Advertisement

ಪಾಲಿಕೆ ಹತ್ತು ಪಾಲಾಗಿಸಲು ಸಮ್ಮತಿಸಿದ ಸರ್ಕಾರ

11:23 AM Jul 16, 2017 | |

ಬೆಂಗಳೂರು: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿನ ಎಂಟು ವಲಯಗಳನ್ನು 10 ವಲಯಗಳಾಗಿ ವಿಭಜಿಸುವ ಪ್ರಸ್ತಾವಕ್ಕೆ ಸಮ್ಮತಿಸಿರುವ ರಾಜ್ಯ ಸರ್ಕಾರ, ಈ ಕುರಿತು ಶನಿವಾರ ಆದೇಶಿಸಿದೆ.

Advertisement

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ವಿಸ್ತಾರವಾಗಿ ಬೆಳೆದಿರುವ ಕಾರಣ, ಪಾಲಿಕೆ ಕೆಲಸ ಕಾರ್ಯ ವ್ಯಾಪ್ತಿಯೂ ವಿಶಾಲವಾಗಿದೆ. ಹೀಗಾಗಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ನಿಟ್ಟಿನಲ್ಲಿ ಎಂಟು ವಲಯಗಳನ್ನು ಹತ್ತುಕ್ಕೆ ಹೆಚ್ಚಿಸಲು ಮತ್ತು ಸರಹದ್ದು ಪುನರ್‌ ವಿಂಗಡಿಸು ಸಂಬಂಧ ಶನಿವಾರ ಅಧಿಸೂಚನೆ ಹೊರಡಿಸಿದೆ.

ಪ್ರಸ್ತುತ ಇರುವ ವಲಯಗಳಲ್ಲಿ ಅಸಮಾನತೆಯಿರುವುದರಿಂದ ಅದು ಆಡಳಿತದ ಮೇಲೆ ಪರಿಣಾಮ ಬೀರುತ್ತಿದೆ. ಹಾಗಾಗಿ ವಲಯಗಳನ್ನು ಪುನರ್‌ ವಿಂಗಡಣೆ ಮಾಡುವ ಕುರಿತು 2015ರ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಬಿಬಿಎಂಪಿ ಪುನಾರಚನಾ ಸಮಿತಿ ಪ್ರಸ್ತಾವನೆ ಸಲ್ಲಿಸಿತ್ತು. 10 ವಲಯಗಳಿಗೆ 198 ವಾರ್ಡ್‌ಗಳನ್ನು ಸಮಾನವಾಗಿ ಹಂಚುವ ಮೂಲಕ ವಲಯಗಳ ಪುನಾರಚನೆ ಮಾಡುವಂತೆ ಮುಖ್ಯಮಂತ್ರಿಗಳು ಅಧಿಕಾರಿಗಳಿಗೆ ಸೂಚಿಸಿದ್ದರು. 

ಅದರಂತೆ ಹೆಚ್ಚುವರಿ ವಲಯಗಳ ರಚನೆಗೆ ತೀರ್ಮಾನ ಕೈಗೊಂಡು ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ ಪಟ್ಟಿಯಲ್ಲಿ ಸಾಕಷ್ಟು ಲೋಪಗಳಿದ್ದ ಕಾರಣ ಮರುಪರಿಶೀಲನೆಗೆ ಸರ್ಕಾರ ಮುಂದಾಗಿತ್ತು. ಇದೀಗ ಪಟ್ಟಿಯನ್ನು ಅಂತಿಮಗೊಳಿಸಿದ್ದು, 8 ವಲಯಗಳನ್ನು 10 ವಲಯಗಳನ್ನಾಗಿ ಮರುವಿಂಗಡಿಸುವ ಆದೇಶಿಸಿದೆ. 

ವಲಯ ಪುನಾರಚನೆಗೆ ಸಂಬಂಧಿಸಿದಂತೆ ಬಿಬಿಎಂಪಿ ಪುನಾರಚನಾ ತಜ್ಞರ ಸಮಿತಿ ನೀಡಿದ್ದ ವರದಿಯಲ್ಲಿ, ವಲಯವಷ್ಟೇ ಅಲ್ಲದೆ ಜನಸಂಖ್ಯೆ, ಆದಾಯದಲ್ಲಿನ ಅಸಮತೋಲನ ಗಮನದಲ್ಲಿಟ್ಟುಕೊಂಡು ವಾರ್ಡ್‌ಗಳನ್ನು ಪುನಾರಚಿಸಬೇಕು ಎಂದು ಸೂಚಿಸಿತ್ತು. ಹಾಗೇ, ಈಗಿರುವ ಬಿಬಿಎಂಪಿಯನ್ನು 5 ಭಾಗವಾಗಿ ಮಾಡಬೇಕು ಎಂದು ತಿಳಿಸಿ, ಪ್ರತಿ ಪಾಲಿಕೆಗೂ ಎರಡು ವಲಯಗಳಂತೆ 10 ವಲಯಗಳನ್ನು ರಚಿಸಬೇಕು ಎಂದು ತಿಳಿಸಲಾಗಿತ್ತು.

Advertisement

ಪಾಲಿಕೆಯಲ್ಲಿ 1004 ಹೊಸ ಹುದ್ದೆಗಳ ಸೃಷ್ಟಿ
ಇದೇ ವೇಳೆ ಹೊಸ ವಲಯಗಳಿಗೆ ಅಗತ್ಯವಿರುವ ಅಧಿಕಾರಿಗಳ ನೇಮಕಕ್ಕೆ ಸರ್ಕಾರ ತೀರ್ಮಾನಿಸಿದ್ದು, ಸರ್ಕಾರದ ಆದೇಶದಂತೆ ಈ ವಲಯಗಳಿಗೆ ಸರ್ಕಾರದಿಂದಲೇ ಉನ್ನತ ಅಧಿಕಾರಿಗಳನ್ನು ನೇಮಿಸುವುದ ಮತ್ತು ಪಾಲಿಕೆಯಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ಮುಂಬಡ್ತಿ ನೀಡಲು ತೀರ್ಮಾನಿಸಲಾಗಿದೆ. ಜತೆಗೆ ನೇರ ನೇಮಕಾತಿ ಮೂಲಕ ಹೊಸದಾಗಿ ಅಧಿಕಾರಿಗಳನ್ನು ನೇಮಿಸಲು ಬಿಬಿಎಂಪಿಗೆ ಸೂಚನೆ ನೀಡಿದ್ದು, ಇದರಿಂದ 1,004 ಹೊಸ ಹುದ್ದೆಗಳು ಸೃಷ್ಟಿಯಾಗಲಿವೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಹತ್ತು ವಲಯಗಳು!: ಯಲಹಂಕ, ದಾಸರಹಳ್ಳಿ, ಸರ್ವಜ್ಞನಗರ, ಮಹದೇವಪುರ, ಬೊಮ್ಮನಹಳ್ಳಿ, ರಾಜರಾಜೇಶ್ವರಿ ನಗರ, ಜಯನಗರ, ಮಲ್ಲೇಶ್ವರ, ಗಾಂಧಿನಗರ, ವಿಜಯನಗರ.

Advertisement

Udayavani is now on Telegram. Click here to join our channel and stay updated with the latest news.

Next