Advertisement

ಇತಿಹಾಸ ತಿರುಚಿಲ್ಲ ; ತಪ್ಪು ತಿದ್ದಿದ್ದೇವೆ; ರಾವಣ ಸಂಸ್ಕೃತಿ ಬಿಂಬಿಸುವ ಪಠ್ಯಕ್ಕೆ ತಿಲಾಂಜಲಿ

01:15 AM May 24, 2022 | Team Udayavani |

ಬೆಂಗಳೂರು: ದೇಶದ ಇತಿಹಾಸ, ಸಂಸ್ಕೃತಿ, ಆಚಾರ-ವಿಚಾರಗಳು, ರಾಷ್ಟ್ರೀಯತೆ, ದೇಶಕ್ಕಾಗಿ ಹೋರಾಡಿದ ನಿಜವಾದ ಹೀರೋಗಳನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿದೆ. ದೇಶದ ಇತಿಹಾಸಗಳನ್ನು ಅರ್ಧಂಬರ್ಧ ತಿಳಿಸಿದ್ದ ವಿಷಯಗಳನ್ನು ಹಾಗೂ ಬೇರೆ ಧರ್ಮಗಳನ್ನು ಹೇರುವ ಪ್ರಯತ್ನ ಮಾಡಿರುವಂತಹ ಪಠ್ಯಗಳನ್ನು ಕೈಬಿಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್‌ ಸ್ಪಷ್ಟಪಡಿಸಿದ್ದಾರೆ.

Advertisement

ಪಠ್ಯಪುಸ್ತಕ ವಿವಾದ ಕುರಿತು ಸೋಮವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು ಇತಿಹಾಸ ತಿರುಚಿಲ್ಲ, ಬದಲಿಗೆ ಕಾಂಗ್ರೆಸ್‌ನವರು ತಿರುಚಿ ದ್ದನ್ನು ಸರಿಪಡಿಸುವ ಕೆಲಸ ಮಾಡಿದ್ದೇವೆ. ಹೊಸ ತಲೆಮಾರಿನ ಮಕ್ಕಳಿಗೆ ಶಾಲೆಯಲ್ಲಿ ನಿಜವಾದ ಇತಿಹಾಸ ತಿಳಿಸುವ ಪ್ರಯತ್ನ ಮಾಡಲಾಗಿದೆ’ ಎಂದರು.

ಆರೆಸ್ಸೆಸ್‌ ಸಂಸ್ಥಾಪಕ ಕೇಶವ ಬಲಿರಾಮ ಹೆಡ್ಗೆವಾರ್ , ಚಕ್ರವರ್ತಿ ಸೂಲಿಬೆಲೆ ಅವರು ಕ್ರಾಂತಿಕಾರರ ಬಗ್ಗೆ ಬರೆದಿರುವ “ತಾಯಿ ಭಾರತಿಯ ಅಮರ ಪುತ್ರರು’ ಪಠ್ಯವನ್ನು ಸೇರ್ಪಡೆ ಮಾಡಲಾಗಿದೆ. ಪಠ್ಯದಲ್ಲಿದ್ದ ಹಿಂದೂ, ಮಾತೃಭೂಮಿ, ತಾಯಿನಾಡು ಎಂಬ ವಿಷಯಗಳನ್ನು ಕಿತ್ತುಹಾಕುವ ಪ್ರಯತ್ನವನ್ನು ಹಿಂದೆ ಮಾಡಲಾಗಿತ್ತು. ಈ ಮೂಲಕ ಜನರಿಗೆ ದೇಶದ ಬಗ್ಗೆ ವಿಶ್ವಾಸ ಬಾರದಂತೆ ಪಠ್ಯದಲ್ಲಿ ವಿಷಯಗಳನ್ನು ಸೇರಿಸಲಾಗಿತ್ತು. ಉದಾಹರಣೆಗೆ ಕಯ್ನಾರ ಕಿಂಞಣ್ಣ ರೈಗಳು ಬರೆದಿದ್ದ “ಹಾರುತಿರುವುದು ಏರುತಿರುವುದು ದೇಶದ ಬಾವುಟ’ ಎಂಬ ಪಠ್ಯ ತೆಗೆಯಲಾಗಿತ್ತು ಎಂದರು.

ರಾವಣ ಸಂಸ್ಕೃತಿ ಬೆಳೆಸಬೇಕಾ?
ದೇಶದಲ್ಲಿ ಬಿಜೆಪಿ ಸರಕಾರ ಬಂದ ಬಳಿಕ ದೇಶದಲ್ಲಿ ರಾಮ-ರಾವಣ ಸಂಸ್ಕೃತಿ ಇಲ್ಲ. ಮೊದಲಿನಿಂದಲೂ ರಾಮರಾಜ್ಯವಾಗಬೇಕು ಎಂಬ ಸಂಸ್ಕೃತಿ ಇದೆ. ರಾಮ ಆದರ್ಶಪುರುಷನೆಂದು ಮಹಾತ್ಮ ಗಾಂಧಿಯವರೇ ಹೇಳಿದ್ದರು. ಆದರೆ ರಾಮನ ಫೋಟೋಗೆ ಚಪ್ಪಲಿಯಲ್ಲಿ ಹೊಡೆದು ವಿರೋಧಿಯನ್ನಾಗಿ ಮಾಡಿ, ರಾವಣನ ಫೋಟೋಗೆ ಹಾರ ಹಾಕುವ ವಿಚಾರಗಳನ್ನು ನಮ್ಮ ಮಕ್ಕಳಿಗೆ ಓದಿಸಬೇಕಾ ಎಂದು ಪ್ರಶ್ನಿಸಿದರು.

ವೋಟ್‌ ಬ್ಯಾಂಕ್‌ಗಾಗಿ ಟಿಪ್ಪು ಬಳಕೆ
2014ರಲ್ಲಿ ಪರಿಷ್ಕರಣೆಯಾಗಿದ್ದ ಪಠ್ಯಪುಸ್ತಕವನ್ನು 2017ರಲ್ಲಿ ಹಿರಿಯ ಸಾಹಿತಿ ಪ್ರೊ| ಬರಗೂರು ರಾಮಚಂದ್ರಪ್ಪ ನೇತೃತ್ವದಲ್ಲಿ ಮತ್ತೊಮ್ಮೆ ಪರಿಷ್ಕರಿಸಲಾಗಿತ್ತು. ಆಗ ಕೈಬಿಟ್ಟಿರುವ ವಿಚಾರಗಳ ಬಗ್ಗೆ ಯಾರೊಬ್ಬರು ಪ್ರಶ್ನಿಸಲಿಲ್ಲ. ರಾಜ್ಯಕ್ಕೆ ಸಾಕಷ್ಟು ಕೊಡುಗೆ ನೀಡಿರುವ ಮೈಸೂರು ರಾಜಮನೆತನದ ಒಡೆಯರ್‌ ಬಗ್ಗೆ 5 ಪುಟಗಳ ಪಾಠವನ್ನು ಕೇವಲ 4 ಸಾಲುಗಳಿಗೆ ಇಳಿಸಲಾಗಿತ್ತು. ಜತೆಗೆ ಟಿಪ್ಪು ಪಾಠ ಹೆಚ್ಚಿಸಿದ್ದು, ಇದು ವೋಟ್‌ ಬ್ಯಾಂಕ್‌ ರಾಜಕೀಯವಲ್ಲವೇ ಎಂದು ಸಚಿವರು ಪ್ರಶ್ನಿಸಿದರು.

Advertisement

ಟಿಪ್ಪು ಹೋರಾಟದ ಬಗ್ಗೆ ಮಾತ್ರ ತಿಳಿಸಿದ್ದ ಬರಗೂರು ಸಮಿತಿ ಆತ ಕೊಡಗು, ಕಾಸರಗೋಡಿನಲ್ಲಿ ಇಸ್ಲಾಂ ಧರ್ಮಕ್ಕೆ ಮತಾಂತರಿಸುತ್ತಿದ್ದ ವಿಚಾರ ಹಾಗೂ ಮೈಸೂರು ಮಹಾರಾಜರನ್ನು ಜೈಲಿನಲ್ಲಿಟ್ಟು ಆಡಳಿತ ಮಾಡಿದ್ದನ್ನು ಮರೆಮಾಚಿತ್ತು. ನಾವು ಬರಗೂರು ಸಮಿತಿಯಲ್ಲಿ ಸೇರಿಸಿರುವ ಉತ್ತಮ ವಿಚಾರಗಳನ್ನು ಉಳಿಸಿಕೊಂಡಿದ್ದೇವೆ ಎಂದರು.

ನಾರಾಯಣ ಗುರು ಪಾಠವನ್ನು 10ನೇ ತರಗತಿಯ ಇತಿಹಾಸದಿಂದ ತೆಗೆದು ಕನ್ನಡದಲ್ಲಿ ಸೇರಿಸಲಾಗಿದೆ. ಭಗತ್‌ ಸಿಂಗ್‌ ಜತೆಗೆ ಕ್ರಾಂತಿಕಾರಿ ಹೋರಾಟಗಾರರಾಗಿದ್ದ ಚಂದ್ರಶೇಖರ್‌ ಆಜಾದ್‌, ರಾಜ್‌ಗುರು ಸುಖದೇವ್‌ ಪಠ್ಯವನ್ನು ಸೇರಿಸಲಾಗಿದೆ. ಕುವೆಂಪು ಪಠ್ಯಕ್ಕೆ ಸಂಬಂಧಿಸಿದ ವಿಚಾರಗಳನ್ನು ಅವಹೇಳನ ಮಾಡಿಲ್ಲ. ಟಿಪ್ಪು ಬಗೆಗಿನ ವೈಭವೀ ಕರಣವನ್ನು ಕೈಬಿಡಲಾಗಿದೆ.
– ಬಿ.ಸಿ. ನಾಗೇಶ್‌,
ಶಿಕ್ಷಣ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next