳಿಗೆ ಲಕ್ಷಾಂತರ ರೂ. ಡೊನೇಷನ್ ನೀಡಿ ವೈದ್ಯಕೀಯ ಸೀಟು ಗಿಟ್ಟಿಸುವ ವಿದ್ಯಾರ್ಥಿಗಳಿಗೆ ಗ್ರಾಮೀಣ ಕಡ್ಡಾಯ ಸೇವೆಯಿಂದ ರಿಯಾಯಿತಿ ನೀಡಿ, ಕೇವಲ ಸರ್ಕಾರಿ ಕೋಟಾದಡಿ ಮೆಡಿಕಲ್ ಸೀಟು ಪಡೆದವರಿಗೆ ಮಾತ್ರ ಈ ಸೇವೆ ಕಡ್ಡಾಯಗೊಳಿಸುವ ವಿಧೇಯಕವನ್ನು ಮಂಡಿಸಲಾಗಿದೆ.
ಈ ಕುರಿತಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರು, ಕರ್ನಾಟಕ ವೈದ್ಯಕೀಯ ಕೋರ್ಸ್‌ಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರ ಬೇತಿ (ತಿದ್ದುಪಡಿ) ವಿಧೇಯಕ-2017ನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆ ನೀಗಿಸಲುಕರ್ನಾಟಕದಲ್ಲಿ ವೈದ್ಯಕೀಯ ಶಿಕ್ಷಣ ಪಡೆ ಯುವ ವಿದ್ಯಾರ್ಥಿಗಳು ಕಡ್ಡಾಯವಾಗಿ ಒಂದು ವರ್ಷ ಗ್ರಾಮೀಣ ಸೇವೆ ಮಾಡಬೇಕು ಎಂದು ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ 2012ರಲ್ಲಿ ಕರ್ನಾ ಟಕ ವೈದ್ಯಕೀಯ ಕೋರ್ಸುಗಳನ್ನು ಪೂರ್ಣಗೊಳಿಸಿದ ಅಭ್ಯರ್ಥಿಗಳ ಕಡ್ಡಾಯ ಸೇವಾ ತರಬೇತಿ ಅಧಿನಿಯಮ ಪ್ರಸ್ತಾಪಿಸಿತ್ತು. ನಂತರ ಇದನ್ನು ಮತ್ತಷ್ಟು ಬಿಗಿಗೊಳಿಸಿ ಕಾಂಗ್ರೆಸ್ ಸರಕಾರ ತಿದ್ದುಪಡಿ ವಿಧೇಯಕ ಮಂಡಿಸಿ ಒಪ್ಪಿಗೆ ಪಡೆದು ಕೊಂಡಿತ್ತು.
ತಡೆಯಾಜ್ಞೆ ತೆರವು ವಿಫಲವಾಯ್ತು: ಆದರೆ, ಇದನ್ನು ಪ್ರಶ್ನಿಸಿ ಖಾಸಗಿ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದ ಅಭ್ಯರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೀಗಾಗಿ ಸರ್ಕಾರದ ಅಧಿನಿಯಮಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿತ್ತು. ತಡೆಯಾಜ್ಞೆ ತೆರವುಗೊಳಿಸಲು ಸಾಕಷ್ಟು ಪ್ರಯತ್ನ ಮಾಡಲಾಯಿತಾದರೂ ಅದು ಫಲ ನೀಡಲಿಲ್ಲ.
ಹೀಗಾಗಿ ವಿಧೇಯಕದಲ್ಲಿ ಎರಡು ಪ್ರಮುಖ ಬದಲಾವಣೆ ತರಲು ನಿರ್ಧರಿಸಿದ ಸರ್ಕಾರ ತಿದ್ದುಪಡಿ ವಿಧೇಯಕ ಮಂಡಿಸಿದೆ.
ಜತೆಗೆ, ಈ ಹಿಂದಿನ ಆದೇಶದಲ್ಲಿದ್ದ ಒಂದು ವರ್ಷ ಗ್ರಾಮೀಣ ಸೇವೆ ಮಾಡದೇ ಇದ್ದಲ್ಲಿ ಪದವಿ ಪ್ರಮಾಣಪತ್ರ ನೀಡಬಾರದು ಎಂಬ ನಿಯಮವನ್ನು ಕೈಬಿಡಲು ತಿದ್ದುಪಡಿ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ.