Advertisement
ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ಪ್ರತಿ ದಿನ 75 ಲಕ್ಷ ರೂ. ಆದಾಯ ನಿರೀಕ್ಷಿಸುತ್ತದೆ. ಆದರೆ ಕೋವಿಡ್-19 ಎಫೆಕ್ಟ್ ಮೊದಲೇ 60 ಲಕ್ಷ ರೂ. ಸಂಗ್ರಹಗೊಂಡು 15 ಲಕ್ಷ ರೂ. ಕೊರತೆ ಉಂಟಾಗುತ್ತಿತ್ತು. ತಿಂಗಳ ಅಂಕಿ ಅಂಶದಲ್ಲಿ ಕೆಲವು ಘಟಕ ಲಾಭದಲ್ಲಿದ್ದರೆ, ಇನ್ನು ಕೆಲವು ಘಟಕ ನಷ್ಟ ಅನುಭವಿಸುತ್ತವೆ. ಇಲ್ಲಿ ಖರ್ಚು-ವೆಚ್ಚ ಸರಿ ಸಮವಾದರೂ ಲಾಭ ಸಿಗುತ್ತಿಲ್ಲ. ಮುಖ್ಯವಾಗಿ ಗರಿಷ್ಠ ಪ್ರಮಾಣದಲ್ಲಿ ರಿಯಾಯಿತಿ ದರ ಪಾಸ್ ವಿತರಣೆ ಕೂಡ ಆದಾಯ ಸಂಗ್ರಹದ ಮೇಲೆ ಪರಿಣಾಮ ಬೀರಿದೆ ಎನ್ನುತ್ತಿದೆ ಅಂಕಿ ಅಂಶ.
ಕೋವಿಡ್-19 ಬಳಿಕ ಮೇ 19ರಿಂದ ಕೆಎಸ್‌ಆರ್‌ಟಿಸಿ ಉಪವಿಭಾಗದ ಎಲ್ಲ ಘಟಕ ವ್ಯಾಪ್ತಿಯಲ್ಲಿ ಒಟ್ಟು 50 ಬಸ್ ಓಡಾಟ ಆರಂಭಿಸಿವೆ. ಜೂ. 7ರ ವೇಳೆ 130 ಬಸ್‌ಗಳು ಓಡಾಡುತ್ತಿವೆ. ಆದಾಯ ಪ್ರಮಾಣ ಕುಸಿತ ಕಂಡು ನಷ್ಟದಲ್ಲಿ ಸಂಚರಿಸುತ್ತಿದೆ. ಉದಾಹರಣೆಗೆ ಪುತ್ತೂರು-ಮಂಗಳೂರು ನಡುವೆ ಈ ಹಿಂದೆ ಪ್ರತಿ ಕಿ.ಮೀ.ಗೆ 25 ರೂ. ಆದಾಯ ಬರುತ್ತಿದ್ದರೆ, ಈಗ 21 ರೂ.ನಷ್ಟು ಮಾತ್ರ ಸಂಗ್ರಹವಾಗುತ್ತಿದೆ. ಹಾಗೇ ಪುತ್ತೂರು-ಬೆಂಗಳೂರು ಬಸ್‌ನಲ್ಲಿ 32 ರೂ. ಇದ್ದ ಆದಾಯ ಈಗ 14 ರೂ.ನಿಂದ 20 ರೂ.ನೊಳಗಿದೆ. ಜತೆಗೆ ಈ ಹಿಂದೆ 4ರಿಂದ 8 ಟ್ರಿಪ್ ಓಡಾಡುತ್ತಿದ್ದ ಮಾರ್ಗದಲ್ಲಿ ಈಗ 2 ಟ್ರಿಪ್ ಮಾತ್ರ ಸಂಚರಿಸುತ್ತಿವೆ.
Related Articles
ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗೀಯ ವ್ಯಾಪ್ತಿಯಲ್ಲಿ 6 ತಾಲೂಕುಗಳು ಒಳಗೊಂಡಿವೆ. ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ಹಾಗೂ ಮಡಿಕೇರಿ ಘಟಕಗಳಿವೆ. ಒಟ್ಟು 2,400 ಮಂದಿ ಸಿಬಂದಿಯಿದ್ದಾರೆ. ಈ ಪೈಕಿ ಶೇ. 33ರಷ್ಟು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಜೂ. 8ರಿಂದ ಇದರ ಪ್ರಮಾಣ ಹೆಚ್ಚಾಗಲಿದೆ. ಹೊರ ಜಿಲ್ಲೆಯ ನೌಕರರು ಕರ್ತವ್ಯಕ್ಕೆ ಮರಳಿ ಬರುತ್ತಿದ್ದಾರೆ. ಆರೋಗ್ಯ ಪ್ರಮಾಣ ಪತ್ರ, ತಪಾಸಣೆ ಬಳಿಕವಷ್ಟೇ ಕರ್ತವ್ಯಕ್ಕೆ ಸೇರಿಸಲಾಗುತ್ತಿದೆ. ಈ ಬಾರಿ ಸಿಬಂದಿಗೆ ಕೋವಿಡ್-19 ಪರಿಣಾಮ ಆದಾಯ ಕೊರತೆ ಉಂಟಾಗಿ ವೇತನ ಪಾವತಿ ವಿಳಂಬವಾಗಿದೆ.
Advertisement
ಪ್ರಯಾಣಿಕರ ಸಂಖ್ಯೆ ಹೆಚ್ಚಳ ನಿರೀಕ್ಷೆಲಾಕ್ಡೌನ್ ಹಿನ್ನೆಲೆಯಲ್ಲಿ ಸೀಮಿತ ಸಂಖ್ಯೆಯಲ್ಲಿ ಮಾತ್ರ ಬಸ್ ಓಡಾಟ ನಡೆಸುತ್ತಿದೆ. ಪ್ರಯಾಣಿಕ ಸಂಖ್ಯೆ ಇಳಿಮುಖದಿಂದ ಆದಾಯದಲ್ಲಿ ಇಳಿಮುಖವಾಗಿದೆ. ಜೂ. 8ರಿಂದ ದೇವಾಲಯಗಳು ಪುನರಾರಂಭದಿಂದ ಪ್ರಯಾಣಿಕರ ಸಂಖ್ಯೆ ಹೆಚ್ಚಳಗೊಳ್ಳುವ ನಿರೀಕ್ಷೆ ಇದೆ. ಪ್ರಯಾಣಿಕರ ಸಂಖ್ಯೆ ಆಧರಿಸಿ ಬಸ್ ಓಡಾಟ ಹೆಚ್ಚಳದ ಬಗ್ಗೆ ನಿರ್ಧರಿಸಲಾಗುವುದು.
- ನಾಗೇಂದ್ರ ಕುಮಾರ್, ವಿಭಾಗೀಯ
ನಿಯಂತ್ರಣಾಧಿಕಾರಿ, ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗೀಯ ಕಚೇರಿ