ಬೆಂಗಳೂರು: ವಿಧಾನಮಂಡಲ ಅಧಿವೇಶನಕ್ಕೆ 12 ದಿನ ಬಾಕಿಯಿರುವಂತೆಯೇ ಆಡಳಿತಾರೂಢ ಕಾಂಗ್ರೆಸ್‌ನ ಇಬ್ಬರು ರಾಜೀನಾಮೆ ನೀಡಿದ್ದು, ಮೈತ್ರಿ ಸರ್ಕಾರಕ್ಕೆ ಅಗತ್ಯ ಸಂಖ್ಯಾಬಲ ಇಲ್ಲ ಎಂಬುದನ್ನು ಸಾಬೀತುಪಡಿಸುವ ಬಿಜೆಪಿ ಪ್ರಯತ್ನಕ್ಕೆ ಮತ್ತೆ ಚಾಲನೆ ನೀಡಿದೆಯೇ ಎಂಬ ಚರ್ಚೆ ಶುರುವಾಗಿದೆ.
ವಿಧಾನಸಭೆ ಪ್ರತಿಪಕ್ಷ ನಾಯಕರಾದ ಯಡಿಯೂರಪ್ಪ ಸೋಮವಾರ ಪತ್ರಿಕಾಗೋಷ್ಠಿ ನಡೆಸಿ, ವಿಧಾನಮಂಡಲ ಅಧಿವೇಶನ ನಡೆಯುವುದೇ ಎಂದು ಕಾದು ನೋಡೋಣ ಎಂದು ಪ್ರತಿಕ್ರಿಯಿಸಿದ ಕೆಲವೇ ಗಂಟೆಗಳಲ್ಲಿ ಇಬ್ಬರು ಕಾಂಗ್ರೆಸ್ ಶಾಸಕರು ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಅಧಿವೇಶನ ಆರಂಭವಾಗುವ ಹೊತ್ತಿಗೆ ಇನ್ನಷ್ಟು ಅತೃಪ್ತ ಆಸಕ್ತರು ರಾಜೀನಾಮೆ ನೀಡಲಿದ್ದಾರೆಂಬ ಮಾತು ದಟ್ಟವಾಗಿ ಕೇಳಿಬಂದಿದ್ದು, ಬಿಜೆಪಿ ಸೇರಿ ಕಾಂಗ್ರೆಸ್, ಜೆಡಿಎಸ್‌ನಲ್ಲೂ ರಾಜಕೀಯ ಚಟುವಟಿಕೆ ಗರಿಗೆದರಿದ್ದು, ಕುತೂಹಲ ಮೂಡಿಸಿದೆ.
ಹೈಕಮಾಂಡ್ ಮೌನ ಸಮ್ಮತಿ: ರಾಜ್ಯದಲ್ಲಿ ಅವಕಾಶ ಸಿಕ್ಕರೆ ಸರ್ಕಾರ ರಚಿಸುವ ರಾಜ್ಯ ಬಿಜೆಪಿ ನಾಯಕರ ಉತ್ಸಾಹಕ್ಕೆ ಹೈಕಮಾಂಡ್ ಇತ್ತೀಚೆಗೆ ಮೌನ ಸಮ್ಮತಿ ನೀಡಿತ್ತು. ಆದರೆ ಎಲ್ಲಿಯೂ ಪಕ್ಷ, ವರಿಷ್ಠರು ಹಾಗೂ ರಾಜ್ಯ ನಾಯಕರ ವರ್ಚಸ್ಸಿಗೆ ಧಕ್ಕೆಯಾಗದಂತೆ ಮುಂದುವರಿಯಬೇಕು. ಹಿಂದೆ ಜೆಡಿಎಸ್ ಶಾಸಕರೊಬ್ಬರನ್ನು ಸೆಳೆಯುವ ಪ್ರಯತ್ನ ನಡೆದಿದೆ ಎನ್ನಲಾದ ಆಡಿಯೋ ಪ್ರಕರಣದಿಂದಾಗಿ ಬಿಜೆಪಿ ರಾಜ್ಯ, ರಾಷ್ಟ್ರ ಮಟ್ಟದಲ್ಲೂ ಮುಜುಗರಕ್ಕೆ ಒಳಗಾಗಿತ್ತು.
ಹಾಗಾಗಿ ಎಚ್ಚರಿಕೆಯಿಂದ ಹೆಜ್ಜೆ ಇಡಬೇಕು ಎಂದು ಕಟ್ಟಪ್ಪಣೆ ಮಾಡಿದೆ ಎನ್ನಲಾಗಿದೆ. ಆ ಮೂಲಕ ಇಡೀ ಬೆಳವಣಿಗೆಯಿಂದ ಅಂತರ ಕಾಯ್ದುಕೊಳ್ಳುವ ಜಾಣ್ಮೆ ನಡೆಯನ್ನು ಬಿಜೆಪಿ ಹೈಕಮಾಂಡ್ ಕಾಯ್ದುಕೊಂಡಂತಿದೆ. ವರಿಷ್ಠರಿಂದ ಹಸಿರು ನಿಶಾನೆ ದೊರೆಯುತ್ತಿದ್ದಂತೆ ರಾಜ್ಯ ಬಿಜೆಪಿಯ ಕೆಲ ನಾಯಕರು ಈ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದರು. ಅದರ ಬೆನ್ನಲ್ಲೇ ರಾಜೀನಾಮೆ ಸರಣಿ ಶುರುವಾಗಿದೆ ಎಂಬ ಮಾತುಗಳೂ ಇವೆ.
ಇನ್ನೂ ಕೆಲವರ ರಾಜೀನಾಮೆ ಸಾಧ್ಯತೆ?: ಆಡಳಿತಾರೂಢ ಕಾಂಗ್ರೆಸ್, ಜೆಡಿಸ್‌ನ ಅತೃಪ್ತ ಶಾಸಕರ ಪೈಕಿ ಇನ್ನೂ ಕೆಲವರು ರಾಜೀನಾಮೆ ನೀಡುವ ಸಾಧ್ಯತೆ ಇದೆ. ವಿಧಾನಮಂಡಲ ಅಧಿವೇಶನ ಆರಂಭವಾಗುವವರೆಗೆ ನಿರ್ದಿಷ್ಟ ಸಂಖ್ಯೆ ಶಾಸಕರು ರಾಜೀನಾಮೆ ನೀಡುವ ಸಂಭವವಿದ್ದು, ಸಹಜವಾಗಿಯೇ ಮೈತ್ರಿ ಸರ್ಕಾರದ ಸಂಖ್ಯಾಬ ಲ ಕುಸಿತವಾಗಲಿದೆ. ಬದಲಾದ ಪರಿಸ್ಥಿತಿಗೆ ಅನುಗುಣವಾಗಿ ಬಿಜೆಪಿ ಮುಂದಿನ ರಾಜಕೀಯ ಹೆಜ್ಜೆ ಇಡಲು ಸಜ್ಜಾಗಿದೆ ಎಂದು ಮೂಲಗಳು ಹೇಳಿವೆ.
ಈ ಬಾರಿ ಕಮಲ ಪಕ್ಷ ಎಚ್ಚರಿಕೆಯ ಹೆಜ್ಜೆ ಇಡುವತ್ತ ಗಮನ ಹರಿಸಿದೆ. ಅತೃಪ್ತ ಶಾಸಕರು ರಾಜೀನಾಮೆ ನೀಡಿದರೆ ಅದು ಅವರ ವೈಯಕ್ತಿಕ ನಿಲುವು, ಅದಕ್ಕೂ ತಮಗೂ ಸಂಬಂಧವಿಲ್ಲದಂತೆ ಅಂತರ ಕಾಯ್ದುಕೊಂಡಿದೆ. ಅಲ್ಲದೇ ಸರ್ಕಾರ ಪತನಗೊಳಿಸುವುದಾಗಿ ಯಾವ ನಾಯಕರೂ ಹೇಳಿಕೆ ನೀಡದಂತೆ ಸ್ಪಷ್ಟ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.
ಮಧ್ಯಂತರ ಚುನಾವಣೆ ಭೀತಿ: ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಪಕ್ಷ ಸಂಘಟನೆಗೆ ಮುಂದಾಗಿ ಮಧ್ಯಂತರ ಚುನಾವಣೆಗೆ ಸಿದ್ಧತೆ ನಡೆಸಿವೆ ಎಂಬ ಮಾತುಗಳು ಕೇಳಿಬಂದಿದ್ದರಿಂದ ಮಧ್ಯಂತರ ಚುನಾವಣೆ ಭೀತಿಯೂ ಸೃಷ್ಟಿಸಿತ್ತು. ಆದರೆ, ಮೂರೂ ಪಕ್ಷದ ಶಾಸಕರಿಗೆ ಚುನಾವಣೆಗೆ ಹೋಗಲು ಮನಸ್ಸು ಇಲ್ಲ. ಆ ಹಿನ್ನೆಲೆಯಲ್ಲಿ ಬಿಜೆಪಿಯು ತೆರೆಮರೆಯಲ್ಲೇ ಕಾರ್ಯತಂತ್ರ ಆರಂಭಿಸಿದೆ ಎಂದು ಮೂಲಗಳು ಹೇಳಿವೆ.
* ಎಂ. ಕೀರ್ತಿಪ್ರಸಾದ್