ಬೆಂಗಳೂರು: ರಾಜ್ಯಾದ್ಯಂತ ಕಟ್ಟಡ ಕಾರ್ಮಿಕರ 6 ವರ್ಷದೊಳಗಿನ ಮಕ್ಕಳ ಪೋಷಣೆಗೆಂದು 2020-21ರಲ್ಲಿ ಹಿಂದಿನ ಸರಕಾರ ಸ್ಥಾಪಿಸಿದ್ದ 137 ಶಿಶುಪಾಲನ ಕೇಂದ್ರಗಳನ್ನು ರದ್ದುಪಡಿಸಿ ಸರಕಾರ ಆದೇಶಿಸಿದೆ.
ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ (ನರೇಗಾ) ಕೂಲಿ ಕಾರ್ಮಿಕರ 3 ವರ್ಷದೊಳಗಿನ ಮಕ್ಕಳಿಗಾಗಿ ರಾಜ್ಯದ 4 ಸಾವಿರ ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಕೂಸಿನ ಮನೆ ನಿರ್ಮಿಸಲು ಮುಂದಾಗಿದೆ.
ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳು ನಡೆಯುವ ಸ್ಥಳದಲ್ಲಿ ಶಿಶುಪಾಲನ ಕೇಂದ್ರಗಳನ್ನು ಸ್ಥಾಪಿಸಿ, 6 ವರ್ಷದೊಳಗಿನ ಮಕ್ಕಳನ್ನು ಆರೈಕೆ ಮಾಡಲು 2020-21ನೇ ಸಾಲಿನ ಬಜೆಟ್‌ನಲ್ಲಿ ಘೋಷಿಸಲಾಗಿತ್ತು. ಇದಕ್ಕಾಗಿ ಕಾರ್ಮಿಕ ಇಲಾಖೆಯಿಂದ ಹಣ ವ್ಯಯಿಸಿ ಸಂಚಾರಿ ಶಿಶುಪಾಲನ ಕೇಂದ್ರಗಳೂ ಸೇರಿದಂತೆ ಒಟ್ಟು 137 ಶಿಶುಪಾಲನ ಕೇಂದ್ರಗಳನ್ನು ತೆರೆದಿತ್ತು. ಈ ಮೂಲಕ ಮಗುವಿನ ಆರೈಕೆಯ ಹೊರೆಯನ್ನು ಕಡಿಮೆ ಮಾಡಿ, ತಾಯಿಗೆ ಉದ್ಯೋಗದಲ್ಲಿ ತೊಡಗುವ ಅವಕಾಶ ನೀಡಲಾಗಿತ್ತು. ಆದರೀಗ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ಸಿಇಒ ನೀಡಿರುವ ವರದಿ ಆಧರಿಸಿ ಸಂಚಾರಿ ಶಿಶುಪಾಲನ ಕೇಂದ್ರಗಳೂ ಸೇರಿ 137 ಶಿಶುಪಾಲನ ಕೇಂದ್ರಗಳನ್ನೂ ರದ್ದುಪಡಿಸಿ ಕಾರ್ಮಿಕ ಇಲಾಖೆ ಆದೇಶಿಸಿದೆ.
4 ಸಾವಿರ ಕೂಸಿನ ಮನೆ
ಆರಂಭಿಸಲು ಸರಕಾರದಿಂದ ಕ್ರಮ
ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ರಾಜ್ಯದ 4 ಸಾವಿರ ಗ್ರಾಪಂ ವ್ಯಾಪ್ತಿಗಳಲ್ಲಿ 40 ಕೋಟಿ ರೂ. ವೆಚ್ಚದಲ್ಲಿ ಕೂಲಿ ಕಾರ್ಮಿಕರ ಮಕ್ಕಳ ಪಾಲನೆಗಾಗಿ ಕೂಸಿನ ಮನೆ ತೆರೆಯಲು ಘೋಷಿಸಿದ್ದ ಸರಕಾರ, ಅಗತ್ಯ ಕಟ್ಟಡ, ಇತರೆ ಮೂಲಸೌಕರ್ಯದ ವೆಚ್ಚವನ್ನು ಆಯಾ ಗ್ರಾಪಂಗಳೇ ತಮ್ಮ ಸಂಪನ್ಮೂಲದಲ್ಲಿ ಹೊಂದಿಸಬೇಕೆಂದು ಸೂಚಿಸಿದೆ. ಕಳೆದ ತಿಂಗಳಷ್ಟೇ ಕಲಬುರಗಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಸಿನ ಮನೆಯ ಲಾಂಛನ ಬಿಡುಗಡೆ ಮಾಡಿದ್ದರು.
ರಾಜ್ಯದಲ್ಲಿ ನರೇಗಾ ಕಾರ್ಡ್ ಹೊಂದಿದ ಸುಮಾರು 40 ಸಾವಿರ ಮಹಿಳಾ ಕಾರ್ಮಿಕರಿದ್ದು, ಉದ್ಯೋಗದಲ್ಲಿ ಭಾಗಿಯಾಗಲು ಅನುಕೂಲ ಆಗುವಂತೆ ಅವರ 3 ವರ್ಷದೊಳಗಿನ ಮಕ್ಕಳನ್ನು ಈ ಕೂಸಿನ ಮನೆಗಳಲ್ಲಿ ಆರೈಕೆ ಮಾಡಲಾಗುತ್ತದೆ. ಪ್ರತೀ ಕೇಂದ್ರದಲ್ಲಿ 25 ಶಿಶುವಿಗೆ ಅವಕಾಶ ನೀಡಿದ್ದು, 10 ಮಂದಿ ಆರೈಕೆದಾರರೂ ಇರಲಿದ್ದಾರೆ. ದಿಲ್ಲಿಯ ಮೊಬೈಲ್ ಕ್ರಶ್ ಸಂಸ್ಥೆಯ ಸಹಯೋಗದೊಂದಿಗೆ ಆರೈಕೆದಾರರಿಗೆ ತರಬೇತಿ ಸಹ ಕೊಡಲಾಗುತ್ತದೆ.
ಶಿಶುಪಾಲನ ಕೇಂದ್ರ ರದ್ದತಿಗೆ ಮೂರು ಕಾರಣ
-ಬಹುತೇಕ ಶಿಶುಪಾಲನ ಕೇಂದ್ರಗಳಲ್ಲಿ ಕನಿಷ್ಠ ಸಂಖ್ಯೆಯ ಮಕ್ಕಳು ಲಭ್ಯವಿಲ್ಲದೆ ಇರುವುದು.
– ಕೆಲವು ಕೇಂದ್ರಗಳಲ್ಲಿ ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳನ್ನು ಹೊರತುಪಡಿಸಿ ಬೇರೆ ಮಕ್ಕಳಿರದಿರುವುದು.
– ಶಿಶುಪಾಲನ ಕೇಂದ್ರಗಳನ್ನು ನಿರ್ವಹಣೆ ಮಾಡಲು ಆವಶ್ಯಕ ಸಂಖ್ಯೆಯ ಸೂಕ್ತ ತರಬೇತಿ ಹೊಂದಿದ ಅಧಿಕಾರಿಗಳ ಕೊರತೆ.