Advertisement

ಯಕ್ಷರಂಗದ ಸಮೃದ್ಧಿಗಾಗಿ ಕೇಂದ್ರ ಸರಕಾರದ ನೆರವು ಅಗತ್ಯ

04:11 PM Jan 24, 2017 | |

ಕರ್ನಾಟಕ ಜಾನಪದ ಕಲೆಗಳಲ್ಲಿ ಅತಿ ಹೆಮ್ಮೆಯ, ಆಕರ್ಷಣೀಯ, ಶಾಸ್ತ್ರೀಯ, ಪ್ರಾಚೀನ, ನಾವೀನ್ಯವನ್ನು ಅಳವಡಿಸಿಕೊಂಡ ಕಲೆ ಯಕ್ಷಗಾನ. ಕರ್ನಾಟಕದ ಗಂಡುಕಲೆ ಎಂದು ಪ್ರಚಲಿತಕ್ಕೆ ಬಂದ ಯಕ್ಷಗಾನ ಕಲೆ ಕೇವಲ ಕರ್ನಾಟಕಕ್ಕೆ ಸೀಮಿತವಾಗಿರದೆ, ಇಡೀ ರಾಷ್ಟ್ರದ ಗಮನ ಸೆಳೆದಿದೆ. ನೃತ್ಯ (ಕುಣಿತ) ಸಂಭಾಷಣೆ (ಮಾತುಗಾರಿಕೆ), ಯಕ್ಷಗಾಯನ (ಭಾಗವತಿಕೆ)ಗಳಿಂದ ಸಮಾವೇಶಗೊಂಡ ಚೆಂಡೆ-ಮದ್ದಳೆ, ತಾಳ, ಮೃದಂಗದ ನಾದದಿಂದ ಶೃಂಗಾರಯುಕ್ತವಾಗಿ ಪ್ರೇಕ್ಷಕರ ಮನಸ್ಸನ್ನು ತಣಿಸಲು ಸಮರ್ಥವಾಗಿದೆ.

Advertisement

ಸರಳ-ಸುಂದರ ಕನ್ನಡ ಭಾಷೆಯನ್ನು ಮಾಧ್ಯಮವಾಗಿಟ್ಟುಕೊಂಡು ಆಗಾಗ್ಗೆ ಹಳೆಗನ್ನಡ ಕಾವ್ಯಭಾಷೆ ಬಳಸಿ, ಯಕ್ಷಗಾನದ ಛಂದಸ್ಸನ್ನು, ಮೆರಗನ್ನೂ ಉತ್ತುಂಗಕ್ಕೆ ಕೊಂಡೊಯ್ಯುವ ಮಹಾನ್‌ ಶ್ರೇಯಸ್ಸನ್ನು ಈ ಕಲೆ ಹೊಂದಿದೆ. ಸಾಮಾನ್ಯವಾಗಿ ನಾಟಕ, ಸಂಗೀತ, ನೃತ್ಯದಲ್ಲಿ ಅಭಿರುಚಿಯುಳ್ಳವರು ಖಂಡಿತವಾಗಿಯೂ ಯಕ್ಷಗಾನದ ಸವಿಯನ್ನು ಉಣ್ಣಲು ಉದ್ಯುಕ್ತರಾಗುವದು ಸಹಜ. ಮನೋರಂಜನೆಯ ಜತೆಗೆ ರಾಮಾಯಣ, ಮಹಾಭಾರತ, ಪುರಾಣ ಭಾಗವತಗಳ ಪುರಾಣಿಕ ಕಥಾನಕಗಳನ್ನು ಅರಿಯುವ ಯಾ ಅಭ್ಯಸಿಸುವ ನಿಟ್ಟಿನಲ್ಲಿ ಪ್ರೇಕ್ಷಕರನ್ನು ತನ್ನತ್ತ  ಸೆಳೆಯುವ ಅದ್ವಿತೀಯ ಶಕ್ತಿ ಯಕ್ಷಗಾನದಲ್ಲಿ ಅಡಗಿದೆ ಎಂದರೆ ಅತಿಶಯೋಕ್ತಿಯಾಗಲಾರದು.

ಯಕ್ಷಗಾನ ಅಂದರೆ ಯಕ್ಷರು, ಕಿನ್ನರರು, ಕಿಂಪುರುಷರು ಆಡುವ ಭಾಷೆ. ಗಾಯನ ಅಥವಾ ಭಾಗವತರ ಮುಖಾಂತರ (ಸೂತ್ರಧಾರನೆಂಬಂತೆ) ಕಥಾನಕವನ್ನು ವೀಕ್ಷಕರೆದುರು ಪ್ರಸ್ತುತಪಡಿಸುವರು. ಪದ್ಯಗಳು ಹೆಚ್ಚಾಗಿ ಹಳೆಗನ್ನಡದಲ್ಲಿ ರಚಿಸಲ್ಪಟ್ಟ ಕಾರಣ ಅಭಿನಯ ಕಲಾವಿದರು ಈ ಗಾಯನದ ಅರ್ಥವನ್ನು ಸರಳ ಶೈಲಿಯ ಕನ್ನಡ ಭಾಷೆಯಲ್ಲಿ ನೃತ್ಯಸಿಂಚನದ ಮೂಲಕ ಜನಸಾಮಾನ್ಯ ವೀಕ್ಷಕರಿಗೆ ತಿಳಿಹೇಳುವುದು ಪ್ರಚಲಿತ.

ಯಕ್ಷಗಾನದಲ್ಲಿ ಸಂಪ್ರದಾಯ, ಸಮೃದ್ಧಿ, ಗುಣವೃದ್ಧಿ, ಸಂಕ್ಷೇಪ, ರಂಗಕಲೆ ಸೇರಿದಂತೆ ಎಲ್ಲವೂ ಮುಖ್ಯ. ಯಕ್ಷಗಾನದಲ್ಲಿ ಶೃಂಗಾರ ರಸ, ಹಾಸ್ಯರಸ, ಕರುಣ ರಸ, ರೌದ್ರ ರಸ, ವೀರರಸ, ಭೀಭತ್ಸ ರಸ, ಭಯಾನಕ ರಸ, ಅದ್ಭುತ ರಸ, ಶಾಂತಿ ರಸ ಸಂಯುಕ್ತಗೊಂಡಿವೆ.

ಮುಖ್ಯವಾಗಿ ಕರ್ನಾಟಕದ ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಬಹುಪ್ರಚಲಿತಕ್ಕೆ ಬಂದ ಈ ಕಲೆ ಹಿಂದೆ ಬಯಲಾಟವಾಗಿ ಆಡುತ್ತಿದ್ದದ್ದು ಬಳಿಕ ವಿವಿಧ ರಂಗಭೂಮಿಗಳಲ್ಲಿ (ಬೆಂಗಳೂರು, ಮುಂಬಯಿ, ಮಂಗಳೂರು, ಹುಬ್ಬಳ್ಳಿ, ಪೂನಾ, ದೆಹಲಿ ಇನ್ನಿತರ…) ವಾತಾನುಕೂಲಿ ಸಭಾಂಗಣಗಳಲ್ಲಿಯೂ ಪ್ರದರ್ಶಿತಗೊಳ್ಳಲು ಸಮರ್ಥವಾದುದು ಅವಲೋಕನೀಯ. ಅದೆಷ್ಟೋ ಹಿರಿಯ-ಕಿರಿಯ ಯಕ್ಷ ಕಲಾವಿದರು ಯಕ್ಷರಂಗದಲ್ಲಿ ಸಕ್ರಿಯರಾಗಿ ತೊಡಗಿ, ಹಲವಾರು ವರ್ಷ ಈ ಕಲೆಯ ಆಶ್ರಯದಲ್ಲಿ ಮೆರೆದಿದ್ದಾರೆ. ಹವ್ಯಾಸಿ ಕಲೆಯ ಗೋಜಿರಲಿ ಅಥವಾ ಉದರ ಪೋಷಣೆಯ ಸಾಧನವೆಂದಿರಲಿ, ಯಕ್ಷಗಾನ ಕಲೆಯನ್ನು ಉಳಿಸಿ, ಬೆಳೆಸಿ ಕೀರ್ತಿಶಿಖರಕ್ಕೇರಿಸುವ 

Advertisement

ಏಕೈಕ ಹಂಬಲವನ್ನು ಮನದಟ್ಟಾಗಿರಿಸಿ ರಂಗದೇವತೆ ಶಾರದಾ ಮಾತೆಯ ಸೇವೆಗೈಯುವ ಪ್ರವೃತ್ತಿಯುಳ್ಳವರಾದರು.

ಪ್ರಾರಂಭದಲ್ಲಿ ಶೇಣಿ, ವೀರಭದ್ರ ನಾಯಕ, ಸಾಮಗ, ಅಳಿಕೆ ರಾಮಯ್ಯ ರೈ, ಕೊರಗ, ಕೊಂಡದಕುಳಿ (ರಾಮ/ಲಕ್ಷ್ಮಣ ಹೆಗಡೆ), ಕೆರೆಮನೆ ಶಿವರಾಮ ಹೆಗಡೆ, ಮಹಾಬಲ ಹೆಗಡೆ, ಶಂಭು ಹೆಗಡೆ, ಚಿಟ್ಟಾಣಿ, ಪುತ್ತೂರು ನಾರಾಯಣ ಹೆಗಡೆ, ಜಲವಳ್ಳಿ ವೆಂಕಟೇಶ ರಾವ್‌ (ಶನಿ ಪಾತ್ರ ಖ್ಯಾತಿ), ಬಳ್ಕೂರು ಕೃಷ್ಣ ಯಾಜಿ, ತೆಕ್ಕಟ್ಟೆ ಆನಂದ ಮಾಸ್ತರ್‌, ಕುಮಟಾ ಗೋವಿಂದ ನಾಯಕ (ಹನುಮಂತ ಪಾತ್ರ ಖ್ಯಾತಿ), ಮಂಟಪ ಉಪಾಧ್ಯಾಯ, ಕೊಕ್ಕಡ ಈಶ್ವರ ಭಟ್‌ ಹಾಗೂ ನಾರಾಯಣ ಭಟ್‌ (ಪಾಪಣ್ಣ ವಿಜಯ ಗುಣಸುಂದರಿ ಖ್ಯಾತಿ), ಹಾಲಾಡಿ, ಸಿದ್ಧಕಟ್ಟೆ, ಚೆನ್ನಪ್ಪ ಶೆಟ್ಟಿ ಹಾಗೂ ಇನ್ನಿತರ ಅಗ್ರ ಕಲಾವಿದರು ತಮ್ಮ ಜೀವನವನ್ನೇ  ಯಕ್ಷಗಾನ ಸಮೃದ್ಧಿಗೆ ಮುಡಿಪಾಗಿಟ್ಟುಕೊಂಡು ಯಕ್ಷ ಸಂಭ್ರಮಗೈದರು. ನೃತ್ಯ ಸಂಭಾ ಷಣೆ, ಅಭಿನಯಗಳಲ್ಲಿ  ನಾವೀನ್ಯತೆ ಪೋಷಿಸಿದರು. ಇಡಗುಂಜಿ, ಧರ್ಮಸ್ಥಳ, ಅಮೃತೇಶ್ವರಿ, ಎಡ ನೀರು, ಸಾಲಿಗ್ರಾಮ, ಮಂಗಳೂರು, ಗುಣವಂತೆ, ಪೆರ್ಡೂರು,ನಾಯಕನ  ಕಟ್ಟೆ ಹಾಗೂ ಹೊಸನಗರ ಮೇಳಗಳ ಹೆಸರಾಂತ ಕಲಾವಿದರು ಕಿರೀಟ ಧರಿಸಿ, ಗೆಜ್ಜೆ ಕಟ್ಟಿ, ಕುಣಿದು ಪ್ರಸಿದ್ಧರಾಗಿದ್ದಾರೆ. 

ಮುಮ್ಮೇಳದಲ್ಲಿ ಭಾಗವತ ಶ್ರೇಷ್ಠರಾದ ಕಾಳಿಂಗ ನಾವುಡರು, ಕಡತೋಕ ಮಂಜುನಾಥ ಭಾಗವತರು, ಧಾರೇಶ್ವರರು, ಕನ್ನಡಿಕಟ್ಟೆಯವರು ಇನ್ನಿತರರು ಅಂತೆಯೇ ಹಿಮ್ಮೇಳದಲ್ಲಿ ಯಕ್ಷ ಅಭಿನಯ ಶ್ರೇಷ್ಠರು ಶ್ರಮಿಸಿ ಹೆಸರಾಗಿದ್ದಾರೆ. ಪ್ರೇಕ್ಷಕರು ನಿರಂತರವಾಗಿ ಈ ಶೃಂಗಾರ ಕಾವ್ಯಗಳ ವಿಭಿನ್ನತೆಯನ್ನು ಮನಗಂಡು ಪ್ರೀತಿ ವಿಶ್ವಾಸಗಳನ್ನು ವ್ಯಕ್ತಪಡಿಸಿದ್ದಾರೆ.

ಮೌಲ್ಯಾಧಾರಿತ ಯಕ್ಷಗಾನ ಕಲಾವಿದರ ಶ್ರೇಯೋಭಿವೃದ್ಧಿಯನ್ನು ಮನಗಾಣುತ್ತಾ ಕರ್ನಾಟಕದಲ್ಲಿ ರಾಜ್ಯ ಸರ್ಕಾರದ ಲಾಂಛನದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಸ್ಥಾಪನೆಯಾಯಿತು. ಅಂದಿನಿಂದ ಇಂದಿನತನಕ ಅಕಾಡೆಮಿಯು ಹಲವು ಮೇಳ/ಪಂಗಡಗಳ ಆಟಗಳನ್ನು ಕರ್ನಾಟಕದಲ್ಲಿ ಅಷ್ಟೇ ಅಲ್ಲ, ಇತರ ರಾಜ್ಯಗಳಲ್ಲೂ ಪ್ರೋತ್ಸಾಹಿಸಿ, ಸುಂದರ-ರಮಣೀಯ ಕಥಾನಕಗಳುಳ್ಳ ಪ್ರಸಂಗಗಳನ್ನು ಆಡಿತೋರಿಸಲು ಅನುವು ಮಾಡಿಕೊಟ್ಟಿದೆ. ಕೆಲವೊಂದು ಬಾರಿ ನಿಜವಾದ ಸ್ಪರ್ಧೆಯನ್ನು ಸ್ಫೂರ್ತಿàಕರಿಸಲು ಜೋಡಾಟ ಪ್ರಯೋಗಿಸಲಾಗುತ್ತಿತ್ತು. ಮೇರು ಕಲಾವಿದರನ್ನು, ಹಿರಿಯ ಭಾಗವತರನ್ನು ಹಿಮ್ಮೇಳ- ಮುಮ್ಮೇಳದ ರಂಗಕರ್ಮಿಗಳನ್ನು ಹುರಿದುಂಬಿಸಿ, ಅವರನ್ನು ಆಗಾಗ್ಗೆ ಪ್ರಶಸ್ತಿ ನೀಡಿ ಗೌರವಿಸುವ ಬಗೆ ಪ್ರಚೋದನೀಯವಾದುದು. ಕಲಾವಿದರ ಶ್ರೇಯೋಭಿವೃದ್ಧಿಗಾಗಿ ಯಕ್ಷಗಾನ ಪ್ರದರ್ಶಿಸಿ ಈ ಮೂಲಕ ಒಟ್ಟುಗೂಡಿಸಿದ ಹಣದ ಮೊತ್ತವನ್ನು ಪರಿಹಾರ/ಜೀವನನಿಧಿ ವಿಧದಲ್ಲಿ ಕೊಡಮಾಡುವ ಪ್ರತೀತಿ ಶ್ಲಾಘನೀಯವಾದುದು.

ಯಕ್ಷಗಾನ ಪ್ರದರ್ಶನಗಳ  ಚಟುವಟಿಕೆಗಳನ್ನು ಕೇವಲ ರಾಜ್ಯಮಟ್ಟದ ಸೀಮಿತವಾಗಿರಿಸದೇ ರಾಷ್ಟ್ರಮಟ್ಟದಲ್ಲಿ ಕೂಡ ಪ್ರಚಲಿತಕ್ಕೆ ತರುವ ಸದುದ್ದೇಶವನ್ನು ಕೇಂದ್ರ ಕಲಾ ಅಕಾಡೆಮಿ ಹೊಂದಬೇಕೆಂಬುದು ಹಲವರ ಅಭಿಪ್ರಾಯ. ಇದಕ್ಕೆ ಕಾರಣ ಯಕ್ಷಗಾನ ಕಲೆ ಒಂದು ಮಹಾನ್‌ ಕಲೆ. ಈ ಕಲೆ ಹಾಗೂ ಕಲಾವಿದರು ರಾಷ್ಟ್ರೀಯ ಸೊತ್ತು. ಹೀಗಾದರೆ  ಈ ಹಿಂದೆ ಶ್ರಮಿಸಿ, ಬೆವರು ಸುರಿಸಿ, ಪರಲೋಕವಾಸಿಯಾಗಿರುವ ಮೇರು ಕಲಾವಿದರ ಆತ್ಮಕ್ಕೆ ಚಿರಶಾಂತಿ ಸಿಗಬಲ್ಲದು. ಹೀಗೆ ಮಾಡಿದರೆ ವೈಭವಪ್ರೇರಿತ ಪೌರಾಣಿಕ ಕಥಾನಕಗಳು ಅಜರಾಮರವಾಗಿ ಉಳಿಯಬಲ್ಲವು. ಭವಿಷ್ಯದ ಪೀಳಿಗೆಗೆ ಇದೊಂದು ಮನರಂಜನೆಯನ್ನು ನೀಡುವ ಶ್ರೇಷ್ಠ ಕಲೆಯೆಂದು ದೃಢೀಕರಿಸುವ ಉತ್ತಮ ಅವಕಾಶವನ್ನು ಕಲ್ಪಿಸಿ ಕೊಡಬೇಕಿದೆ. 

ಕುಣಿತ (ಧಿಂಗಣ), ಗಾಯನ, ಅಭಿನಯ, ಮಾತುಗಾರಿಕೆ (ಸಂಭಾಷಣೆ), ಕಾವ್ಯ, ಹಾಸ್ಯಗಳ ಸವಿನಯ ಮಿಶ್ರಣಗಳಿಂದ ಅಗ್ರಗಣ್ಯವಾದ ಈ ಕಲೆಯನ್ನು ಇತರ ಭಾಷೆಗಳಲ್ಲೂ ಬಳಸಲು ಹಲವಾರು ಜನ ಪ್ರಯತ್ನಶೀಲರಾಗಿದ್ದಾರೆ. ಹಿಂದಿ, ಮರಾಠಿ, ಕೊಂಕಣಿ, ಬೆಂಗಾಲಿ, ಸಿಂಧಿ, ತುಳು ಇನ್ನಿತರ ಭಾಷೆಗಳಲ್ಲೂ ಯಕ್ಷಗಾನ ಸ್ಪಂದನೆಯ ಹಿನ್ನೆಲೆಯಲ್ಲಿ ಕೇಂದ್ರ ಕಲಾ ಅಕಾಡೆಮಿ ವಿಶೇಷವಾಗಿ ನಿಜವಾಗಿಯೂ ಸ್ಫೂರ್ತಿಗೊಂಡು ಯಕ್ಷರಂಗವನ್ನು ದೇಶದಾದ್ಯಂತ ಹರಡುವುದರಲ್ಲಿ ಸಹಕರಿಸಬೇಕು. ಇಂತಹ  ಸನ್ನಿವೇಶದಲ್ಲಿ ಪರರಾಜ್ಯದ ಪ್ರೇಕ್ಷಕರು ಭಾಷೆಯ ವ್ಯತ್ಯಯವಿಲ್ಲದೇ ಯಕ್ಷಗಾನದಂತಹ ಮಹಾನ್‌ ಕಲೆಯ ಸವಿಯನ್ನು ಅನುಭವಿಸಿ ಸಂಪ್ರೀತಗೊಳ್ಳುವುದು ಖಂಡಿತ. ಇದರಿಂದ ನಮ್ಮ ಸಂಸ್ಕಾರ – ಸಂಸ್ಕೃತಿ ಭವಿಷ್ಯದಲ್ಲಿ ಸ್ಥಿರವಾಗಿ ಉಳಿಯುತ್ತದೆ ಎಂಬುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ.

  ಕಮಲಾಕ್ಷ ಸರಾಫ‌

Advertisement

Udayavani is now on Telegram. Click here to join our channel and stay updated with the latest news.

Next