Advertisement

ಮಳಿಗೆ ದುರಸ್ತಿಗೊಳಿಸಿ ವ್ಯಾಪಾರಕ್ಕೆ ಅನುಕೂಲ ಕಲ್ಪಿಸಿ

03:52 PM Nov 14, 2020 | Suhan S |

ರೋಣ: ಪಟ್ಟಣದ 23 ವಾರ್ಡ್‌ಗಳಲ್ಲಿ ಸಮರ್ಪಕವಾಗಿ ನೀರಿನ ವ್ಯವಸ್ಥೆ ಕಲ್ಪಿಸಬೇಕು.ಪುರಸಭೆಯಿಂದ ನಿರ್ಮಿಸಲಾದ ಮಳಿಗೆಗಳನ್ನು ದುರಸ್ತಿಗೊಳಿಸಿ, ಅಲ್ಲಿ ವ್ಯಾಪಾರ ವಹಿವಾಟು ನಡೆಸಲು ಸಾರ್ವಜನಿಕರಿಗೆಅನುಕೂಲ ಮಾಡಿಕೊಡಬೇಕು.ಇತರೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಅಗತ್ಯ ಕ್ರಮಕೈಗೊಳ್ಳಬೇಕೆಂದು ಪುರಸಭೆ ಉಪಾಧ್ಯಕ್ಷ ಮಿಥುನ್‌ ಜಿ.ಪಾಟೀಲ ಮುಖ್ಯಾಧಿಕಾರಿ ಎಂ.ಎ.ನೂರುಲ್ಲಾಖಾನ್‌ ಅವರಿಗೆ ಸೂಚನೆ ನೀಡಿದರು.

Advertisement

ಶುಕ್ರವಾರ ಪಟ್ಟಣದ ಪುರಸಭೆ ಸಭಾಭವನದಲ್ಲಿ ನಡೆದ ಆಡಳಿತ ಮಂಡಳಿ ಪ್ರಥಮ ಸಭೆಯಲ್ಲಿ ಮಾತನಾಡಿದರು. ಪಟ್ಟಣದ 23 ವಾರ್ಡ್‌ಗಳಲ್ಲಿ ಸದ್ಯಇರುವ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಮುಖ್ಯಾಧಿಕಾರಿಗಳು ತುರ್ತು ಕ್ರಮ ಕೈಗೊಂಡು ಜನರಿಗೆ ಯಾವುದೇ ರೀತಿಯ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಅಲ್ಲದೇ, ಬೇಸಿಗೆ ಸಂದರ್ಭದಲ್ಲಿ ಪಟ್ಟಣದಲ್ಲಿ ನೀರಿನ ಸಮಸ್ಯೆ ತಲೆದೂರಲಿದ್ದು, ಜನತೆಗೆ ನೀರಿನ ಸಮಸ್ಯೆಯಾಗದಂತೆ ಅಗತ್ಯ ಕ್ರಮವನ್ನುಈಗಿನಿಂದಲೇ ಕೈಗೊಂಡರೆ ನೀರಿನ ಸಮಸ್ಯೆ ನಿವಾರಣೆ ಮಾಡಲು ಸಾಧ್ಯವಾಗುತ್ತದೆ. ಈ ದಿಸೆಯಲ್ಲಿ ಮುಖ್ಯಾಧಿಕಾರಿಗಳು ಶೀಘ್ರ ಕ್ರಮ ಕೈಗೊಳ್ಳಬೇಕು ಎಂದರು.

ಮುಖ್ಯಾಧಿಕಾರಿ ಎಂ.ಎ.ನೂರುಲ್ಲಾಖಾನ ಮಾತನಾಡಿ,ಪಟ್ಟಣದಲ್ಲಿ ಲಭ್ಯವಿರುವ ಕೊಳವೆ ಬಾವಿಗಳ ಮೂಲದಿಂದ ನೀರನ್ನು ಸಂಗ್ರಹಿಸಿ, ಪಟ್ಟಣದ ಎಲ್ಲ ವಾರ್ಡ್ ಗಳಿಗೆ ಸಮರ್ಪಕ ನೀರು ಸರಬರಾಜು ಮಾಡುವುದು, ರಿಪೇರಿ ಇರುವ ಪೈಪ್‌ಲೈನ್‌ ಗಳನ್ನು ಸರಿಪಡಿಸಿ ನೀರು ಪೋಲಾಗುವುದನ್ನು ತಡೆದು ನೀರಿನ ಸದ್ಬಳಕೆ ಮಾಡುವಲ್ಲಿ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಹೇಳಿದರು.

ಸದಸ್ಯ ಗದಿಗೆಪ್ಪ ಕಿರೆಸೂರ ಮಾತನಾಡಿ, ಪಟ್ಟಣದ ಕೆರೆಯ ಮೇಲ್ಭಾಗದಲ್ಲಿ ನಿರ್ಮಿಸಲಾದ ಪುರಸಭೆ ಮಳಿಗೆಗಳನ್ನು ಬಾಡಿಗೆ ಪಡೆದುಕೊಳ್ಳಲು ವ್ಯಾಪಾರಸ್ಥರು ಹಣ ಕಟ್ಟಿ ಹಲವು ತಿಂಗಳು ಕಳೆಯುತ್ತಾ ಬಂದಿದ್ದು, ಇದುವರೆಗೂ ಅವರಿಗೆ ಮಳಿಗೆಗಳ ಹಂಚಿಕೆ ಮಾಡಿಲ್ಲ. ಅಲ್ಲದೇ, ಅವುಗಳ ಸಮರ್ಪಕ ನಿರ್ವಹಣೆ ಇಲ್ಲ. ಪಟ್ಟಣದ ಕೆರೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ಹೊಸ ಸಂತೆ ಬಜಾರ ಮಳಿಗೆಗಳು ಕಾಲಿ ಬಿದ್ದಿವೆ.ಕೂಡಲೇ ಈ ಕುರಿತು ಮುಖ್ಯಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳುವ ಮೂಲಕ ವ್ಯಾಪಾರಸ್ಥರಿಗೆ ಮಳಿಗೆಗಳನ್ನು ಹಂಚಿಕೆ ಮಾಡಬೇಕೆಂದು ಆಗ್ರಹಿಸಿದರು.

ಪಟ್ಟಣದ ಕೆರೆ ಅಭಿವೃದ್ಧಿಗಾಗಿ 2 ಕೋಟಿಹಾಗೂ ಅದಕ್ಕೆ ನೀರು ತುಂಬಿಸಲು 2 ಕೋಟಿ ರೂ. ಇದ್ದು, ಈಗಾಗಲೇ ಕೆರೆ ಅಭಿವೃದ್ಧಿ ಕಾರ್ಯ ನಡೆಯುತ್ತಿದೆ. ಕೆರೆ ಸುತ್ತಲು ತಂತಿ ಬೇಲಿ ಹಾಕಿಸಿ ಸುಂದರ ಉದ್ಯಾನ ನಿರ್ಮಿಸುವ ಯೋಜನೆ ರೂಪಿಸಲಾಗಿದೆ ಎಂದರು.

Advertisement

ಸದಸ್ಯ ಸಂತೋಷ ಕಡಿವಾಲ ಮಾತನಾಡಿ, ಪಟ್ಟಣದ ಶಿವಾನಂದ ನಗರದಲ್ಲಿ ಪೈಪ್‌ ಲೈನ್‌ ವ್ಯವಸ್ಥೆ ಸಮರ್ಪಕವಾಗಿಲ್ಲ. ಅಲ್ಲದೇ, ಅಲ್ಲಿ ನೀರಿನ ವಾಲ್‌ ಸಮಸ್ಯೆ ಇದೆ. ಜನರಿಗೆ ನೀರಿನ ತೊಂದರೆ ಉಂಟಾಗುತ್ತಿದೆ. ಅವುಗಳನ್ನು ಸರಿಪಡಿಸಬೇಕು. ಸ್ವತ್ಛ ಭಾರತ ಅಭಿಯಾನದಲ್ಲಿ ಜನರು ಶೌಚಾಲಯ ನಿರ್ಮಿಸಿಕೊಂಡಿದ್ದು, ಅವರಿಗೆ ಅದರ ಹಣ ಜಮೆಯಾಗಿಲ್ಲ. ಕೆಲವರಿಗೆ ಒಂದೆರಡು ಕಂತುಗಳು ಮಾತ್ರ ಜಮೆಯಾಗಿದ್ದು, ಶೌಚಾಲಯ ನಿರ್ಮಾಣ ಮಾಡಿಕೊಂಡವರಿಗೆ ಹಣ ಬಿಡುಗಡೆ ಮಾಡಬೇಕು ಎಂದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ನೂರುಲ್ಲಾಖಾನ್‌, ಈಗಾಗಲೇ 5000 ಕುಟುಂಬಗಳಿಗೆ ಕಸದ ಡಬ್ಬಗಳನ್ನು ಹಂಚಲು ಯೋಜನೆ ರೂಪಿಸಲಾಗಿದೆ. ದಿಪಾವಳಿಯ ಮರು ದಿನವೇ ಹಂಚಿಕೆ ಮಾಡಲು ಕ್ರಮ ಕೈಗೊಳ್ಳುತ್ತೇನೆ. ರಸ್ತೆ ವಿಭಜಕಗಳಲ್ಲಿನ ಬೀದಿ ದೀಪಗಳನ್ನು ಸರಿಪಡಿಸಲು ಮುಂದಾಗುತ್ತೇನೆ. ಎಲ್ಲ ಸದಸ್ಯರು ತಮ್ಮ ವಾರ್ಡ್‌ಗಳಲ್ಲಿರುವ ಸಮಸ್ಯೆ ಹೇಳಿಕೊಳ್ಳಿ. ಎಲ್ಲರೂ ಒಗ್ಗಟ್ಟಿನಿಂದ ಸೇರಿ ಕೆಲಸ ಮಾಡಿದರೆ ಪಟ್ಟಣವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಬಹುದು. ಇದಕ್ಕೆ ತಮ್ಮೆಲ್ಲರ ಸಹಕಾರ ಅಗತ್ಯ ಎಂದರು.

ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷೆ ವಿದ್ಯಾ ದೊಡ್ಡಮನಿ ಸೇರಿದಂತೆ ಎಲ್ಲ ಸದಸ್ಯರು,  ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next