Advertisement

ಈ ವರ್ಷವೂ ಪ್ರವಾಹ ಆತಂಕ?: 19 ಜಿಲ್ಲೆಗಳ 1981 ಹಳ್ಳಿಗಳ ಪಟ್ಟಿ ಸಿದ್ಧ

02:57 AM Jul 26, 2020 | Hari Prasad |

ಬೆಂಗಳೂರು: ರಾಜ್ಯದಲ್ಲಿ ಈ ವರ್ಷವೂ ಪ್ರವಾಹದ ಅಪಾಯ ಇರುವ ಹತ್ತೊಂಬತ್ತು ಜಿಲ್ಲೆಗಳ ಸುಮಾರು 1,981 ಹಳ್ಳಿಗಳನ್ನು ಪಟ್ಟಿ ಮಾಡಲಾಗಿದ್ದು, ತೊಂದರೆಗೀಡಾಗಬಹುದಾದ 51.81 ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಸರಕಾರ ಮುಂದಾಗಿದೆ.

Advertisement

ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಯಾಗುತ್ತಿದ್ದು, ಸಂಭವನೀಯ ಪ್ರವಾಹ ಪರಿಸ್ಥಿತಿ ಎದುರಿಸಲು ಸರಕಾರ ಸಿದ್ಧವಾಗಿದ್ದು, ಜಿಲ್ಲಾಡಳಿತಗಳಿಗೆ ಸೂಚನೆ ನೀಡಲಾಗಿದೆ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ತಿಳಿಸಿದ್ದಾರೆ.

ಸಾಂತ್ವನ ಕೇಂದ್ರ
ವಿಧಾನಸೌಧದಲ್ಲಿ ಶನಿವಾರ ಕಳೆದ ವರ್ಷ ಪ್ರವಾಹದಿಂದ ಸಂಕಷ್ಟ ಎದುರಿಸಿದ್ದ 19 ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜತೆ ವೀಡಿಯೋ ಸಂವಾದ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳಾಂತರಿಸಲಿರುವ ಜನರಿಗೆ ತಾತ್ಕಾಲಿಕ ವಸತಿ, ಊಟೋಪಹಾರಕ್ಕಾಗಿ 1,747 ಸಾಂತ್ವನ ಕೇಂದ್ರಗಳನ್ನು ತೆರೆಯಲು ನಿರ್ಧರಿಸಲಾಗಿದೆ. ಶಾಲೆ, ಸಮುದಾಯ ಭವನ ಹಾಗೂ ಅಂಗನವಾಡಿ ಕೇಂದ್ರಗಳನ್ನು ಇದಕ್ಕಾಗಿ ಬಳಸಿಕೊಳ್ಳಲಾಗುವುದು ಎಂದರು.
ಇದಕ್ಕಾಗಿ ಗ್ರಾಮ ಪಂಚಾಯತ್‌ ಮಟ್ಟದಲ್ಲಿ ನೋಡಲ್‌ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದು ತಿಳಿಸಿದರು.

ರೆಡ್‌ ಅಲರ್ಟ್‌
ಪೂರ್ವ ಸಮೀಕ್ಷೆ ಹಾಗೂ ಅಧ್ಯಯನ ವರದಿಯಂತೆ ಈ ಬಾರಿ ಭೂಕುಸಿತದ ಪ್ರದೇಶಗಳನ್ನು ಗುರುತಿಸಿ ರೆಡ್‌ ಅಲರ್ಟ್‌ ನೀಡಲಾಗಿದೆ. ಕೊಡಗು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಭಾಗಶಃ ಹಾಸನ ಜಿಲ್ಲೆಯಲ್ಲಿ ಭೂಕುಸಿತ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಸಚಿವರು ಹೇಳಿದರು.

ಕೆಲವೆಡೆ ಮಳೆ ಕೊರತೆ
ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ಕೊಡಗು, ದಕ್ಷಿಣ ಕನ್ನಡ, ಶಿವಮೊಗ್ಗ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆ ಕೊರತೆಯಾಗಲಿದ್ದು, ಉಳಿದ ಜಿಲ್ಲೆಗಳಲ್ಲಿ ಸಾಮಾನ್ಯ ಮಳೆಯಾಗಲಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next