Advertisement

ಯೋಗಕ್ಕಿದೆ ಆರೋಗ್ಯಕರ ಸಮಾಜ ಕಟ್ಟುವ ಶಕ್ತಿ: ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌

08:53 PM Jun 21, 2023 | Team Udayavani |

ಬೆಂಗಳೂರು: ಜನರನ್ನು ದೇಶ-ಭಾಷೆ ಮೀರಿ ಸಂಪರ್ಕಿಸುವ ಮತ್ತು ಆರೋಗ್ಯಕರ ಸಮಾಜ ಕಟ್ಟುವ ಶಕ್ತಿ ಯೋಗಕ್ಕೆ ಇದೆ ಎಂದು ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಹೇಳಿದರು.

Advertisement

9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ವಿಧಾನ ಸೌಧದ ಮುಂದೆ ಬುಧವಾರ ಆಯುಷ್‌ ಇಲಾಖೆ ಆಯೋಜಿಸಿದ್ದ “ಯೋಗ ವಸುದೈವ ಕುಟುಂಬ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ದೇಹ, ಮನಸ್ಸು ಮತ್ತು ಭಾವನೆಗಳನ್ನು ಸಮತೋಲನಗೊಳಿಸಲು ಯೋಗ ಉತ್ತಮ ಮಾರ್ಗವಾಗಿದೆ ಎಂದರು.

ಇಂದು ಪ್ರಪಂಚಾದ್ಯಂತ ಜನರು ತಮ್ಮ ಜೀವನದಲ್ಲಿ ಯೋಗವನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಯೋಗಾಸನ ಅಭ್ಯಾಸದ ಮೂಲಕ, ನಾವು ಆರೋಗ್ಯಕರ ಮನಸ್ಸು ಮತ್ತು ದೇಹ ಪಡೆಯಬಹುದು. 2014 ರಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಯೋಗವನ್ನು ಅಳವಡಿಸಿಕೊಳ್ಳುವಂತೆ ವಿಶ್ವದ ಎಲ್ಲಾ ದೇಶಗಳಿಗೆ ಕರೆ ನೀಡಿದರು. ಪ್ರತಿ ವರ್ಷ ಜೂನ್‌ 21 ರಂದು ಯೋಗ ದಿನವನ್ನು 172 ಕ್ಕೂ ಹೆಚ್ಚು ದೇಶಗಳು ಆಚರಿಸುತ್ತಿವೆ. ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನದ ಥೀಮ್‌ “ವಸುಧೈವ ಕುಟುಂಬಕ್ಕಾಗಿ ಯೋಗ’. ಇದು ನಮ್ಮ ಭಾತೃತ್ವ ಮತ್ತು ವಿಶ್ವ ಸಹೋದರತ್ವದ ನಡವಳಿಕೆಯನ್ನು ಪ್ರತಿಬಿಂಬಿಸುತ್ತದೆ ಎಂದು ಹೇಳಿದರು.

ನಮ್ಮ ಸಂಸ್ಕೃತಿಯಲ್ಲಿ ಯೋಗಕ್ಕೆ ತನ್ನದೇ ಆದ ಹೆಸರಿದೆ. ಯೋಗದ ಮಹತ್ವ ಕುರಿತು ನಮ್ಮ ಪ್ರಾಚೀನ ಗ್ರಂಥಗಳಲ್ಲಿ ಉಲ್ಲೇಖವಿದೆ. ಯೋಗಭ್ಯಾಸದಿಂದ ಭೌತಿಕ ಹಾಗೂ ಮಾನಸಿಕ ಆರೋಗ್ಯ ಸುಧಾರಣೆ ಆಗುತ್ತದೆ. ಪ್ರಧಾನಿ ನರೇಂದ್ರ ಮೋದಿ ಅವರು ಯೋಗ ದಿನದ ಆಚರಣೆ ಬಗ್ಗೆ ವಿಶ್ವಸಂಸ್ಥೆ ಬಳಿ ಪ್ರಸ್ತಾಪ ಮಾಡಿದ್ದು, ಅದಕ್ಕೆ ಒಪ್ಪಿ ಅಂತಾರಾಷ್ಟ್ರೀಯ ಯೋಗ ದಿನ ಆಚರಿಸಲಾಗುತ್ತಿದೆ ಎಂದು ಹೇಳಿದರು.

ಯೋಗಭ್ಯಾಸಕ್ಕೆ ಪ್ರೋತ್ಸಾಹ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್‌ ಗುಂಡೂರಾವ್‌ ಮಾತನಾಡಿ, ರಾಜ್ಯ ಸರ್ಕಾರ ಯೋಗಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಲಿದ್ದು, ಶಾಲೆಗಳಿಂದಲೇ ಎಲ್ಲಾ ಕಡೆ ಯೋಗಭ್ಯಾಸಕ್ಕೆ ಪ್ರೋತ್ಸಾಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು. ವಿಶ್ವಕ್ಕೆ ಭಾರತದ ಕೊಡುಗೆಯಾದ ಯೋಗ ಸಮಾಜದ ಆರೋಗ್ಯಕ್ಕೆ ಅತಿ ಮುಖ್ಯವಾದದ್ದು. ಆರೋಗ್ಯ ವೃದ್ಧಿಗಾಗಿ ಯೋಗಕ್ಕೆ ರಾಜ್ಯ ಸರ್ಕಾರ ಹೆಚ್ಚಿನ ಪೋ›ತ್ಸಾಹ ನೀಡಲಿದೆ ಎಂದು ಆರೋಗ್ಯ ಸಚಿವರು ಹೇಳಿದರು.

Advertisement

ಯೋಗ ನಮ್ಮ ದೇಶದ ಸಂಸ್ಕೃತಿ, ಸಾವಿರಾರು ವರ್ಷಗಳ ಹಿಂದೆ ನಮ್ಮ ಪೂರ್ವಜರು ಇಡೀ ವಿಶ್ವಕ್ಕೆ ಯೋಗವನ್ನ ಕೊಡುಗೆಯಾಗಿ ನೀಡಿ ಹೋಗಿ¨ªಾರೆ. ಯೋಗ ದಿನನಿತ್ಯದ ನಮ್ಮ ಮಾನಸಿಕ ಆರೋಗ್ಯಕ್ಕೂ ಬಹಳ ಮುಖ್ಯ. ಯೋಗದಿಂದ ಮಾನವನಲ್ಲಿ ಚುರುಕು, ಉತ್ಸಾಹ, ದೈಹಿಕ ಹಾಗೂ ಮಾನಸಿಕ ಶುದ್ಧೀಕರಣ ಸಿಗಲಿದೆ. ಯೋಗ ಮಾಡುವವರ ಆರೋಗ್ಯ ಚೆನ್ನಾಗಿರಲಿದೆ ಎಂದು ದಿನೇಶ್‌ ಗುಂಡೂರಾವ್‌ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಧಾನಸಭೆ ಸಭಾಧ್ಯಕ್ಷರಾದ ಯು.ಟಿ.ಖಾದರ್‌, ಶಾಸಕ ರಿಜ್ವಾನ್‌ ಅರ್ಷದ್‌, ಮೇಲ್ಮನೆ ಸದಸ್ಯ ಟಿ.ಎ. ಶರವಣ, ಕ್ರೀಡಾಪಟುಗಳಾದ ವೆಂಕಟೇಶ್‌ ಪ್ರಸಾದ್‌, ಅಂಜು ಬಿ. ಜಾರ್ಜ್‌, ನಟಿ ಭಾವನಾ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ರಾಜ್ಯಪಾಲರು, ಗಣ್ಯರು ಮತ್ತು ನುರಿತ ಯೋಗಪಟುಗಳು ಯೋಗ ಪ್ರದರ್ಶನ ನೀಡಿದರು.

ರಾಜ್ಯದಲ್ಲಿ ಈಗಾಗಲೇ 376 ಆಯುಷ್‌ ಆರೋಗ್ಯ ಕ್ಷೇಮ ಕೇಂದ್ರಗಳು ಹಾಗೂ ಆರೋಗ್ಯ ಇಲಾಖೆಯಿಂದ 7,270 ಆರೋಗ್ಯ ಕ್ಷೇಮ ಕೇಂದ್ರಗಳಲ್ಲಿ ಪ್ರತಿನಿತ್ಯ ಒಂದು ಗಂಟೆ ಉಚಿತವಾಗಿ ನುರಿತ ಯೋಗ ಶಿಕ್ಷಕರಿಂದ ಯೋಗ ತರಗತಿಗಳು ನಡೆಯುತ್ತಿದೆ. ಜನರು ಇದರ ಪ್ರಯೋಜನ ಪಡೆದುಕೊಳ್ಳಬೇಕು.
-ದಿನೇಶ್‌ ಗುಂಡೂರಾವ್‌, ಸಚಿವರು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ

Advertisement

Udayavani is now on Telegram. Click here to join our channel and stay updated with the latest news.

Next