Advertisement

ಆಡಳಿತ, ಸಾಲಗಾರರ ಪ್ರಾಮಾಣಿಕತೆ ವ್ಯವಹಾರಕ್ಕೆ ಅಗತ್ಯ: ಪ್ರಮೋದ್‌

08:13 AM Dec 15, 2017 | |

ಉಡುಪಿ: ರಾಷ್ಟ್ರೀಕೃತ ಬ್ಯಾಂಕ್‌ಗಳಿಗೆ ಸಮಾನವಾಗಿ ಸೇವೆ ನೀಡುವ ಶಕ್ತಿ ಸಹಕಾರ ಸಂಘಗಳಿಗೆ ಇದೆ. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ಪಡೆಯುವಾಗ ನೂರಾರು ತೊಂದರೆಗಳು ಎದುರಾಗುತ್ತವೆ. ಆದರೆ ಸಹಕಾರ ಸಂಘಗಳಲ್ಲಿ ಸುಲಭವಾಗಿ ಗ್ರಾಹಕರ ಪರಿಚಯದ ಮೇಲೆ ಸಾಲ ದೊರೆಯುತ್ತದೆ. ಆಡಳಿತ-ಸಿಬಂದಿ-ಸಾಲಗಾರರ ಪ್ರಾಮಾಣಿಕತೆ ಇದ್ದರೆ ದೊಡ್ಡಮಟ್ಟದ ವ್ಯವಹಾರ ನಡೆಸಲು ಸಾಧ್ಯವಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.ಗುರುವಾರ ಅಮ್ಮಣಿ ರಾಮಣ್ಣ ಸಭಾಭವನದಲ್ಲಿ ನಡೆದ ಬಡಗುಬೆಟ್ಟು ಕ್ರೆಡಿಟ್‌ ಕೋ ಆಪರೇಟಿವ್‌ ಸೊಸೈಟಿಯ ಶತಮಾನೋತ್ಸವ ಸಂಭ್ರಮಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

Advertisement

ಶ್ಲಾಘನೀಯ ಸೇವೆ
ಅವಿಭಜಿತ ದ.ಕ. ಜಿಲ್ಲೆ ಬ್ಯಾಂಕ್‌ಗಳ ತವರೂರು. 1969ರಲ್ಲಿ ಬ್ಯಾಂಕ್‌ಗಳ ರಾಷ್ಟ್ರೀಕರಣವಾದಾಗ ದೇಶದಲ್ಲಿ ಅವಿಭಜಿತ ದ.ಕ. ಜಿಲ್ಲೆ 4 ಬ್ಯಾಂಕ್‌ಗಳನ್ನು ನೀಡಿತ್ತು. ಪ್ರಸ್ತುತ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೇರೆ ರಾಜ್ಯದ ಸಿಬಂದಿ ತುಂಬಿರುವುದರಿಂದ ವ್ಯವಹಾರ ಕಷ್ಟವಾಗಿದೆ. ಬಡಗುಬೆಟ್ಟು ಕ್ರೆಡಿಟ್‌ ಕೋ-ಆಪರೇಟಿವ್‌ ಸೊಸೈಟಿಯ 100 ವರ್ಷಗಳಿಂದ ಸೇವೆ ನೀಡುತ್ತಿರುವುದು ಶ್ಲಾಘನೀಯ ಎಂದರು.

ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ ಆಶೀರ್ವಚನ ನೀಡಿದರು. ಪ್ರಸ್ತುತ ದಿನಗಳಲ್ಲಿ ಜನತೆಯಲ್ಲಿ ಪರಸ್ಪರ ಸಹಕಾರದ ಮನೋಭಾವ ಕಡಿಮೆಯಾಗುತ್ತಿದೆ. ಸ್ವಾರ್ಥ ಹೆಚ್ಚಾಗುತ್ತಿದೆ ಆದರೆ ಪರಸ್ಪರ ಸಹಕಾರವಿಲ್ಲದೇ ಒಂದು ಸಂಸ್ಥೆಯನ್ನು ಬೆಳೆಸುವುದು ಸಾಧ್ಯವಿಲ್ಲ. ಸಂಸ್ಥೆಯನ್ನು ಹುಟ್ಟುಹಾಕುವುದು ಸುಲಭ. ಬೆಳೆಸುವುದು ಕಷ್ಟ. ಬಡಗು ಬೆಟ್ಟು ಸಹಕಾರ ಸಂಘ ಪರಸ್ಪರ ಸಹಕಾರದ ಮನೋಭಾವದಿಂದ 100 ಸಂವತ್ಸರಗಳನ್ನು ಪೂರೈಸಿರುವುದು ಸಾಹಸದ ಕಾರ್ಯ ಎಂದರು.

ಉಡುಪಿ ಶೋಕಮಾತ ಇಗರ್ಜಿಯ ಧರ್ಮಗುರು ಫಾ| ವಲೇರಿಯನ್‌ ಮೆಂಡೋನ್ಸ ಶತಮಾನೋತ್ಸವದ ಲೋಗೊ, ವಿಧಾನ ಪರಿಷತ್‌ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ ಶತಮಾನೋತ್ಸವದ ವಿಶೇಷ ಪತ್ರಿಕೆ ಶತಾ ಮೃತವನ್ನು ಬಿಡುಗಡೆಗೊಳಿಸಿದರು. ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನ ಅಧ್ಯಕ್ಷ ಡಾ| ಎಂ.ಎನ್‌. ರಾಜೇಂದ್ರ ಕುಮಾರ್‌ ಸಂಘದ ಪ್ರಾಯೋಜಕತ್ವದಲ್ಲಿ ಸದಸ್ಯರಿಗೆ ನೀಡುವ ಆರೋಗ್ಯ ಕಾರ್ಡ್‌ ಬಿಡುಗಡೆಗೊಳಿಸಿದರು. ಲೊಂಬಾರ್ಡ್‌ ಆರೋಗ್ಯ ಕಾರ್ಡ್‌ ಬಗ್ಗೆ ಲೊಂಬಾರ್ಡ್‌ ಆಸ್ಪತ್ರೆಯ ನಿರ್ದೇಶಕ ಡಾ| ಸುಶೀಲ್‌ ಜತ್ತನ್ನ ಮಾಹಿತಿ ನೀಡಿದರು.

ಅಂಜುಮನ್‌ ಮಸೀದಿಯ ಧರ್ಮಗುರು ಮೌಲಾನಾ ಮಹಮ್ಮದ್‌ ಇನಾಯತುಲ್ಲಾ ರಿಝ್ವಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಕಿಶನ್‌ ಹೆಗ್ಡೆ ಕೊಳ್ಕೆಬೈಲ್‌, ನ್ಯಾಶನಲ್‌ ಕೋ ಆಪರೇಟಿವ್‌ ಡೆವಲಪ್‌ಮೆಂಟ್‌ ಕಾಪೊìರೇಶನ್‌ನ ಮುಖ್ಯ ನಿರ್ದೇಶಕ ಡಾ| ಕೆ.ಟಿ. ಚೆನ್ನಪ್ಪ, ಸಹಕಾರಿ ಸಂಘಗಳ ಉಪನಿಬಂಧಕ ಪ್ರವೀಣ್‌ ಬಿ. ನಾಯಕ್‌, ಶತಮಾನೋತ್ಸವ ಸಮಿತಿಯ ಸಂಚಾಲಕ ಪುರುಷೋತ್ತಮ ಪಿ. ಶೆಟ್ಟಿ, ಗಣೇಶ್‌ ರಾವ್‌, ಮುರಲಿ ಕಡೆಕಾರ್‌ ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸಂಜೀವ ಕಾಂಚನ್‌ ಸ್ವಾಗತಿಸಿ, ಉದ್ಯಾವರ ಶಾಖೆಯ ವ್ಯವಸ್ಥಾಪಕ ಪ್ರವೀಣ್‌ ಕುಮಾರ್‌ ವಂದಿಸಿದರು. ಸತೀಶ್‌ ಶೆಟ್ಟಿ ನಿರೂಪಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next