Advertisement
ಜಿಲ್ಲಾ ಉಪಕೇಂದ್ರ
Related Articles
Advertisement
ಕುಂದಾಪುರದಲ್ಲಿ ಫ್ಲೈ-ಓವರ್ ಕಾಮಗಾರಿ ಪೂರ್ಣವಾದ ಬಳಿಕ ನಗರದ ಪ್ರಮುಖ ಕೇಂದ್ರ ಶಾಸ್ತ್ರಿ ಸರ್ಕಲ್‌ಗೆ ಉಡುಪಿ ಕಡೆಯಿಂದ ಬರುವ ಬಸ್ಸುಗಳು ನೇರ ಬರದೇ, ಫ್ಲೈ-ಓವರ್ ಮೂಲಕ ಸಾಗಿ, ಬಸ್ ನಿಲ್ದಾಣಕ್ಕೆ ಹೋಗಿ, ನೋಂದಣಿ ಹಾಕಿಸಿ, ತಿಂಡಿ ಸೇವನೆಗೆ ಅವಕಾಶ ಇದ್ದರೆ ಅದನ್ನೂ ಪೂರೈಸಿ, ಮುಂದಿನ ಊರಿಗೆ ಹೋಗುವ ಪ್ರಯಾಣಿಕರನ್ನು ಹತ್ತಿಸಿ ಅನಂತರವೇ ಸರ್ಕಲ್‌ಗೆ ಬರುತ್ತಾರೆ. ಇದರಿಂದಾಗಿ ಸರಕಾರಿ, ಖಾಸಗಿ ಕಚೇರಿಗಳಿಗೆ, ಕಾಲೇಜುಗಳಿಗೆ ಹೋಗುವ ನಿತ್ಯ ಪ್ರಯಾಣಿಕರಿಗೆ ಅನಗತ್ಯ ವಿಳಂಬವಾಗುತ್ತದೆ. ಬಸ್ ನಿಲ್ದಾಣದಿಂದ ಬರುವುದು ದೂರವಾಗುತ್ತದೆ. ಬದಲಿ ವಾಹನ ಅವಲಂಬಿಸಬೇಕಾಗುತ್ತದೆ. ಮೊದಲು ಹಂಗಳೂರಿನ ವಿನಾಯಕ ಥಿಯೇಟರ್ ಬಳಿ ಎಡಕ್ಕೆ ತಿರುಗಿ ಶಾಸ್ತ್ರಿ ಸರ್ಕಲ್‌ಗೆ ಬರುತ್ತಿದ್ದರು. ಇದರಿಂದ 4 ನಿಮಿಷ ವಿಳಂಬವಾಗುತ್ತಿತ್ತು. ಕುಂದಾಪುರ ನಿಲ್ದಾಣದಿಂದ ಬೇಗನೇ ಹೊರಡಬೇಕಿತ್ತು. ಈ ಸಮಯ ಈಗ ಉಡುಪಿಯಲ್ಲಿ ಹೊಸ ಬಸ್ ತಂಗುದಾಣ ಆದ ಕಾರಣ ಸರಿದೂಗುತ್ತದೆ. ಹಳೆ ನಿಲ್ದಾಣದಿಂದ ಕರಾವಳಿ ಬೈಪಾಸ್‌ವರೆಗೆ ಬರುವಾಗಿನ ಸಮಯ ಉಳಿತಾಯವಾಗುತ್ತದೆ.
ದೂರು
ಪ್ರಯಾಣಿಕರು ಪ್ರಶ್ನಿಸಿದರೆ “ಕೆಲವು’ ಬಸ್‌ನ ನಿರ್ವಾಹಕ, ಚಾಲಕರು ಉಡಾಫೆ ಮಾತಾಡುತ್ತಾರೆ. ಬೇಕಿದ್ದರೆ ಬನ್ನಿ ಅನ್ನುತ್ತಾರೆ. ನಮಗೆ ಸಮಯ ಇಲ್ಲ ಎನ್ನುತ್ತಾರೆ. ದೂರು ಕೊಡಿ ಎನ್ನುತ್ತಾರೆ. ಇದರಿಂದಾಗಿ ಉಡುಪಿ ಕಡೆಯಿಂದ ಸರಕಾರಿ ಬಸ್ ನಲ್ಲಿ ಬರುವ ಸರಕಾರಿ, ಖಾಸಗಿ ಉದ್ಯೋಗಿಗಳು, ವಿದ್ಯಾರ್ಥಿಗಳು, ನಿತ್ಯ ಪ್ರಯಾಣಿಕರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದ್ದು ಖಾಸಗಿ ಬಸ್ಸನ್ನು ದರ ಹೆಚ್ಚಿದ್ದರೂ, ಪ್ರಯಾಣದ ಸಮಯ ಹೆಚ್ಚು ತೆಗೆದುಕೊಂಡರೂ ಅವಲಂಬಿಸಿದ್ದಾರೆ. ಬಸ್ ನಿಲ್ದಾಣದಲ್ಲಿ ನೋಂದಣಿ ಮುಗಿದ ಬಳಿಕ ಹಳೆ ಟಿಕೆಟ್ ಹೊಂದಿದ ಪ್ರಯಾಣಿಕರನ್ನು ಅನಂತರವೂ ಕರೆತರುವುದು ಸಂಸ್ಥೆಯ ನಿಯಮಕ್ಕೂ ವಿರುದ್ಧ. ಹೊಸದಾಗಿ ಬಸ್ ಏರುವವರಿಗೂ ಸೀಟಿನ ಕೊರತೆಯಿಂದ ಬಸ್ಸೇರಲು ಅನುಮಾನಿಸಬೇಕಾದ ಸ್ಥಿತಿ. ಈ ಬಗ್ಗೆ ಹುಬ್ಬಳ್ಳಿ, ಹಾವೇರಿ, ಸವಣೂರ, ಕಲಬುರಗಿ, ಹಾನಗಲ್, ಯಲ್ಲಾಪುರ, ಸವದತ್ತಿ ಮೊದಲಾದ ಎಲ್ಲ ಘಟಕಗಳು, ಉಡುಪಿ, ಮಂಗಳೂರಿನ ಘಟಕಗಳಿಗೆ ಸ್ಪಷ್ಟ ಸುತ್ತೋಲೆ ಹೊರಡಿಸಿ, ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಕೆಎಸ್‌ಆರ್‌ಟಿಸಿ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪನಾ ನಿರ್ದೇಶಕರಿಗೆ ದೂರು ನೀಡಲಾಗಿತ್ತು.
ಸ್ಪಷ್ಟ ನಿರ್ದೇಶನ
ದೂರಿಗೆ ಸ್ಪಂದಿಸಿದ ನಿಗಮ ಈ ಕುರಿತು ಚಾಲಕ, ನಿರ್ವಾಹಕರಿಗೆ ಉಡುಪಿ ಕಡೆಯಿಂದ ಕುಂದಾಪುರ ಕ್ಕೆ ಬರುವ ಬಸ್ಸುಗಳು ಮೊದಲು ಶಾಸ್ತ್ರಿ ಸರ್ಕಲ್‌ಗೆ ತೆರಳಿ, ಪ್ರಯಾಣಿಕರನ್ನು ಇಳಿಸಿಯೇ ಕುಂದಾಪುರ ಬಸ್ ನಿಲ್ದಾಣಕ್ಕೆ ಹೋಗಬೇಕೆಂದು ಸ್ಪಷ್ಟ ಸೂಚನೆ ನೀಡಿದೆ. ಮಂಗಳೂರು ಹಾಗೂ ಉಡುಪಿ ಕಡೆಗಳಿಂದ ಕುಂದಾಪುರ ಕಡೆಗೆ ತೆರಳುವ ಎಲ್ಲ ಸಾರಿಗೆಗಳು ಕುಂದಾಪುರದ ಶಾಸ್ತ್ರಿ ಸರ್ಕಲ್ ಮೂಲಕ ಕಾರ್ಯಾಚರಣೆಯಾಗುವಂತೆ ಈಗಾಗಲೇ ವಿಭಾಗದ ಸಂಬಂಧಪಟ್ಟ ಎಲ್ಲ ಘಟಕ ವ್ಯವಸ್ಥಾಪರಿಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಹಾಗೂ ಈ ಬಗ್ಗೆ ಚಾಲನಾ ಸಿಬಂದಿಗೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡುವಂತೆ ತಿಳಿಸಲಾಗಿದೆ. ವಿಭಾಗದ ತನಿಖಾಧಿಕಾರಿಗಳನ್ನು ಒಂದು ದಿನ ಆ ಸ್ಥಳದಲ್ಲಿ ನಿಯೋಜಿಸಿ ಕುಂದಾಪುರ ಶಾಸ್ತ್ರಿ ಸರ್ಕಲ್ ಮೂಲಕ ಕಾರ್ಯಾಚರಣೆಯಾಗದೆ ಫ್ಲೈಓವರ್ ಮೂಲಕ ಕಾರ್ಯಾಚರಣೆಯಾಗುವ ಸಾರಿಗೆಗಳಲ್ಲಿ ಕರ್ತವ್ಯ ನಿರ್ವಹಿಸುವ ಚಾಲನಾ ಸಿಬಂದಿಗೆ ಮೆಮೋ ಜಾರಿಗೊಳಿಸಿ ಕ್ರಮಕೈಗೊಳ್ಳಲಾಗಿದೆ.
ಹೊಸ ಪ್ರವೇಶ
ಕುಂದಾಪುರದಲ್ಲಿ ಶಾಸ್ತ್ರಿ ಸರ್ಕಲ್‌ನ ಸಮೀಪವೇ ರಾಷ್ಟ್ರೀಯ ಹೆದ್ದಾರಿಯಿಂದ ಸರ್ವಿಸ್ ರಸ್ತೆಗೆ ಬರಲು ಆಡಳಿತ ಸಾರ್ವಜನಿಕರ ಮನವಿ ಮೇರೆಗೆ ಅವಕಾಶ ಮಾಡಿಕೊಟ್ಟಿದೆ. ಆದ್ದರಿಂದ ವಿನಾಯಕ ಬಳಿಯಿಂದಲೇ ಸರ್ವಿಸ್ ರಸ್ತೆಯಲ್ಲಿ ಬರಬೇಕಾದ ಅನಿವಾರ್ಯ ಇಲ್ಲ. ಹಾಗಿದ್ದರೂ “ಕೆಲವು’ ಬಸ್ಸಿನವರು ಅಲ್ಲಿಂದ ಬಂದು ಶಾಸ್ತ್ರಿ ಸರ್ಕಲ್‌ನಲ್ಲಿ ಪ್ರಯಾಣಿಕರನ್ನು ಇಳಿಸಿ ಬಸ್ ತಂಗುದಾಣಕ್ಕೆ ಹೋಗುವ ಬದಲು ನೇರ ಫ್ಲೈ-ಓವರ್‌ನಲ್ಲಿ ಹೋಗಿ ಬಸ್ ನಿಲ್ದಾಣದಿಂದ ಶಾಸ್ತ್ರಿ ಸರ್ಕಲ್‌ಗೆ ಬರುತ್ತಾರೆ.
ಚಾಲನಾ ಸಿಬಂದಿಗೆ ಸೂಚನೆ: ಮಂಗಳೂರು ಹಾಗೂ ಉಡುಪಿ ಕಡೆಗಳಿಂದ ಕುಂದಾಪುರ ಕಡೆಗೆ ತೆರಳುವ ಎಲ್ಲ ಸಾರಿಗೆ ಬಸ್‌ಗಳು ಶಾಸ್ತ್ರಿ ಸರ್ಕಲ್ ಮೂಲಕವೇ ತೆರಳುವಂತೆ ಚಾಲನಾ ಸಿಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ಸಂಬಂಧಪಟ್ಟ ಎಲ್ಲ ಘಟಕ ವ್ಯವಸ್ಥಾಪಕರಿಗೆ ಸೂಚಿಸಲಾಗಿದೆ. -ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿ ಕರಾರಸಾನಿಗಮ, ಮಂಗಳೂರು