ಮಹಾನಗರ: ಮಂಗಳೂರು- ತಲಪಾಡಿ ಮಾರ್ಗದಲ್ಲಿ (ರಾ.ಹೆ. 66) ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಪುನರಾರಂಭಗೊಂಡಿದೆ.
ಶುಕ್ರವಾರ 10 ಬಸ್‌ಗಳು ಸಂಚಾರ ನಡೆಸಿದ್ದು, ಶನಿವಾರ ಪುನಃ 10 ಬಸ್‌ಗಳು ರಸ್ತೆಗಿಳಿಯಲಿವೆ. ಸೋಮವಾರದಿಂದ (ಸೆ. 27) ಈ ಮಾರ್ಗದಲ್ಲಿ ಒಟ್ಟು 25 ಸರಕಾರಿ ಬಸ್‌ಗಳು ಸಂಚಾರ ನಡೆಸಲಿವೆ ಎಂದು ಕೆ.ಎಸ್.ಆರ್.ಟಿ.ಸಿ. ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲೆ ಮತ್ತು ಕಾಲೇಜುಗಳ ಭೌತಿಕ ತರಗತಿಗಳು ಆರಂಭ ವಾದ್ದರಿಂದ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುತ್ತಿದ್ದು, ಮಂಗಳೂರು-ತಲಪಾಡಿ ಮಾರ್ಗದಲ್ಲಿ ಸರಕಾರಿ ಬಸ್‌ಗಳ ಸಂಚಾರ ಇಲ್ಲದಿರುವ ಕಾರಣ ಪೀಕ್ ಅವರ್‌ಗಳಲ್ಲಿ ಪ್ರಯಾಣಿಕರ ಒತ್ತಡದಿಂದಾಗಿ ಖಾಸಗಿ ಸಿಟಿ ಬಸ್‌ಗಳಲ್ಲಿ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದು “ಉದಯವಾಣಿ ಸುದಿನ’ ಸೆ. 21ರಂದು ವರದಿ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ಜಿಲ್ಲಾಡಳಿತ ಇದೀಗ ಈ ಮಾರ್ಗದಲ್ಲಿ ಸರಕಾರಿ ಬಸ್ ಸಂಚಾರವನ್ನು ಪುನರಾರಂಭಿಸಲು ಹಸುರು ನಿಶಾನೆ ನೀಡಿದೆ.
ಅದರಂತೆ ಮಂಗಳೂರು- ಕಾಸರಗೋಡು ಮಧ್ಯೆ ಕಾರ್ಯಾಚರಣೆ ನಡೆಸುವ ಸರಕಾರಿ ಬಸ್‌ಗಳು ಶುಕ್ರವಾರದಿಂದ ಮಂಗಳೂರು – ತಲಪಾಡಿ ಮಧ್ಯೆ ಸಂಚಾರ ಆರಂಭಿಸಿವೆ. ಪ್ರಸ್ತುತ 10 ನಿಮಿಷಕ್ಕೊಂದು ಬಸ್ ಓಡಾಡುತ್ತಿದ್ದು, ಸೋಮವಾರದಿಂದ 3ರಿಂದ 5 ನಿಮಿಷಕ್ಕೊಂದರಂತೆ ಬಸ್‌ಗಳು ಸಂಚರಿಸಲಿವೆ.
ಕೆ.ಎಸ್.ಆರ್.ಟಿ.ಸಿ. ಬಸ್‌ಗಳು ಲಾಲ್‌ಬಾಗ್ ತನಕ ಸಂಚರಿಸುವುದರಿಂದ ಬಂಟ್ಸ್ ಹಾಸ್ಟೆಲ್, ಪಿವಿಎಸ್ ಜಂಕ್ಷನ್, ಬಲ್ಲಾಳ್‌ಬಾಗ್, ಲಾಲ್‌ಬಾಗ್ ಭಾಗದ ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಮತ್ತು ಇತರ ಉದ್ದೇಶಗಳಿಗೆ ತೆರಳುವ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಇದುವರೆಗೆ ಈ ಭಾಗದ ಶಿಕ್ಷಣ ಸಂಸ್ಥೆಗಳಿಗೆ ಹೋಗುವ ವಿದ್ಯಾರ್ಥಿಗಳು ಜ್ಯೋತಿ ಜಂಕ್ಷನ್‌ನಲ್ಲಿ ಇಳಿದು ಬೇರೆ ಬಸ್ ಹಿಡಿದು ಪ್ರಯಾಣಿಸ ಬೇಕಾಗಿತ್ತು.
ಶಾಲೆ ಮತ್ತು ಕಾಲೇಜುಗಳಲ್ಲಿ ಭೌತಿಕ ತರಗತಿಗಳು ಆರಂಭವಾಗಿದ್ದು, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗ ತೊಡಗಿದ್ದಾರೆ. ಜತೆಗೆ ಉದ್ಯೋಗ ಮತ್ತಿತರ ಉದ್ದೇಶಗಳಿಗೆ ಬಸ್‌ನಲ್ಲಿ ತೆರಳುವ ಪ್ರಯಾಣಿಕರ ಸಂಖ್ಯೆಯೂ ಸಾಕಷ್ಟು ಪ್ರಮಾಣದಲ್ಲಿದೆ. ಹಾಗಾಗಿ ವಿದ್ಯಾರ್ಥಿಗಳ ಮತ್ತು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರವನ್ನು ಆರಂಭಿಸಲಾಗಿದೆ. ಕಾಸರಗೋಡು ಭಾಗಕ್ಕೆ ಅಂತಾರಾಜ್ಯ ಬಸ್ ಸಂಚಾರಕ್ಕೆ ಇನ್ನೂ ಅನುಮತಿ ಲಭಿಸಿಲ್ಲ.
–ದಿವಾಕರ್ ಎಚ್., ಕೆಎಸ್‌ಆರ್‌ಟಿಸಿ ಮಂಗಳೂರು ಡಿಪೊ ಮ್ಯಾನೇಜರ್